ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸಮಾಜ ನಮ್ಮನ್ನು ಮನುಷ್ಯರಂತೆ ಕಂಡರೆ ಸಾಕು

Vishwanath S
Updated On : 2 Dec 2013, 12:01 pm

ಕನ್ನಡಪ್ರಭ ವಾರ್ತೆ, ಶಿಗ್ಗಾವಿ, ಡಿ. 1
ಸಮಾಜ ಹಾಗೂ ಸರ್ಕಾರ ನಮ್ಮನ್ನು ನಿರ್ಲಕ್ಷಿಸದೇ ಮನುಷ್ಯರಂತೆ ಕಂಡರೆ ಸಾಕು ಎಂದು ಖ್ಯಾತ ಜೋಗತಿ ನೃತ್ಯ ಕಲಾವಿದೆ ಬಿ. ಮಂಜಮ್ಮ ಜೋಗತಿ ಮನದಾಳದ ಮಾತು ಹೇಳಿದರು.
ತಾಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ನಡುಮನೆ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ತಿಂಗಳ ಅತಿಥಿಯೊಂದಿಗೆ ಪಟ್ಟಾಂಗ-13 ಕಾರ್ಯಕ್ರಮದ ತಿಂಗಳ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಸಮಾಜದಲ್ಲಿ ಹೆಣ್ಣೂ ಅಲ್ಲದ ಗಂಡೂ ಅಲ್ಲದ ನಮ್ಮಂಥವರು ಭಿಕ್ಷಾಟನೆ ಮಾಡುತ್ತಲೇ ಬದುಕುತ್ತಿದ್ದೇವೆ. ನಮ್ಮ ಬದುಕಿಗೆ ಜೋಗತಿ ಕಲೆಯೇ ಆಧಾರ. ಇದನ್ನು ನಂಬಿ ಬದುಕುತ್ತಿರುವ ಜೋಗತಿ ಸಮುದಾಯದವರನ್ನು ಅಂತಃಕರಣದಿಂದ ಕಾಣುವುದರ ಜೊತೆಗೆ ಸರ್ಕಾರ, ಸಂಘ-ಸಂಸ್ಥೆಗಳು ನಮಗೂ ಎಲ್ಲರಂತೆ ಜೀವನ ನಡೆಸಲು ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂದು ಮಂಜಮ್ಮ ಜೋಗತಿ ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ ಮಾತನಾಡಿ, ಕಲಾವಿದರಿಗೆ ಯಾವುದೇ ರೂಪ ಮುಖ್ಯವಲ್ಲ. ಅವರಲ್ಲಿನ ಕಲೆ ಮುಖ್ಯ.
ಆದ್ದರಿಂದ ಜೋಗತಿ ಸಂಪ್ರದಾಯದ ಮೂಲ ಕಲಾವಿದರನ್ನು ಗುರುತಿಸಿ, ಗೌರವಿಸಿದರೆ ಮಾತ್ರ ಅವರಲ್ಲಿ ಆತ್ಮವಿಶ್ವಾಸ ಬೆಳೆಯುತ್ತದೆ.
ಈ ಮೂಲಕ ಜೋಗತಿ ಕಲೆ ಮೂಲ ಸ್ವರೂಪದಲ್ಲಿ ಉಳಿಯಲು ಮತ್ತು ಮುಂದಿನ ಪೀಳಿಗೆಗೆ ಹಸ್ತಾಂತರಿಸಲು, ಬೆಳೆಯಲು ಸಾಧ್ಯ ಎಂದು ತಿಳಿಸಿದರು.
ಇದೇ ಸಂದರ್ಭ ಜೋಗತಿ ನೃತ್ಯ ಕಲಾವಿದರಾದ ಮಂಜಮ್ಮ ಜೋಗತಿ ಹಾಗೂ ತಂಡದ ಸದಸ್ಯರನ್ನು ವಿಶ್ವವಿದ್ಯಾಲಯದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಡಿ.ಬಿ. ನಾಯಕ, ಮೌಲ್ಯಮಾಪನ ಕುಲಸಚಿವ, ವಿಸ್ತರಣೆ ಹಾಗೂ ಸಲಹಾ ಕೇಂದ್ರದ ನಿರ್ದೇಶಕ ಪ್ರೊ. ಸ.ಚಿ. ರಮೇಶ, ವಿಶ್ವವಿದ್ಯಾಲಯದ ಶೈಕ್ಷಣಿಕ ಪರಿಷತ್ ಸದಸ್ಯ, ಜಾನಪದ ತಜ್ಞರೂ ಆದ ಶಾಂತಿ ನಾಯಕ, ಡಾ. ಕೆ. ಸೌಭಾಗ್ಯವತಿ, ಜರ್ಮನಿಯ ವೂರ್ಗ್ಸಬರ್ಗ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಸಾರಾ ಮಾರ್ಕ್‌ಲಿ, ಸಂದರ್ಶಕ ಪ್ರಾಧ್ಯಾಪಕ ಡಾ. ಕೆ. ಕಮಲಾಕ್ಷ ಇತರರು ಇದ್ದರು.
ಎನ್. ಮೋಹನಕುಮಾರ್ ಮತ್ತು ಕೆ.ಎಲ್. ಲಕ್ಷ್ಮಣ ಪ್ರಾರ್ಥಿಸಿದರು. ಪ್ರಾಧ್ಯಾಪಕ ಡಾ. ಚಂದ್ರಪ್ಪ ಸೊಬಟಿ ಸ್ವಾಗತಿಸಿದರು. ಜಯದತ್ತ ಎಸ್. ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ ಹೊಸಮನಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement