ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ವಿಎಸ್‌ಎಸ್‌ಗೆ ತಹಸೀಲ್ದಾರ್ ಶಿವಶಂಕರ ಭೇಟಿ: ಪರಿಶೀಲನೆ

Vishwanath S
Updated On : 2 Dec 2013, 12:01 pm

ಬ್ಯಾಡಗಿ: ಕಳೆದೆರಡು ತಿಂಗಳಿಂದ ಕಾರ್ಡ್‌ದಾರರಿಗೆ ಪಡಿತರ ಧಾನ್ಯ ವಿತರಿಸದೇ ಲೋಪವೆಸಗಿದ್ದ ತಾಲೂಕಿನ ಕುಮ್ಮೂರ ಗ್ರಾಮದ ವ್ಯವಸಾಯೋತ್ಪನ್ನ ಸೇವಾ ಸಂಘಕ್ಕೆ (ವಿಎಸ್‌ಎಸ್) ತಹಸೀಲ್ದಾರ್ ಶಿವಶಂಕರ ನಾಯಕ್ ದೀಢೀರ್ ದಾಳಿ ನಡೆಸಿ ಪರಿಶೀಲಿಸಿದರು.
ಶನಿವಾರ ಜರುಗಿದ ಜನಸ್ಪಂದನದಲ್ಲಿ ನಾಗಲಾಪುರ ಗ್ರಾಮಸ್ಥರು ಈ ಕುರಿತು ದೂರು ಸಲ್ಲಿಸಿ, ಪಡಿತರ ಧಾನ್ಯ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಪಡಿತರದೊಂದಿಗೆ ರು. 20 ಬೆಲೆಯುಳ್ಳ ಚಹಾಪುಡಿ, ರು. 7 ಮುಖಬೆಲೆ ಸೋಪನ್ನು ಒತ್ತಾಯಪೂರ್ವಕವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು.
ಸಾರ್ವಜನಿಕರ ದೂರಿನನ್ವಯ ವಿಎಸ್‌ಎಸ್ ಬ್ಯಾಂಕಿಗೆ ದಾಳಿ ನಡೆಸಿದ ತಹಸೀಲ್ದಾರ್ ಪಡಿತರ ಧಾನ್ಯವನ್ನು ಮುಖ್ಯ ಕೇಂದ್ರದಿಂದ ಯಾವಾಗ ಪಡೆಯಲಾಗಿದೆ ಎಂಬ ದಾಖಲಾತಿಗಳ ಪರಿಶೀಲನೆಗೆ ಮುಂದಾದಾಗ, ವಿಚಲಿತರಾದ ಕಾರ್ಯದರ್ಶಿ ಮಲ್ಲೇಶಪ್ಪ ಗೂಳೇದ ದಾಖಲಾತಿಗಳು ಲೆಕ್ಕ ಪರಿಶೋಧನೆಗೆ ಕಳುಹಿಸಿರುವುದಾಗಿ ಉತ್ತರ ನೀಡಿದರು.
ಕುಂಟು ನೆಪ ಹೇಳದೇ ನಾಳೆಯಿಂದಲೇ ಪಡಿತರ ವಿತರಿಸಬೇಕು ಮತ್ತು ಈ ಕುರಿತು ಸಂಬಂಧಿಸಿದ ಎಲ್ಲ ದಾಖಲಾತಿ ಪರಿಶೀಲನೆಗೆ ಒಪ್ಪಿಸುವಂತೆ ತಾಕೀತು ಮಾಡಿದ ತಹಸೀಲ್ದಾರ್, ಕಾರ್ಡುದಾರರಿಗೆ ಚಹಾಪುಡಿ ಮತ್ತು ಸೋಪು ಪಡೆಯಲು ಒತ್ತಾಯಿಸಿದಲ್ಲಿ ಅಥವಾ ಮಾರಾಟದ ಸುಳಿವು ಸಿಕ್ಕಲ್ಲಿ ಲೈಸನ್ಸ್ ರದ್ದುಪಡಿಸುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕಾಗಿನೆಲ್ಲಿ ಹೋಬಳಿಯ ಉಪ ತಹಸೀಲ್ದಾರ್ ಜಿ.ಎನ್. ಶೆಟ್ಟರ್, ಆಹಾರ ನಿರೀಕ್ಷಕ ದೊಡ್ಮನಿ, ಗ್ರಾಮ ಲೆಕ್ಕಾಧಿಕಾರಿ ಮಳಿಯಣ್ಣನವರ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement