ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಗುಣಮಟ್ಟ ಶಿಕ್ಷಣಕ್ಕೆ ಬದ್ಧತೆಯಿಂದ ಕಾರ್ಯನಿರ್ವಹಿಸಿ

Vishwanath S
Updated On : 2 Dec 2013, 12:00 pm

ಕನ್ನಡಪ್ರಭ ವಾರ್ತೆ, ಹಾವೇರಿ, ಡಿ. 1
ಗುಣಮಟ್ಟ ಶಿಕ್ಷಣ ನೀಡುವಲ್ಲಿ ಗ್ರೂಪ್ ಬಿ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ತಲೆ ಮೇಲೆ ಇಟ್ಟುಕೊಳ್ಳದೇ ಎದೆ ಮೇಲೆ ಇಟ್ಟುಕೊಂಡು ಆತ್ಮ ಒಪ್ಪುವಂತೆ ಬದ್ಧತೆಯಿಂದ ಕೆಲಸ ನಿರ್ವಹಿಸಿ ಎಂದು ಕರ್ನಾಟಕ ರಾಜ್ಯ ಬಿ ವೃಂದದ ಶಿಕ್ಷಣಾಧಿಕಾರಿಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಜಿ.ಎಂ. ಮುಂದಿನಮನಿ ಕರೆ ನೀಡಿದರು.
ನಗರದ ಪುರಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಂತರ ಸಭೆಯಲ್ಲಿ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಗೊಳಿಸಲು ನೂರು ದಿನಗಳ ಕ್ರಿಯಾಯೋಜನೆ ಮಾಡಿ ವಿಷಯ ಶಿಕ್ಷಕರು ಸಂಪೂರ್ಣ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ವಿಷಯ ಶಿಕ್ಷಕರಿಗೆ ದತ್ತು ನೀಡಿ ಪ್ರತಿ ಮಗುವಿಗೆ ಪ್ರೇರಣೆ ನೀಡಬೇಕು.
ವಿಜ್ಞಾನ, ಗಣಿತ ವಿಷಯಗಳ ಸಂಭವನೀಯ ಸೂತ್ರಗಳು ಸಮೀಕರಣ ಚಿತ್ರಗಳನ್ನ ದಿನಂಪ್ರತಿ ರೂಢಿಸುವುದು, ಪಾಲಕರಿಗೆ ಪ್ರೇರಣಾ ಪತ್ರ ಬರೆದು ಜಾಗೃತಿ ಮೂಡಿಸುವುದು, 5 ವರ್ಷಗಳ ಪ್ರಶ್ನೆ ಉತ್ತರ ಬರೆಸುವುದು, ಸರಣಿ ಪರೀಕ್ಷೆ ಏರ್ಪಡಿಸುವುದು, ಇಂಗ್ಲಿಷ್ ಭಾಷೆ ಉತ್ತಮಪಡಿಸಲು ಭಾಷಾ ಶಿಕ್ಷಕರಿಂದ ಸಂವಾದ ಕಾರ್ಯಕ್ರಮ ಏರ್ಪಡಿಸುವ ಕುರಿತು ನಿರ್ಣಯ ಕೈಗೊಳ್ಳಲಾಯಿತು.
ಜಿಲ್ಲಾ ಘಟಕ ಪುನಶ್ಚೇತನ ನೀಡಲು ಸವಣೂರು, ಶಿಗ್ಗಾಂವಿ, ಹಾವೇರಿ, ಬ್ಯಾಡಗಿ ಘಟಕಗಳ ಪದಾಧಿಕಾರಿಗಳ ರಚನೆ ನಡೆಯಿತು. ಬಾಕಿ ಇರುವ ರಾಣಿಬೆನ್ನೂರು, ಹಾನಗಲ್ಲ, ಹಿರೇಕೆರೂರು ತುರ್ತಾಗಿ ತಾಲೂಕು ಘಟಕ ರಚನೆ ಮಾಡಿ ಡಿ. 20ರೊಳಗಾಗಿ ಜಿಲ್ಲಾ ಹೊಸ ಸಮಿತಿ ಪದಾಧಿಕಾರಿಗಳ ರಚನೆ ಮಾಡಿ ಅನುಮೋದನೆ ಪಡೆಯಲು ತಿಳಿಸಲಾಯಿತು.
ಗ್ರೂಪ್ ಬಿ ವೃಂದ ನಿಯಮ 32ರಡಿ ಕಾರ್ಯನಿರ್ವಹಿಸುತ್ತಿರುವ ಹಾಗೂ ನೇರ ನೇಮಕಾತಿ ಮೂಲಕ ಕಾರ್ಯನಿರ್ವಹಿಸುತ್ತಿರುವವರಿಗೆ ಬಿಇಒ ಹುದ್ದೆಯನ್ನು ನೀಡಲು ಆಗ್ರಹಿಸಲಾಯಿತು. ಗ್ರೂಪ್ ಬಿ ವೃಂದದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಸಮಾನಾಂತರ ಹುದ್ದೆಯ ಅಧಿಕಾರಿಗಳಿಗೆ ಕಿರುಕುಳ ನೀಡುವುದನ್ನು ಸಭೆಯಲ್ಲಿ ಚರ್ಚಿಸಲಾಯಿತು.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಇಲಾಖೆ ಮುಖ್ಯಸ್ಥರಿಗೆ ಅವರ ಕಾರ್ಯವ್ಯಾಪ್ತಿ ಕುರಿತು ಮಾಹಿತಿ ಪಡೆದು ಕ್ರಮ ಜರುಗಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.ಸಹ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರಿಗೆ ನೀಡುವ ವೇತನವನ್ನು ತಾಲೂಕು ಪಂಚಾಯಿತಿಗೆ ನೀಡದೇ ನೇರ ಮುಖ್ಯ ಶಿಕ್ಷಕರಿಗೆ ನೀಡಬೇಕು. ಅಲ್ಲದೇ ಬಿಲ್ಲಿಗೆ ಮೇಲು ರುಜು ಮಾಡುವ ಅಧಿಕಾರವನ್ನು ಮುಖ್ಯೋಪಾಧ್ಯಾಯರಿಗೆ ನೀಡಬೇಕು. ಇಲಾಖೆಯ ಗ್ರೂಪ್ ಬಿ ವೃಂದ ಅಧಿಕಾರಿಗಳು ಇಲಾಖೆ ಇಟ್ಟಿರುವ ವಿಶ್ವಾಸಕ್ಕೆ ತಕ್ಕಂತೆ ಆದ್ಯತೆ ಮೇಲೆ ಇಲಾಖೆಯ ಎಲ್ಲ ಕಾರ್ಯಕ್ರಮಗಳನ್ನು ನಿಗದಿತ ವೇಳೆಯಲ್ಲಿ ಬದ್ಧತೆಯಿಂದ ಕಾರ್ಯನಿರ್ವಹಿಸಲು ಪಾರದರ್ಶಕತೆ ಕಾಯ್ದುಕೊಳ್ಳಲು ಮನವಿ ಮಾಡಲಾಯಿತು.
ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎಫ್. ಬಾರ್ಕಿ, ಪಿ.ಎನ್. ಉಜ್ಜೇರ, ಕೆ.ವಿ. ಗೊಲ್ಲರ, ಕೆ.ಎಫ್. ಭಜಂತ್ರಿ, ಬಿ.ಎನ್. ಮುದಿಲಿಂಗಣ್ಣನವರ, ಪಿ.ಎಸ್. ಬಿದಿರಿ, ಎಸ್.ವಿ. ಅಜಗೊಂಡರ, ಎಸ್.ಎಸ್. ಹಂಚಿನಮನಿ, ವೀರಭದ್ರಪ್ಪ ಎಂ, ಎಸ್.ಜಿ. ಸಣ್ಣಂಗಿ, ದೇವಿಂದ್ರಪ್ಪ ಬಸಮ್ಮನವರ, ಯಮನಕ್ಕನವರ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement