ಕ್ರೀಡೆಯಲ್ಲಿ ಅನ್ಯಾಯ: ಬೀಗ ಜಡಿದು ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಆ. 29
ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಕಬ್ಬಡ್ಡಿಯಲ್ಲಿ ಜಯಶಾಲಿಯಾದರು ತಾಲೂಕು ಮಟ್ಟದಲ್ಲಿ ಕಬಡ್ಡಿ ಆಟದಿಂದ ಹೊರಗುಳಿಯುವಂತೆ ಮಾಡಿದ್ದಕ್ಕಾಗಿ ಶಾಲೆಗೆ ಬೀಗ ಜಡಿದು ಪ್ರತಿಭಟನೆಗೆಳಿದ ಘಟನೆ ತಾಲೂಕಿನ ಬನ್ನೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಜರುಗಿದೆ.
ಘಟನೆ ವಿವರ: ಬನ್ನೂರ ಕ್ಲಸ್ಟರ್ ಮಟ್ಟದ ಪಂದ್ಯಾವಳಿಯನ್ನು ಬನ್ನಿಕೊಪ್ಪ ಗ್ರಾಮದಲ್ಲಿ ಜರುಗಿತ್ತು. ಆ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ನೀಡಿದ ತಪ್ಪು ನಿರ್ಣಯ ವಿದ್ಯಾರ್ಥಿಗಳ ಅಕ್ರೋಶಕ್ಕೆ ಕಾರಣವಾಗಿತ್ತು. ಅದನ್ನು ಸರಿಪಡಿಸಲು ವಿದ್ಯಾರ್ಥಿಗಳನ್ನು ಮಾತ್ರ ಶಿಗ್ಗಾಂವಿಯ ಜೆಎಂಜಿ ಶಾಲೆಯಲ್ಲಿ ಕಬಡ್ಡಿ ಪಂದ್ಯಾವಳಿ ನಡೆಸಿದ್ದು, ಅದರಲ್ಲಿ ಬನ್ನೂರ ಗ್ರಾಮದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಜಯಶಾಲಿಯಾಗಿದ್ದರು.
ಶಾಲೆಗೆ ಬೀಗ: ತಡಸ ಗ್ರಾಮದಲ್ಲಿ ಜರುಗಿದ ತಾಲೂಕು ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಬನ್ನೂರ ಗ್ರಾಮದ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ವಿಜಯಶಾಲಿಯಾದ ವಿದ್ಯಾರ್ಥಿಗಳಿಗೆ ಕಬಡ್ಡಿ ಆಟದಲ್ಲಿ ಬನ್ನೂರ ಗ್ರಾಮದ ವಿದ್ಯಾರ್ಥಿಗಳನ್ನು ತೆಗೆಯಲಾಗಿತ್ತು. ಇದರ ವಿರುದ್ಧ ಪ್ರತಿಭಟಿಸಿದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಕ್ರೀಡೆಯಲ್ಲಿ ಜಯಶಾಲಿಯಾದವರನ್ನು ಆಟದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಿಲ್ಲ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಖೋ ಖೋ, ಕಬಡ್ಡಿ ಆಟದಲ್ಲಿ ಪಾಲ್ಗೊಳ್ಳಲಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೂಡಾ ಇದರ ಕುರಿತು ಯಾವುದೇ ಕ್ರಮ ಜರುಗಿಸಲಿಲ್ಲ. ಆದ್ದರಿಂದ ಎಸ್ಡಿಎಂಸಿ ಹಾಗೂ ಗ್ರಾಮಸ್ಥರು ಸೇರಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಬೀಗ ಜಡಿದು ಪ್ರತಿಭಟನೆಗೆ ಮುಂದಾಗಿದ್ದಾರೆ.
ಗ್ರಾಮಸ್ಥರ ಪಟ್ಟು: ಬನ್ನೂರ ಗ್ರಾಮದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಆದ ಅನ್ಯಾಯ ಸರಿಪಡಿಸಬೇಕು. ಅಲ್ಲಿಯವರೆಗೆ ಶಾಲೆಯ ಬೀಗ ತೆರೆವುಗೊಳಿಸುವದಿಲ್ಲ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸುನೀಲ ಶಿದ್ದಣ್ಣವರ, ಟಾಕನಗೌಡ ಪಾಟೀಲ, ವೀರನಗೌಡ್ರ ಹೊನ್ನಾಗೌಡ್ರ, ಶಿವಾನಂದ ಹಿರೇಮಠ, ದೇವೀಂದ್ರಪ್ಪ ಬಡಿಗೇರ, ಶಂಕರಗೌಡ್ರ ಪೊಲೀಸ್ಗೌಡ್ರ, ಗುರುಬಸಪ್ಪ ಹಡಪದ, ಮಹದೇವಪ್ಪ ಶಿದ್ದಣ್ಣವರ ಸೇರಿದಂತೆ ಗ್ರಾಮದ ಯುವಕರು, ಶಿಕ್ಷಣ ಪ್ರೇಮಿಗಳು ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸ್ಥಳಕ್ಕೆ ಆಗಮಿಸಿದ ಪೋಲೀಸ್ ಸರ್ಕಲ್ ಇನ್ಸ್ಸ್ಪೆಕ್ಟರ್ ಬಿ.ಬಿ. ಪಾಟೀಲ, ಸುರೇಶ ಕುಂಬಾರ, ತಾಲೂಕು ಶಿಕ್ಷಣ ಸಮಯನ್ವಯಾಧಿಕಾರಿ ಸಿ.ಪಿ. ಮೂಲಿಮನಿ, ಜಡಿದ ಬೀಗ ತೆಗೆಸಲು ಗ್ರಾಮಸ್ಥರನ್ನು ಮನವೊಲಿಸಿದರೂ ಬೀಗ ತೆಗೆಯಲಿಲ್ಲ. ಪೊಲೀಸ್ ಠಾಣೆಯಲ್ಲಿ ತೀರ್ಮಾನಿಸುವುದಾಗಿ ತಿಳಿಸಿದರು. ತಕ್ಷಣ ಬೀಗ ತೆಗೆದು ಬನ್ನೂರು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನ್ಯಾಯ ದೊರಕುವುದೆ ಕಾದು ನೋಡುವಂತಾಗಿದೆ.