ಹಾನಗಲ್ಲ: ಕ್ಷುಲ್ಲಕ ಜಗಳಕ್ಕೆ ಓರ್ವ ಬಲಿ
ಹಾನಗಲ್ಲ: ವ್ಯಕ್ತಿಗಳಿಬ್ಬರ ನಡುವೆ ನಡೆದ ಮಾತಿನ ವಾಗ್ವಾದ ಗಂಭೀರ ಆರೋಪ-ಪ್ರತ್ಯಾರೋಪಗಳಿಗೆ ತಿರುಗಿ ವ್ಯಕ್ತಿಯೊಬ್ಬನ ಸಾವಿನೊಂದಿಗೆ ಅಂತ್ಯ ಕಂಡ ಪ್ರಕರಣ ಹಾನಗಲ್ಲಿನಲ್ಲಿ ಮಂಗಳವಾರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಂಗಳವಾರ ಸಂಜೆ ಹೊತ್ತಿಗೆ ವ್ಯಕ್ತಿಗಳಿಬ್ಬರ ನಡುವೆ ಆರಂಭವಾದ ಮಾತಿನ ಚಕಮಕಿ ದೀರ್ಘ ವಾಗ್ವಾದಕ್ಕೆ ಕಾರಣವಾಯಿತು. ನಂತರ ಹಲವರ ನಡುವೆ ಚರ್ಚೆ ವಾದ ನಡೆದು ಕೈಕೈ ಮಿಲಾಯಿಸಿ ಹೊಡೆದಾಟ ನಡೆದು ಮಂಜುನಾಥ ರಾಮಚಂದ್ರ ಸಿಂಗಳಾಪುರ (19) ಎಂಬ ವ್ಯಕ್ತಿ ಮೃತಪಟ್ಟಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಸಹೋದರಿ ಗೌರಿ ಹಾನಗಲ್ಲ ಪೊಲೀಸ್ ಠಾಣೆಗೆ ನೀಡಿದ ದೂರಿನನ್ವಯ ಈಗಾಗಲೇ ರಾಜು ಮೂಲಿಮನಿ, ಪರಶುರಾಮ ಮೂಲಿಮನಿ, ನಾಗರಾಜ ಹಿರೇಗೌಡರ ಎಂಬುವವರನ್ನು ಬಂಧಿಸಲಾಗಿದೆ. ಮತ್ತೋರ್ವ ಆರೋಪಿ ತೀರ್ಥರಾಜ ಎಂಬಾತನ ಶೋಧ ನಡೆಸಲಾಗಿದೆ ಎಂದು ಹಾನಗಲ್ಲ ಪೊಲೀಸ್ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.