ಶಿಗ್ಗಾಂವಿ: ಅಂಬೇಡ್ಕರ್ ಪುತ್ಥಳಿ ಸ್ಥಾಪನೆಗೆ ದಲಿತ ಮುಖಂಡರ ನಿರ್ಧಾರ
ಶಿಗ್ಗಾಂವಿ: ನಗರದ ಟೆಂಪೋ ಸ್ಟ್ಯಾಂಡ್ ವೃತ್ತದಲ್ಲಿ ಭಾರತ ರತ್ನ ಡಾ ಬಾಬಾಸಾಹೇಬ ಅಂಬೇಡ್ಕರ ಪುತ್ಥಳಿ ಸ್ಥಾಪಿಸಬೇಕೆಂದು ಎಲ್ಲ ದಲಿತ ನಾಯಕರು ಚರ್ಚೆ ಮಾಡಿ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ನಿರ್ಧರಿಸಲಾಯಿತು. ಪುರಸಭೆ ಮುಖ್ಯಾಧಿಕಾರಿಗಳು ಜಿಲ್ಲಾಧಿಕಾರಿ ಪರವಾಣಿಗೆಗೆ ಕಳುಹಿಸಿದ್ದೇವೆ ಎಂದು ಹಾರಿಕೆ ಉತ್ತರ ನೀಡಿ ಮೂರ್ತಿ ಸ್ಥಾಪಿಸದೇ ವಿಳಂಬ ಮಾಡುತ್ತಿದ್ದಾರೆ. ಈ ಕುರಿತು ಹಲವಾರು ಹೋರಾಟಗಳು ನಡೆದಿವೆ. ಹಿಂದಿನ ಉಪ ವಿಭಾಗಾಧಿಕಾರಿ ಶೀಘ್ರ ಪ್ರತಿಷ್ಠಾಪನೆ ಮಾಡಲಿಕ್ಕೆ ಸ್ಥಳ ಮಂಜೂರಾತಿ ಕೊಡುತ್ತೇವೆ ಎಂದು ಹೇಳಿ ಕ್ರಮಕೈಗೊಂಡಿರುವುದಿಲ್ಲ ಎಂದು ತಾಲೂಕು ಅಂಬೇಡ್ಕರ ಯುವಕ ಸಂಘದ ಅಧ್ಯಕ್ಷ ಹನುಮಂತ ಎನ್. ಬಂಡಿವಡ್ಡರ ಆಗ್ರಹಿಸಿದ್ದಾರೆ. ಹಿಂದೆ ಶಿಗ್ಗಾಂವಿಯ ತಹಸೀಲ್ದಾರ್ ಕಚೇರಿಯಲ್ಲಿ ಸಭೆ ಕರೆದು ಒಂದು ವರ್ಷದ ಒಳಗೆ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತದೆ ಎಂಬ ಭರವಸೆ ಕೇಳಿ ಬಂದವು. ಸಭೆಯಲ್ಲಿ ತೀರ್ಮಾನಿಸಿದಂತೆ ಮೂರ್ತಿ ಪ್ರತಿಷ್ಠಾಪನೆ ಮಾಡಲು ಸ್ಥಳ ಮಂಜೂರು ಮಾಡಿರುವುದಿಲ್ಲ. ಅಧಿಕಾರಿಗಳಿಗೆ ಮನವಿ ಕೊಟ್ಟರೂ ಯಾವುದೇ ಪ್ರಯೋಜನೆಯಾಗಿಲ್ಲ. ಆ ಕಾರಣದಿಂದ ಅಂಬೇಡ್ಕರ ಪುತ್ಥಳಿ ಸ್ಥಾಪಿಸಲು ಸರ್ಕಾರದದಿಂದ ಸ್ಥಳ ಮಂಜೂರಾತಿ ಮಾಡಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ದಲಿತ ಸಂಘಟಣೆಗಳಿಂದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.