ನಾಟಕಗಳಿಂದ ಉತ್ತಮ ಸಂದೇಶ: ಸಾಣೆಹಳ್ಳಿ ಶ್ರೀ
ಹಿರೇಕೆರೂರು: ನಾಟಕ ಉತ್ತಮ ಸಂದೇಶಗಳನ್ನು ಸಮಾಜಕ್ಕೆ ತಲುಪಿಸುವ ಉತ್ತಮ ಮಾರ್ಗ. ಶರಣರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಆದರ್ಶ ಸಮಾಜ ನಿರ್ಮಾಣಕ್ಕೆ ಎಲ್ಲರೂ ಮುಂದಾಗಬೇಕು ಎಂದು ಸಾಣೇಹಳ್ಳಿಯ ಡಾ ಪಂಡಿತಾರಾಧ್ಯ ಮಹಾಸ್ವಾಮಿಗಳು ತಿಳಿಸಿದರು.
ಪಟ್ಟಣದ ಸಿಇಎಸ್ ಮೈದಾನದ ರಂಗಮಂದಿರದಲ್ಲಿ ಸಾಣೇಹಳ್ಳಿಯ ಶಿವಸಂಚಾರ ಕಲಾ ತಂಡದ 'ಮಹಾಬೆಳಗು' ನಾಟಕ ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಅವರು, ಮುಂದಿನ ವರ್ಷ ಸಿರಿಗೆರೆ ಶಿವಕುಮಾರ ಮಹಾಸ್ವಾಮೀಜಿ ಅವರ ಶತಮಾನೋತ್ಸವ ವರ್ಷಾಚರಣೆ ಅಂಗವಾಗಿ ಅವರ ಜೀವನದ ಮೇಲೆ ಬೆಳಕು ಚೆಲ್ಲುವ 'ಶರಣ ಸತಿ ಲಿಂಗಪತಿ', 'ಮರಣವೇ ಮಹಾನವಮಿ' ನಾಟಕಗಳನ್ನು ಅಭಿನಯಿಸಲಾಗುವುದು. 'ಮಹಾ ಬೆಳಗು' ನಾಟಕ ಶಿವಕುಮಾರ ಸ್ವಾಮೀಜಿಯವರ ಜೀವನ-ಸಂದೇಶಗಳನ್ನು ಒಳಗೊಂಡಿದೆ ಎಂದರು.
ಶಾಸಕ ಯು.ಬಿ. ಬಣಕಾರ ಕಾರ್ಯಕ್ರಮ ಉದ್ಘಾಟಿಸಿ, ಪ್ರತಿಯೊಬ್ಬರು ತಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಲು ನಾಟಕಗಳು ಸಹಾಯಕವಾಗಿವೆ. ತಮ್ಮ ಶಾಸಕತ್ವದ ಅವಧಿಯಲ್ಲಿ ತರಳಬಾಳು ಹುಣ್ಣಿಮೆಯನ್ನು ಆಚರಿಸಲು ಅನುಕೂಲ ಮಾಡಿಕೊಡುವಂತೆ ಸಾಣೇಹಳ್ಳಿ ಪಂಡಿತಾರಾಧ್ಯರಲ್ಲಿ ಮನವಿ ಮಾಡಿದರು.
ಸರ್ವಜ್ಞ ಸ್ಮಾರಕ ಸಮಿತಿ ಅಧ್ಯಕ್ಷ ಎಸ್.ಎಸ್. ಪಾಟೀಲ, ಪಿಎಲ್ಡಿ ಬ್ಯಾಂಕ್ ಉಪಾಧ್ಯಕ್ಷ ಮಲ್ಲಿಕಾರ್ಜುನ ಬರುಡಿಕಟ್ಟಿ, ಸಾಧು ವೀರಶೈವ ಸಮಾಜದ ಅಧ್ಯಕ್ಷ ಲಿಂಗರಾಜ ಚಪ್ಪರದಳ್ಳಿ, ನಿರ್ದೇಶಕ ಎಸ್.ಎಸ್. ಸಣ್ಣಗೌಡ್ರ, ಕೋಶಾಧ್ಯಕ್ಷ ಪ್ರಕಾಶ ಗೌಡರ, ಕಾರ್ಯದರ್ಶಿ ಎಸ್.ಬಿ. ಚೆನ್ನಗೌಡ್ರ, ಸಮಿತಿ ಉಪಾಧ್ಯಕ್ಷ ಉಜನೇಪ್ಪ ಬಣಕಾರ ಇದ್ದರು.