ಹಾವೇರಿ ಅಭಿವೃದ್ಧಿ: ಮತ್ತೆ ಮೂಡಿದ ನಿರೀಕ್ಷೆ
ಕನ್ನಡಪ್ರಭ ವಾರ್ತೆ, ಹಾವೇರಿ, ಆ. 27
ಮನೆಗೆ ಯಜಮಾನ ಇಲ್ಲದಂತಾಗಿದ್ದ ನಗರಸಭೆಗೆ ರಾಜ್ಯ ಸರ್ಕಾರ ಮೀಸಲಾತಿ ಪ್ರಕಟಿಸಿದ್ದರ ಹಿನ್ನೆಲೆಯಲ್ಲಿ ಮೂಲ ಸೌಕರ್ಯಕ್ಕಾಗಿ ಪರದಾಡುತ್ತಿದ್ದ ಹಾವೇರಿ ಜನರಲ್ಲಿ ಸ್ವಲ್ಪ ಮಟ್ಟಿಗೆ ನೆಮ್ಮದಿ ಮೂಡಿಸಿದೆ.
ಸ್ಥಳೀಯ ಸಂಸ್ಥೆಗೆ ಚುನಾವಣೆಗಳು ನಡೆದು ಏಳು ತಿಂಗಳುಗಳೇ ಗತಿಸುತ್ತ ಬಂದಿದ್ದರೂ ಜನಪ್ರತಿನಿಧಿಗಳಿಗೆ ಅಧಿಕಾರ ಚಲಾಯಿಸಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ಜನತೆಯ ಆಶೋತ್ತರಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ ಎಂಬ ನೋವು ಅವರನ್ನೂ ಕಾಡಿದ್ದು ಸುಳ್ಳಲ್ಲ.
ನೀತಿ ಸಂಹಿತೆ ಅಡ್ಡಿ : ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸರ್ಕಾರ ಮೀಸಲಾತಿ ಪ್ರಕಟಿಸಿ ಇನ್ನೇನು ಆಯ್ಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂಬ ನಿರೀಕ್ಷೆಯಲ್ಲಿದ್ದಾಗಲೇ, ಶಿವರಾಜ ಸಜ್ಜನರ ಅವರ ರಾಜಿನಾಮೆಯಿಂದಾಗಿ ತೆರವಾಗಿದ್ದ ವಿಧಾನಪರಿಷತ್ ಚುನಾವಣೆ ದಿನಾಂಕ ಘೋಷಣೆಯಾಗುವ ಮೂಲಕ ನೀತಿ ಸಂಹಿತೆ ಜಾರಿಯಾಗಿತ್ತು. ಇದು ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಮತ್ತೆ ತಡೆಯನ್ನುಂಟು ಮಾಡಿತ್ತು.
ಇದೀಗ ಈ ಎಲ್ಲ ಪ್ರಕ್ರಿಯೆಗಳಿಗೆ ತೆರೆ ಬಿದ್ದಿದ್ದು ನಿರೀಕ್ಷೆಗಳು ಸಾಕಾರಗೊಳ್ಳುವ ಸಮಯ ಬಂದಿದೆ ಎನ್ನುತ್ತಿದ್ದಾರೆ ಜನಪ್ರತಿನಿಧಿಗಳು, ಸಾರ್ವಜನಿಕರು.
ನೂರೆಂಟು ಸಮಸ್ಯೆ : ಕುಡಿಯುವ ನೀರು, ಬೀದಿ ದೀಪ, ಬಹುತೇಕ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಬಾಯಿ ತೆರೆದುಕೊಂಡಿರುವ ತಗ್ಗುದಿನ್ನೆಗಳು, ಅಭಿವೃದ್ಧಿ ಕಾಮಗಾರಿಗಳಂತೂ ಬಹುತೇಕ ಸ್ಥಗಿತಗೊಂಡಂತಾಗಿವೆ. ಈ ಎಲ್ಲ ಸಮಸ್ಯೆಗಳಿಂದ ಆಗುತ್ತಿರುವ ಅನಾನುಕೂಲತೆಗಳ ಬಗ್ಗೆ ಶ್ರೀಸಾಮಾನ್ಯರು ಅನೇಕ ಬಾರಿ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬ ಸಾರ್ವತ್ರಿಕ ಆರೋಪ ವ್ಯಾಪಕವಾಗಿ ಕೇಳಿ ಬರುತ್ತಿದೆ.
ಯುಜಿಡಿ ಕಾಮಗಾರಿ ಪೂರ್ಣಗೊಂಡು ತಿಂಗಳುಗಳೇ ಕಳೆಯಬೇಕಾಗಿತ್ತು. ಆದರೆ, ಅಧಿಕಾರಿಗಳ ದೂರದೃಷ್ಟಿಯ ಕೊರತೆಯಿಂದಾಗಿ ಈ ಕಾಮಗಾರಿ ಕುಂಟುತ್ತ ಸಾಗಿದೆ. ಯುಜಿಡಿ ಅಳವಡಿಕೆಗಾಗಿ ಅಗೆಯಲಾಗಿದ್ದ ತಗ್ಗುಗಳಲ್ಲಿ ಕೆಲ ಪ್ರದೇಶಗಳಲ್ಲಿ ಮಣ್ಣು ಹಾಗೂ ಕಲ್ಲುಗಳಿಂದ ಮುಚ್ಚುವ ಕಾರ್ಯ ನಡೆದಿರುವುದು ಕಂಡು ಬರುತ್ತಿದೆಯಾದರೂ ಅಂತಹ ಕೆಲಸ ಸ್ವಲ್ಪವೂ ಸರಿಯಾಗಿಲ್ಲ ಎನ್ನಲಾಗುತ್ತಿದೆ.
ಹಿಡಿದು-ಬಿಟ್ಟಂತೆ ಮಳೆಯಾಗುತ್ತಿರುವುದರಿಂದ ಕೆಲ ತೆಗ್ಗುಗಳನ್ನು ಮುಚ್ಚಲು ಕೈಗೊಳ್ಳಲಾಗಿದ್ದ ತೇಪೆ ಹಚ್ಚುವ ಕೆಲಸವೂ ಸಂಪೂರ್ಣ ಹದಗೆಟ್ಟು ಹೋಗಿರುವುದು ಕಂಡು ಬರುತ್ತಿದೆ. ಇದರಿಂದಾಗಿ ವಾಹನ ಸವಾರರಿಗೆ ಮಾತ್ರವಲ್ಲದೇ ಪಾದಚಾರಿಗಳಿಗೂ ಈ ರಸ್ತೆಗಳು ಸಾಕಷ್ಟು ಕಿರಿಕಿರಿಯನ್ನುಂಟು ಮಾಡಿವೆ ಎಂದರೆ ತಪ್ಪಾಗಲಾರದು.
ತಪ್ಪದ ಹಾಹಾಕಾರ : ಪ್ರಸಕ್ತ ವರ್ಷ ಜಿಲ್ಲೆಯಾದ್ಯಂತ ಸಾಕಷ್ಟು ಮಳೆಯಾಗಿದೆ. ಹಾವೇರಿ ಜಿಲ್ಲೆಯಲ್ಲಿ ಹರಿಯುವ ನಾಲ್ಕು ನದಿಗಳು ಮೈತುಂಬಿ ಹರಿಯತ್ತಿವೆ. ಆದಾಗ್ಯೂ, ಜಿಲ್ಲೆಯ ಜನರು ಕುಡಿಯುವ ನೀರಿಗಾಗಿ ಪರಿತಪಿಸುವಂತಹ ಸನ್ನಿವೇಶ ಕಂಡು ಬರುತ್ತಿದೆ. ಕೊಳವೆ ಬಾವಿಗಳು ಸಾಕಷ್ಟು ರಿಚಾರ್ಜ್ ಆಗಿವೆ.
ಹಾವೇರಿ ತಾಲೂಕಿನ ಶೇ. 30ರಷ್ಟು ಪ್ರದೇಶಗಳು ಈಗಲೂ ಸಂಪೂರ್ಣ ಕೊಳವೆ ಬಾವಿಯನ್ನೇ ಆಶ್ರಯಿಸಿವೆ. ಇಂತಹ ಪ್ರದೇಶಗಳಲ್ಲಿನ ಕೊಳವೆ ಬಾವಿಗಳು ದುರಸ್ತಿಗೀಡಾಗಿ ತಿಂಗಳುಗಳೇ ಗತಿಸಿವೆ. ಆದರೆ, ಈ ಬಗ್ಗೆ ಅಧಿಕಾರಿಗಳು ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ ಎಂದು ಬಸವಣೆಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶೌಚಾಲಯಗಳೇ ಇಲ್ಲ : ಹಾವೇರಿ ಜಿಲ್ಲಾ ಕೇಂದ್ರದಲ್ಲಿ ಎಲ್ಲಿಯೂ ಸಾರ್ವಜನಿಕ ಶೌಚಾಲಯಗಳು ಕಂಡು ಬರುವುದಿಲ್ಲ. ಇತ್ತೀಚಿಗಷ್ಟೇ ನಗರಸಭೆ ಎನ್ಜಿಓ ಸಹಾಯದೊಂದಿಗೆ ಸಾರ್ವಜನಿಕ ಶೌಚಾಲಯಗಳ ನಿರ್ಮಾಣ ಕಾರ್ಯಕ್ಕೆ ಕೊಂಚ ಮನಸ್ಸು ಮಾಡಿತ್ತು. ಆದರೆ, ಇದೇ ಸಂದರ್ಭದಲ್ಲಿ ಪರಿಷತ್ ಚುನಾವಣೆಗಳು ಘೋಷಣೆಯಾಗಿದ್ದರಿಂದ ಈ ಪ್ರಕ್ರಿಯೆ ಮತ್ತೆ ಕಡತದಲ್ಲೇ ಉಳಿದುಕೊಳ್ಳುವಂತಾಗಿತ್ತು.
ಆಶೋತ್ತರ ಪೂರೈಸಬೇಕಿದೆ : ನಗರಸಭೆ ಆಡಳಿತ ಚುಕ್ಕಾಣಿ ಯಾವುದೇ ಪಕ್ಷದವರೂ ಹಿಡಿದರು ಪರವಾಗಿಲ್ಲ. ಜನರಿಗೆ ಬೇಕಾದ ಅವಶ್ಯಕ ಸೌಲಭ್ಯಗಳನ್ನು ಒದಗಿಸಿಕೊಡಲು ಆಯಾ ಪಕ್ಷಗಳು ಹಾಗೂ ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕಿದೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.
ತಾಲೂಕಿನಾದ್ಯಂತ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ನಗರಸಭೆ ಅಧ್ಯಕ್ಷರಾಗಿ ಆಯ್ಕೆಯಾಗುವವರು ಕ್ರಮಕೈಗೊಳ್ಳಬೇಕಲ್ಲದೆ, ಕುಡಿಯುವ ನೀರು, ರಸ್ತೆ ಹಾಗೂ ಬೀದಿದೀಪಗಳ ಸಮಸ್ಯೆ ನಿವಾರಣೆಗೆ ಆದ್ಯತೆ ಮೇಲೆ ಕ್ರಮಕೈಗೊಳ್ಳಬೇಕಿದೆ.
ಅವಿಭಜಿತ ಧಾರವಾಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ನಡೆದ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ನ ನಾಗರಾಜ ಛಬ್ಬಿ ಆಯ್ಕೆಯಾಗಿದ್ದಾರೆ. ಅಲ್ಲದೇ, ರಾಜ್ಯದ ಆಡಳಿತ ಚುಕ್ಕಾಣಿಯೂ ಕಾಂಗ್ರೆಸ್ ಕೈಯಲ್ಲೇ ಇದೆ.
ಛಬ್ಬಿ ಅವರ ನೇತೃತ್ವದಲ್ಲಿ ಹಾವೇರಿ ನಗರಸಭೆ ಸೇರಿದಂತೆ ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಭರಪೂರ ಅನುದಾನ ಹರಿದು ಬರುವ ಮೂಲಕ ಹಾವೇರಿ ಮಾದರಿ ಜಿಲ್ಲೆಯಾಗಲಿ ಎಂಬುದೇ ಸಾರ್ವಜನಿಕರ ಒತ್ತಾಸೆಯಾಗಿದ್ದು ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹೇಗೆ ಸ್ಪಂದಿಸಲಿದ್ದಾರೆ ಎಂಬುದು ಕಾದು ನೋಡಬೇಕಿದೆ.
ಬಿ.ಕೆ. ಮಹೇಂದ್ರ