ತಪಸ್ಸಿಗಿಂತ ನಿಸ್ವಾರ್ಥ ಸೇವೆಯೇ ಶ್ರೇಷ್ಠ: ದಿಂಗಾಲೇಶ್ವರ ಶ್ರೀ
ಬ್ಯಾಡಗಿ: ಸ್ವಾರ್ಥಕ್ಕಾಗಿ ಮಾಡುವ ತಪಸ್ಸಿಗಿಂತ ನಿಸ್ವಾರ್ಥ ಸೇವೆಯೇ ಶ್ರೇಷ್ಠ. ದೇವಾಲಯಗಳು ಭಕ್ತಿಯ ಪ್ರತೀಕವಾಗಿದ್ದರೂ ಜನರ ಧಾರ್ಮಿಕ ಭಾವನೆಗಳನ್ನು ಒಡೆಯುವ ಆತಂಕವಿದೆ ಎಂದು ಬಾಲೇ ಹೊಸೂರಿನ ದಿಂಗಾಲೇಶ್ವರ ಶ್ರೀಗಳು ಅಭಿಪ್ರಾಯಪಟ್ಟರು.
ನೆಹರು ನಗರದ ದಾನಮ್ಮದೇವಿ ಜಾತ್ರಾ ಮಹೋತ್ಸವ ಹಾಗೂ ಪುರಾಣ ಮಂಗಲೋತ್ಸವದಲ್ಲಿ ಅವರು, ಭೌಗೋಳಿಕ ಸಂಪನ್ಮೂಲಗಳಿದ್ದಂತೆ ದೇಶಕ್ಕೂ ಧಾರ್ಮಿಕ ಸಂಪನ್ಮೂಲವಿದೆ. ತಮಿಳುನಾಡಿನಲ್ಲಿ ಸಾವಿರಾರು ದೇವಾಲಯಗಳಿವೆ. ವಿವಿಧ ಜಾತಿ ಧರ್ಮಗಳ ಜನರು ಸಹೋದರ ಭಾವದಿಂದ ಬಾಳಬೇಕಾದರೆ ಧರ್ಮ ಹಿನ್ನೆಲೆ ಬೇಕು ಎಂದರು.
ಮಾಜಿ ಸಚಿವ ಸಿ.ಎಂ. ಉದಾಸಿ ಮಾತನಾಡಿ, ಹಣೆ ಬರಹ ಬರೆಯುವ ಅವಕಾಶ ಬ್ರಹ್ಮನ ಬದಲಾಗಿ ತಾಯಿಗೆ ನೀಡಬೇಕಿತ್ತು. ಅಂದಾಗ, ಸುಸಂಸ್ಕೃತ ಸಮಾಜ ನಿರ್ಮಾಣವಾಗುತ್ತಿತ್ತು. ಮನೆಯಲ್ಲಿ ದೊರೆಯುವ ಧಾರ್ಮಿಕ ಶಿಕ್ಷಣಕ್ಕಿಂತ ಸಮನಾದ ವಿದ್ಯೆ ಬೇರೋಂದಿಲ್ಲ. ಆರ್ಥಿಕ ಸೌಲಭ್ಯದೊಂದಿಗೆ ಎಷ್ಟೇ ಪ್ರಬಲವಾಗಿದ್ದರೂ ನೆಮ್ಮದಿ ಹಾಗೂ ಸಾರ್ಥಕ ಬದುಕಿಗೆ ಧಾರ್ಮಿಕ ನೆಲೆಗಟ್ಟು ಅತ್ಯವಶ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಸುರೇಶಗೌಡ ಮಾತನಾಡಿ, ದೇವಾಲಯಗಳು ಏಕತೆ, ಸಾಮರಸ್ಯದ ಸಂಕೇತವಾಗಿವೆ. ಧರ್ಮ, ಸಂಸ್ಕೃತಿ ಮುಂದುವರಿಯಲು ಇವುಗಳ ಪಾತ್ರ ಮುಖ್ಯ. ದಾರ್ಶನಿಕರ ಆದರ್ಶಗಳೊಂದಿಗೆ ಸಮಾಜವನ್ನು ತಿದ್ದುವಂತಹ ಶೈಕ್ಷಣಿಕ ವ್ಯವಸ್ಥೆಯಿಂದ ಮಾತ್ರ ಸುಶಿಕ್ಷಿತ ಸಮಾಜ ನಿರ್ಮಾಣ ಸಾಧ್ಯ ಎಂದರು.
ಬೊಮ್ಮನಹಳ್ಳಿ ವಿರಕ್ತಮಠದ ಶಿವಯೋಗಿಶ್ವರ ಶ್ರೀ, ಆದಿ ವಿರಕ್ತಮಠದ ಸಿದ್ಧೇಶ್ವರ ಶ್ರೀ, ದಾನಮ್ಮದೇವಿ ಸೇವಾ ಸಮಿತಿ ಗೌರವಾಧ್ಯಕ್ಷೆ ಶಶಿಕಲಾ ಪಾಟೀಲ, ಅಧ್ಯಕ್ಷೆ ಮಹೇಶ್ವರಿ ಪಸಾರದ, ಪುರಸಭೆ ಮಾಜಿ ಅಧ್ಯಕ್ಷ ಎಸ್.ಆರ್. ಪಾಟೀಲ, ಸದಸ್ಯ ಮುರಿಗೆಪ್ಪ ಶೆಟ್ಟರ್, ಮುತ್ತಣ್ಣ ಪಾಟೀಲ, ಶಿವಲಿಂಗಪ್ಪ ಸಂಕಣ್ಣನವರ, ಮೃತ್ಯುಂಜಯ ಪಾಟೀಲ, ಗುಲಾಬಮ್ಮ ಕಬ್ಬೂರ, ಮಾಲತೇಶ ಅರಳಿಮಟ್ಟಿ, ಸಂಕಮ್ಮ ಸಂಕಣ್ಣನವರ, ಸಂಧ್ಯಾರಾಣಿ ದೇಶಪಾಂಡೆ ಇದ್ದರು. ಡಾ. ಎಸ್.ಎನ್. ನಿಡಗುಂದಿ ಮಾತನಾಡಿದರು. ರಾಜು ಮೋರಿಗೇರಿ ನಿರೂಪಿಸಿದರು. ಬಸವರಾಜ ಹಂಜಿ ವಂದಿಸಿದರು.
ಧರ್ಮದ ತಳಹದಿ ಮೇಲೆ ಉತ್ತಮ ಚಾರಿತ್ರ್ಯ ಹೊಂದಿರುವ ದೇಶಗಳು ಬಹಳಷ್ಟು ಸಮೃದ್ಧಿ ಹೊಂದಿವೆ. ತಾತ್ಕಾಲಿಕ ಸುಖದೆಡೆಗೆ ಮುಖ ಮಾಡಿರುವ ಜನರು ಧಾರ್ಮಿಕ ನಂಬಿಕೆ, ಮಾನವೀಯ ಮೌಲ್ಯ ಕಳೆದುಕೊಳ್ಳುತ್ತಿದ್ದು, ಇದರಿಂದ ನೈತಿಕವಾಗಿ ದುರ್ಬಲರಾಗುತ್ತಿದ್ದಾರೆ.
- ದಿಂಗಾಲೇಶ್ವರ ಶ್ರೀ