ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸಭೆ
ಹಾವೇರಿ: ಬಿಜೆಪಿ ಯುವ ಮೋರ್ಚಾ ಹಿರೇಕೆರೂರು ತಾಲೂಕು ಕಾರ್ಯಕಾರಿಣಿಯು ತಾಲೂಕು ಅಧ್ಯಕ್ಷ ಎಸ್.ಆರ್. ಅಂಗಡಿ ಅಧ್ಯಕ್ಷತೆಯಲ್ಲಿ ಜರುಗಿತು. ಎಸ್.ಆರ್. ಅಂಗಡಿ ಸಭೆ ಉದ್ಘಾಟಿಸಿ ಮಾತನಾಡಿ, ಯುವ ಮೋರ್ಚಾ ಕಾರ್ಯ ಚಟುವಟಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಪಂ ಸದಸ್ಯೆ ಬಸಮ್ಮ ಅಬಲೂರು ಮಾತನಾಡಿ, ಪಕ್ಷವನ್ನು ಕಟ್ಟುವುದರೊಂದಿಗೆ ನಾವೂ ಬೆಳೆಯಬೇಕು. ಮುಂದಿನ ದಿನಗಳಲ್ಲಿ ಕ್ರಿಯಾಶೀಲರಾಗಿ ಪಕ್ಷ ಸಂಘಟನೆಗೆ ಮುಂದಾಗಬೇಕೆಂದು ತಿಳಿಸಿದರು.
ರಾಜು ತಳವಾರ ಮಾತನಾಡಿ, ನಮ್ಮ ದೇಶವನ್ನು ಚೀನಾ ಕಬಳಿಸುತ್ತಿದ್ದರೂ ಕೇಂದ್ರ ಸರ್ಕಾರ ಸುಮ್ಮನಿದೆ. ಪಾಕಿಸ್ತಾನ ನಮ್ಮ ದೇಶದ ಸೈನಿಕರ ಹತ್ಯೆಗೈದರೂ ಯಾವ ಕ್ರಮವನ್ನು ಕೈಗೊಳ್ಳುತ್ತಿಲ್ಲ. ಬಾಂಗ್ಲಾದೇಶಕ್ಕೆ ನಮ್ಮ ದೇಶದ ನಾಣ್ಯಗಳು ಸಾಗಾಣಿಕೆಯಾಗುತ್ತಿವೆ. ಆದರೂ, ಕೇಂದ್ರ ಸರ್ಕಾರ ಯಾಕೆ ಕೈಕಟ್ಟಿ ಕುಳಿತಿದೆ ಎಂದು ಪ್ರಶ್ನಿಸಿದರು.
ಸೋಮೇಶ್ವರ ಕುರ್ಡೇಕರ ಹೊಸ ಮತದಾರರ ಸೇರ್ಪಡೆ ಕುರಿತು ವಿವರಿಸಿದರು. ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಮಹೇಶ ಕುದರಿಹಾಳ, ರಾಜು ತಳವಾರ ಇದ್ದರು. ನವೀನ ವಂದಿಸಿದರು.
ರಾಣಿಬೆನ್ನೂರು: ತಾಲೂಕು ಅಧ್ಯಕ್ಷ ಮಂಜುನಾಥ ನಿಂಗನಗೌಡ್ರ ತಾಲೂಕು ಬಿಜೆಪಿ ಕಾರ್ಯಕಾರಿಣಿ ಸಭೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಉದ್ಘಾಟಿಸಿದ ಡಾ. ಬಸವರಾಜ ಕೆಲಗಾರ, ಜಾತಿ-ಭೇದ ಮರೆತು ದೇಶ ಕಟ್ಟೋಣ ಎಂದು ಕರೆ ನೀಡಿದರು. ನಗರ ಘಟಕ ಅಧ್ಯಕ್ಷ ಕಿರಣ ಅಂಗಡಿ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸೋಮೇಶ್ವರ ಕುರ್ಡೇಕರ, ರಾಜು ತಳವಾರ, ಮಲ್ಲಣ್ಣ ಅಂಗಡಿ, ಸಂಕಪ್ಪ ಮಾರನಳ್ಳಿ, ಮಂಜುನಾಥ ನಿಂಗನಗೌಡ್ರ, ಸಂಕಪ್ಪ ಮಾರನಳ್ಳಿ ಇದ್ದರು.
ಬ್ಯಾಡಗಿ: ಬಿಜೆಪಿ ಯುವ ಮೋರ್ಚಾ ತಾಲೂಕಾಧ್ಯಕ್ಷ ವಿಜಯ ಬಳ್ಳಾರಿ ಹಾಗೂ ಹಾವೇರಿ ಯುವ ಮೋಚಾ ಅಧ್ಯಕ್ಷ ವೆಂಕಟೇಶ ದೈವಜ್ಞ ಅಧ್ಯಕ್ಷತೆಯಲ್ಲಿ ಈಚೆಗೆ ಕಾರ್ಯಕಾರಿಣಿ ಸಭೆ ಜರುಗಿತು. ಉದ್ಘಾಟಕರಾಗಿ ರಾಜ್ಯ ಕಾರ್ಯದರ್ಶಿ ಭಾರತಿ ಜಂಬಗಿ ಮತ್ತು ಬ್ಯಾಡಗಿ ತಾಲೂಕಾಧ್ಯಕ್ಷ ರಾಮಣ್ಣ ಉಕ್ಕುಂದ, ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ಹಾಗೂ ಧಾರವಾಡ ವಿಭಾಗದ ಪ್ರಭಾರಿ ಮಹೇಂದ್ರ ಕವತಾಳ, ರಾಜ್ಯ ಕಾರ್ಯಕಾರಿಣಿ ಸದಸ್ಯ ಶಿವಾನಂದ ಭಟ್, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಹುಸೇನಸಾಬ ನದಾಫ್, ಪ್ರಧಾನ ಕಾರ್ಯದರ್ಶಿ ಸೋಮೇಶ್ವರ ಕುರ್ಡೇಕರ, ಕಾರ್ಯದರ್ಶಿ ಚಂದ್ರಪ್ಪ ಬಾರ್ಕಿ ಮತ್ತು ಮಲ್ಲಿಕಾರ್ಜುನ ಹೊಸಮನಿ, ಗುರುಮೂರ್ತಿ ಕುಲಕರ್ಣಿ, ಸಿದ್ದರಾಜ ಕಲಕೋಟಿ, ಜಿಪಂ ಸದಸ್ಯ ವಿರೂಪಾಕ್ಷಪ್ಪ ಬಳ್ಳಾರಿ ಇದ್ದರು.