ಮಹಾಮೇಳದಲ್ಲಿ ಪಾಟೀಲ ಕಾವ್ಯ ವಾಚನ
ಹಾನಗಲ್ಲ: ಗುಜರಾತ್‌ನ ಬರೋಡಾ (ವಡೋದರ)ದಲ್ಲಿ ಅಖಿಲ ಭಾರತ ಹೊರನಾಡ ಕನ್ನಡ ಸಂಘಗಳ 4ನೇ ಮಹಾಮೇಳ ಡಿ. 8, 9ರಂದು ಜರುಗಲಿದ್ದು, ಹಾನಗಲ್ಲ ತಾಲೂಕು ಕ್ಯಾಸನೂರು ಗ್ರಾಮದ ಸಾಹಿತಿ ವಿಜಯಕಾಂತ ಪಾಟೀಲ ಈ ಸಂದರ್ಭದಲ್ಲಿ ನಡೆಯುವ ಕವಿಗೋಷ್ಠಿಯಲ್ಲಿ ಪಾಲ್ಗೊಂಡು ಕವನ ವಾಚಿಸಲಿದ್ದಾರೆ. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ, ಅಲ್ಲಿನ ಕನ್ನಡ ಸಂಘಗಳ ಆಶ್ರಯದಲ್ಲಿ 2 ದಿನ ನಡೆಯುವ ಈ ಮಹಾಮೇಳದಲ್ಲಿ ಒಟ್ಟು 12 ವಿವಿಧ ವಿಚಾರ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಸಮ್ಮೇಳನದಲ್ಲಿ ಕ.ವಿ.ವ. ಸಂಘದ ಅಧ್ಯಕ್ಷ, ನಾಡೋಜ ಡಾ.ಪಾಟೀಲ ಪುಟ್ಟಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀ, ಕವಿವಿ ಕುಲಪತಿ ಎಚ್.ಬಿ. ವಾಲಿಕಾರ, ಶಾ.ಮಂ. ಕೃಷ್ಣರಾವ್, ಎಸ್.ಎಂ.ವೃಷಭೇಂದ್ರಸ್ವಾಮಿ, ಬರೋಡ ವಿವಿ ಕುಲಪತಿ ಯೋಗೇಶ್ ಸಿಂಗ್, ಕನ್ನಡ-ಸಂಸ್ಕೃತಿ ಇಲಾಖೆ ಜಂಟಿ ರಜಿಸ್ಟ್ರಾರ್ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಬಸವಲಿಂಗಯ್ಯ ಹಿರೇಮಠ, ಡಾ. ರಂಗರಾಜ ವನದುರ್ಗ, ಕವಯಿತ್ರಿ ಮಾಲತಿ ಪಟ್ಟಣಶೆಟ್ಟಿ, ಡಾ. ಶ್ರೀರಾಮ ಇಟ್ಟಣ್ಣವರ, ಬಿ.ವಿ. ಗುಂಜಟ್ಟಿ, ಮೋಹನ ನಾಗಮ್ಮನವರ, ಎಂ.ಡಿ. ವಕ್ಕುಂದ, ಡಾ. ವಿನಯಾ, ಶ್ರೀಶೈಲ ಹುದ್ದಾರ, ಶಂಭು ಬಳಿಗಾರ ಇತರರು ಪಾಲ್ಗೊಳ್ಳಲಿದ್ದಾರೆ.