ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಪ್ರಾಮಾಣಿಕತೆ, ಕ್ರಿಯಾಶೀಲತೆಯಿಂದ ಸಹಕಾರಿ ರಂಗ ಅಭಿವೃದ್ಧಿ: ಬಣಕಾರ

Vishwanath S
Updated On : 2 Dec 2013, 12:00 pm

ಹಿರೇಕೆರೂರು: ದೇಶದಲ್ಲಿ 5 ಲಕ್ಷ ಸಹಕಾರ ಸಂಘಗಳಿದ್ದು, ರಾಜ್ಯದಲ್ಲೂ 38 ಸಾವಿರ ಸಂಘಗಳು ಸಹಕಾರ ತತ್ವದಲ್ಲಿ ರೈತ ಪರವಾಗಿ ಕಾರ್ಯ ನಿರ್ವಹಿಸುತ್ತಿವೆ. ಆಡಳಿತ ಮಂಡಳಿ ಹಾಗೂ ನೌಕರರು ಪ್ರಾಮಾಣಿಕತೆಯಿಂದ, ಕ್ರಿಯಾಶೀಲರಾಗಿ ಕೆಲಸ ಮಾಡಿದರೆ ಮಾತ್ರ ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ಬಿ.ಜಿ. ಬಣಕಾರ ಕರೆ ನೀಡಿದರು.
ಪಟ್ಟಣದ ತರಳಬಾಳು ಸಾಂಸ್ಕೃತಿಕ ಭವನದಲ್ಲಿ ತಾಲೂಕಿನ ಎಲ್ಲ ಸಹಕಾರಿ ಸಂಘಗಳು ಮತ್ತು ಸಹಕಾರಿ ಬ್ಯಾಂಕುಗಳ ಆಶ್ರಯದಲ್ಲಿ ಜರುಗಿದ 60ನೇ ಅಖಿಲ ಭಾರತ ಸಹಕಾರ ಸಪ್ತಾಹದ ಆಚರಣೆಯ ಸಮಾರೋಪ ಸಮಾರಂಭದಲ್ಲಿ ಸಹಕಾರ ಸಂಸ್ಕೃತಿ ಹಾಗೂ ಮೌಲ್ಯಗಳ ಉತ್ತೇಜನ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಣಕಾರ, ರಾಜ್ಯದಲ್ಲಿ ಶೇ. 60ರಷ್ಟು ಸಹಕಾರಿ ಸಂಘಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಸಹಕಾರಿ ಸಂಘಗಳ ಸದಸ್ಯರು ಎಪಿಎಂಸಿಯಲ್ಲೂ ಸದಸ್ಯತ್ವ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಮಾತನಾಡಿ, ಜನರಿಂದ, ಜನರಿಗಾಗಿ, ಜನರೇ ನಡೆಸುತ್ತಿರುವ ಸಹಕಾರಿ ಸಂಸ್ಥೆಗಳು ಪ್ರಾಮಾಣಿಕತೆ, ಸಹಕಾರ ತತ್ವ, ಸಹನೆ, ದಕ್ಷತೆ, ನಿಸ್ವಾರ್ಥ ಗುಣಗಳಿಂದಾಗಿ ಅಭಿವೃದ್ಧಿ ಪಥದಲ್ಲಿವೆ. ಸರ್ಕಾರದ ಪ್ರತಿನಿಧಿಗಳು ಸ್ವಪ್ರತಿಷ್ಠೆ ಹಾಗೂ ಸ್ವಾರ್ಥಕ್ಕಾಗಿ ಬಡ್ಡಿ-ಸಾಲ ಮನ್ನಾದಂತಹ ಯೋಜನೆಗಳನ್ನು ರೂಪಿಸಿ ಅವುಗಳಿಗೆ ನಿಗದಿಪಡಿಸಿದ ಹಣ ಬಿಡುಗಡೆ ಮಾಡದೆ ಸಹಕಾರಿ ರಂಗವನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದರು.
ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಎಸ್. ಪಾಟೀಲ ಧ್ವಜಾರೋಹಣ ನೆರವೇರಿಸಿದರು. ಜಿಲ್ಲಾ ಸಹಕಾರಿ ಯೂನಿಯನ್ ಸಿಇಒ ಆನಂದ ತಳವಾರ, ಕೆಸಿಸಿ ಬ್ಯಾಂಕ್ ನಿರ್ದೇಶಕ ಲಿಂಗರಾಜ ಚಪ್ಪರದಳ್ಳಿ, ಸಿಇಎಸ್ ಸಂಸ್ಥೆಯ ಅಧ್ಯಕ್ಷ ಎಸ್.ಬಿ. ತಿಪ್ಪಣ್ಣನವರ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಂ.ಬಿ. ಗಿಡ್ಡಣ್ಣನವರ, ಸಹಕಾರಿ ಸಂಘಗಳ ಉಪನಿಬಂಧಕ ಪಿ.ಎಂ. ನಾಗಾಶಯನ, ಜನತಾ ಬಜಾರ್ ಅಧ್ಯಕ್ಷ ಬಿ.ಬಿ. ಗಂಗೋಳ, ನಿರ್ದೇಶಕರಾದ ಎಸ್.ಎಚ್. ವಡೆನಪುರ, ಆರ್.ಎನ್. ಗಂಗೋಳ, ಎಸ್.ಎಂ. ರೋತಿ, ಶಶಿಕಲಾ ಪಾಲೇದ ಉಪಸ್ಥಿತರಿದ್ದರು. ಟಿಎಪಿಸಿಎಂಎಸ್ ವ್ಯವಸ್ಥಾಪಕ ಎಂ.ಎಸ್. ಕೋರಿಗೌಡರ ಸ್ವಾಗತಿಸಿದರು. ಉಪನ್ಯಾಸಕ ಎಚ್.ಎಸ್. ಹಲಗೇರಿ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement