ಡಿಜಿವೈನಿಂದ ಸಮಾಜದ ಕನಸು ನನಸು
ಹಾನಗಲ್ಲ: ಬಡತನ ಹಾಗೂ ದಾರಿದ್ರ್ಯಗಳಿಗೆ ತಿಲಾಂಜಲಿ ಹಾಡಿ ಸುಸಂಸ್ಕೃತ ಸಮಾಜ ನಿರ್ಮಾಣದ ಕನಸು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳಿಂದ ಸಾಕಾರಗೊಳ್ಳುತ್ತಿದೆ ಎಂದು ಬಮ್ಮನಹಳ್ಳಿಯ ವಿರಕ್ತಮಠಾಧೀಶ ಶಿವಯೋಗೀಶ್ವರ ಸ್ವಾಮೀಜಿ ನುಡಿದರು.
ಹಾನಗಲ್ಲ ತಾಲೂಕಿನ ಬಮ್ಮನಹಳ್ಳಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಆಯೋಜಿಸಿದ್ದ ಬಮ್ಮನಹಳ್ಳಿ ವಲಯ ಮಟ್ಟದ ಕೃಷಿ ವಿಚಾರ ಸಂಕಿರಣ, ಒಕ್ಕೂಟದ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮಾಭಿವೃದ್ಧಿ ಕಾರ್ಯ ಶ್ಲಾಘನೀಯ: ಗ್ರಾಮೀಣ ಹಾಗೂ ಬಡವರಿಂದ ಕೂಡಿದ ಭಾರತ ದೇಶವನ್ನು ನೆಮ್ಮದಿ ರಾಷ್ಟ್ರವನ್ನಾಗಿಸುವ ಕನಸು ಹೊಂದಿದ್ದ ಗಾಂಧೀಜಿ ಕನಸು ನನಸಾಗಿಸಲು ಧರ್ಮಸ್ಥಳದ ಧರ್ಮಾಧಿಕಾರಿಗಳ ನೇತೃತ್ವದಲ್ಲಿ ರಾಜ್ಯಾದ್ಯಂತ ನಡೆಯುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಚಟುವಟಿಕೆಗಳು ಪೂರಕವಾಗಿವೆ. ನಮ್ಮ ಸಂಸ್ಕೃತಿ ಉಳಿವಿನ ಜತೆ ದುಡಿದು ಪ್ರಾಮಾಣಿವಾಗಿ ಗಳಿಸಿ ಬದುಕುವುದನ್ನು, ದುಡಿಮೆಗಾಗಿ ಹೊಸ ಹೊಸ ಯೋಜನೆಗಳನ್ನು ವಿನೂತನ ಕಾರ್ಯಕ್ರಮಗಳನ್ನು ರೂಪಿಸಿ ಮಾರ್ಗದರ್ಶನ ಮಾಡುತ್ತಿರುವುದು ಅಚ್ಚುಮೆಚ್ಚಿನ ಕಾರ್ಯ ಎಂದರು.
ಸಮಾಜಮುಖಿ ಕಾರ್ಯ ಮಾದರಿ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಸದಸ್ಯ ಪದ್ಮನಾಭ ಕುಂದಾಪುರ ಮಾತನಾಡಿ, ಜಗತ್ತು ಬದಲಾಗುತ್ತಿದೆ. ಮಹಿಳೆ-ಪುರುಷರು ಎಂಬ ಭೇದ ಬದಲಾಗಿದೆ. ಈಗ ಪುರುಷರಷ್ಟೇ ಸಮಾನವಾಗಿ ಮಹಿಳೆ ದುಡಿಯುತ್ತಿದ್ದಾಳೆ. ಮೂಢನಂಬಿಕೆಗಳಿಂದ ದೂರವಾಗಿ, ಸುಂದರ ಸಮಾಜ ಕುಟುಂಬ ಕಟ್ಟಲು ಮುಂದಾಗಬೇಕು. ಮಹಿಳೆ ಅಬಲೆ ಅಲ್ಲ ಎಂಬುದು ಕೂಡ ಈಗ ಸಾಬೀತಾಗುತ್ತಿದೆ. ಮಹಿಳೆಯರಿಗೆ ಸ್ವ-ಸಹಾಯ ಸಂಘಗಳಿಂದ ಸ್ವ-ಉದ್ಯೋಗಾವಕಾಶಗಳು ಲಭ್ಯವಾಗುತ್ತಿವೆ. ಕೇವಲ ತಮ್ಮ ಮನೆ ಮಾತ್ರವಲ್ಲ ಇಡೀ ಸಮಾಜ ಸುಧಾರಣೆಗೆ ಸಾಮೂಹಿಕ ಯತ್ನಬೇಕು. ನಾಳಿನ ಸುಂದರ ಹಾಗೂ ಸಹಬಾಳ್ವೆಯ ನಾಡು ನಮ್ಮದಾಗಲು ಎಲ್ಲರೂ ಒಂದಾಗಿ ಶ್ರಮಿಸಬೇಕಾಗಿದೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಸಮಾಜಮುಖಿ ಚಿಂತನೆ ಇಡೀ ದೇಶಕ್ಕೆ ಮಾದರಿ ಎಂದರು.
ಈ ಸಂದರ್ಭದಲ್ಲಿ ಮಣ್ಣು ಮತ್ತು ನೀರಿನ ಸದ್ಬಳಕೆ ಕುರಿತು ಕೃಷಿ ಇಲಾಖೆ ನಿವೃತ್ತ ಅಧಿಕಾರಿ ಡಿ.ಎಸ್. ಪಾಟೀಲ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಹಾನಗಲ್ಲ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಎನ್.ಎಫ್. ಕಮ್ಮಾರ, ಬಮ್ಮನಹಳ್ಳಿ ಗ್ರಾಪಂ ಅಧ್ಯಕ್ಷ ಘೋಡುಸಾಬ ಹನಕನಹಳ್ಳಿ, ಧಾರವಾಡ ಪ್ರಾದೇಶಿಕ ಕಚೇರಿ ಯೋಜನಾಧಿಕಾರಿ ಸುರೇಂದ್ರಕುಮಾರ, ತಾಲೂಕು ತೋಟಗಾರಿಕಾ ಅಧಿಕಾರಿ ರಾಮಸ್ವಾಮಿ, ತಾಪಂ ಸದಸ್ಯೆ ಮಂಜುಳಾ ಕಾಮನಹಳ್ಳಿ, ಗ್ರಾಪಂ ಉಪಾಧ್ಯಕ್ಷೆ ಶಕುಂತಲಾ ಉಡಗಣಿ ಉಪಸ್ಥಿತರಿದ್ದರು.
ಪಾರ್ವತಿ ಪಾಟೀಲ ಪ್ರಾರ್ಥಿಸಿದರು. ತಾಲೂಕು ಹೈನುಗಾರಿಕಾ ಅಧಿಕಾರಿ ಯಲ್ಲಪ್ಪ ಹೊಸಮನಿ ಸ್ವಾಗತಿಸಿದರು.