ಗೃಹ ಪ್ರವೇಶ: ದೊಡ್ಡಾಟ ಪ್ರಸಂಗ
ಶಿಗ್ಗಾಂವಿ: ನೂತನ ಗೃಹ ಪ್ರವೇಶವನ್ನು ಪೂಜೆ-ಪುನಸ್ಕಾರಗಳಿಂದ ಆಚರಿಸುವುದು ಎಲ್ಲರೂ ಮಾಡುತ್ತಿರುವುದು ಸರ್ವೆ ಸಾಮಾನ್ಯ. ಆದರೆ, ತಾಲೂಕಿನ ಕ್ಯಾಲಕೊಂಡ ಗ್ರಾಮದಲ್ಲಿ ಜಾನಪದ ಕಲಾವಿದ ದೊಡ್ಡಾಟದ ಕೆಲ ಪ್ರಸಂಗಗಳನ್ನು ನಡೆಸುವ ಮೂಲಕ ಗೃಹ ಪ್ರವೇಶಕ್ಕೆ ಚಾಲನೆ ನೀಡಿದರು.
ಬಸವರಾಜ ಶಿಗ್ಗಾಂವಿ ಅವರು ತಮ್ಮ ಸ್ವಂತ ಊರಾದ ಕ್ಯಾಲಕೊಂಡ ಗ್ರಾಮದಲ್ಲಿ ಕಟ್ಟಿಸಿದ ನೂತನ ಮನೆಯ ಗೃಹ ಪ್ರವೇಶದ ಸಂದರ್ಭದಲ್ಲಿ ಎಂ.ಎಸ್. ಮಾಳವಾಡವರು ರಚಿಸಿ ನಿರ್ಧರಿಸಿದ ವೀರರಾಣಿ ಕಿತ್ತೂರ ಚನ್ನಮ್ಮ ಎಂಬ ದೊಡ್ಡಾಟ ಪ್ರದರ್ಶನ ಮಾಡುವುದರ ಮೂಲಕ ಗೃಹ ಪ್ರವೇಶ ಮಾಡಿದ್ದು ವಿಶೇಷವಾಗಿತ್ತು.
ಗೃಹ ಶಾಂತಿಗೆ ಸಂಬಂಧಪಟ್ಟ ಎಲ್ಲ ರೀತಿಯ ವಿಧಿವತ್ತಾದ ಕಾರ್ಯಕ್ರಮಗಳು ಮುಗಿದ ನಂತರ ಇಂಗಳಗಿ ಗ್ರಾಮ ರಂಗದ ಗೆಳೆಯರು ಪ್ರದರ್ಶಿದ ದೊಡ್ಡಾಟ ನೊಡಿದ ಬಂದು ಬಳಗದವರು, ಸ್ನೇಹಿತರು, ಗ್ರಾಮದ ಗುರು-ಹಿರಿಯರು, ಪ್ರತಿಭಾವಂತ ಜಾನಪದ ಕಲಾವಿದನ ನೂತನ ಗೃಹಪ್ರವೇಶದ ಸಂದರ್ಭದಲ್ಲಿ ದೊಡ್ಡಾಟ ಪ್ರದರ್ಶನ ಮಾಡಿದ್ದು ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು.
ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ನಡೆಯುವ ಅನೇಕ ಕಾರ್ಯಕ್ರಮಗಳು ಹಾಗೂ ಶುಭ ಸಮಾರಂಭ ಹಬ್ಬ ಹರಿದಿನಗಳ ಸಂಧರ್ಭದಲ್ಲಿ ವಿವಿಧ ಕಲಾ ಪ್ರಕಾರಗಳ ಪ್ರದರ್ಶನ ಮಾಡಲು ಮುಂದಾದರೆ ನಶಿಸುತ್ತಿರುವ ನಮ್ಮ ಅನೇಕ ಜಾನಪದ ಕಲಾ ಪ್ರಕಾರವನ್ನು ಉಳಿಸಿ ಬೆಳೆಸಬಹುದು ಎಂಬ ಚಿಂತನೆಗೆ ಜನರನ್ನು ತೊಡಗಿಸುವತ್ತ ಕಾರ್ಯಕ್ರಮ ಯಶಸ್ವಿಯಾಯಿತು.