ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ರಸ್ತೆ ಅಗಲೀಕರಣಕ್ಕಾಗಿ ಉಪವಾಸ ಸತ್ಯಾಗ್ರಹ

Vishwanath S
Updated On : 3 Dec 2013, 11:08 am

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಡಿ. 2
ಬ್ಯಾಡಗಿಯಲ್ಲಿ ಹಾದು ಹೋಗಿರುವ ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿ- 136ರ ಅತಿಕ್ರಮಣ ತೆರವುಗೊಳಿಸಿ ದ್ವಿಮುಖ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಆಗ್ರಹಿಸಿ, ಮುಖ್ಯರಸ್ತೆ ಅಗಲೀಕರಣ ಸಮಿತಿ ಕಾರ್ಯಕರ್ತರು ಸೋಮವಾರ ಹಳೇ ಪುರಸಭೆ ಎದುರಿಗೆ ಅನಿರ್ದಿಷ್ಟಾವಧಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಜನತೆ ಹಾಗೂ ಸಂಘಟನೆಗಳಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಮಿತಿ ಅಧ್ಯಕ್ಷ, ನ್ಯಾಯವಾದಿ ಸುರೇಶ ಛಲವಾದಿ ಮಾತನಾಡಿ, ಪಟ್ಟಣದ ಮುಖ್ಯರಸ್ತೆಯನ್ನು ಅಗಲೀಕರಣ ಮಾಡುವುದು ಸಾರ್ವಜನಿಕರ ಬಹುದಿನದ ಬೇಡಿಕೆ. ಆದರೆ, ಇಚ್ಛಾಶಕ್ತಿಯ ಕೊರತೆಯಿಂದ ಅಗಲೀಕರಣ ಕಾರ್ಯ ನೆನೆಗುದಿಗೆ ಬಿದ್ದಿದೆ. ಮುಖ್ಯರಸ್ತೆ ಪಕ್ಕದ ಜಾಗೆ ಅತಿಕ್ರಮಣವಾಗಿದ್ದು, ಸುಗಮ ಸಂಚಾರ ಅಸಾಧ್ಯವಾಗಿದೆ ಎಂದರು.
ಕಾರ್ಯದರ್ಶಿ ಎಂ.ಬಿ. ಹಲಗೇರಿ ಮಾತನಾಡಿ, ರಸ್ತೆ ಅಗಲೀಕರಣ ಕಾಮಗಾರಿ ಗ್ರಾಮೀಣ ಪ್ರದೇಶ ಹಾಗೂ ಬೇರೆ ತಾಲೂಕು ಕೇಂದ್ರಗಳಲ್ಲಿ ಆರಂಭವಾಗಿದೆ. ಆದರೆ, ಮೆಣಸಿನಕಾಯಿ ವ್ಯಾಪಾರಕ್ಕೆ ಹೆಸರಾಗಿರುವ ಬ್ಯಾಡಗಿ ಪಟ್ಟಣಕ್ಕೆ ನಿತ್ಯ ಸಾವಿರಾರು ಸರಕು ವಾಹನಗಳು ಬರುತ್ತಿದ್ದರೂ ರಸ್ತೆ ಅಗಲೀಕರಣದ ಸಂಬಂಧ ಜನಪ್ರತಿನಿಧಿಗಳು ಮೌನವಾಗಿರುವುದು ಸಂಶಯಕ್ಕೆ ಎಡೆ ಮಾಡಿಕೊಡುತ್ತಿದೆ ಎಂದರು.
ರಾಜಕಾರಣಿಗಳಿಂದ ಮೋಸ: 2012ರ ಫೆಬ್ರವರಿಯಲ್ಲಿ ಸಮಿತಿ ನಡೆಸಿದ ಆಮರಣಾಂತ ಉಪವಾಸದ ವೇಳೆ ಅಂದಿನ ಶಾಸಕರು ಜಿಲ್ಲಾ ಉತ್ಸವ ಕಾರ್ಯಕ್ರಮವಿದೆ. ಮೂರು ತಿಂಗಳಲ್ಲಿ ರಸ್ತೆ ಅಗಲೀಕರಣ ಮಾಡುವುದಾಗಿ ಭರವಸೆ ನೀಡಿ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದ್ದರು. ಆದರೂ ಅಗಲೀಕರಣವಾಗಲಿಲ್ಲ ಎಂದರು.
ರೈತ ಸಂಘ ಬೆಂಬಲ: ರೈತ ಸಂಘ ಹಸಿರು ಸೇನೆ ಅಧ್ಯಕ್ಷ ಗಂಗಣ್ಣ ಎಲಿ ಮಾತನಾಡಿ, ಅಗಲೀಕರಣ ವಿಷಯ ಯಾರೊಬ್ಬರ ವೈಯಕ್ತಿಕ ಹಿತಾಸಕ್ತಿಯಲ್ಲ. ಕಿರಿದಾದ ರಸ್ತೆಯಿಂದ ಜಾನುವಾರು ಹಾಗೂ ಎತ್ತಿನ ಚಕ್ಕಡಿಗಳ ಓಡಾಟಕ್ಕೆ ಅಡ್ಡಿಯಾಗುತ್ತಿದೆ. ಸಾರ್ವಜನಿಕರಿಗಾಗುವ ತೊಂದರೆ ಬಗ್ಗೆ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದರು.
ರಸ್ತೆ ಬಂದ್: ಸಮಿತಿ ಹೋರಾಟ ತೀವ್ರಗೊಳಿಸಲು ನಿರ್ಧರಿಸಿದ್ದು, ಡಿ. 3ರಿಂದ ಬಸ್ ನಿಲ್ದಾಣದಿಂದ ಎಡಭಾಗಕ್ಕೆ ಚಲಿಸುವ ವಾಹನಗಳು ಬಳಸುವ ಅಂಚೆ ರಸ್ತೆ ಮಧ್ಯದಲ್ಲೇ ಉಪವಾಸ ಪ್ರಾರಂಭಿಸುವುದಾಗಿ ನ್ಯಾಯವಾದಿ ಭರತೇಶ್ ಚೂರಿ ಹೇಳಿದರು.
ಅಗಲೀಕರಣ ಸಮಿತಿ ನಡೆಸುತ್ತಿರುವ ಹೋರಾಟಕ್ಕೆ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಮೋಹನ ಬಿನ್ನಾಳ, ರಾಜ್ಯ ರೈತ ಸಂಘ ಶಹರ ಘಟಕದ ಅಧ್ಯಕ್ಷ ಚಿಕ್ಕಪ್ಪ ಛತ್ರದ, ಕರವೇ ಪ್ರವೀಣಶೆಟ್ಟಿ ಬಣದ ಜಿತೇಂದ್ರ ಸುಣಗಾರ, ಎಸ್‌ಎಫ್‌ಐಯ ಮಂಜುನಾಥ ಪೂಜಾರ, ಟಿಪ್ಪು ಸುಲ್ತಾನ್ ವೇದಿಕೆ ಅಧ್ಯಕ್ಷ ಡಾ೤ ಸೌದಾಗರ ಬೆಂಬಲ ಸೂಚಿಸಿ, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪ್ರಜಾಸತ್ತಾತ್ಮಕ ಪದವೀಧರರ ವೇದಿಕೆ ಅಧ್ಯಕ್ಷ ಭಾಸ್ಕರ ಮುದೇನೂರ, ವಿಕಲಚೇತನ ಸಂಘದ ತಾಲೂಕಾಧ್ಯಕ್ಷ ಪಾಂಡು ಸುತಾರ, ಸಂತೋಷ್ ಗುದುಗಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement