ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸಾಗುವಳಿ ಜಮೀನು ಸಕ್ರಮಗೊಳಿಸಿ

Vishwanath S
Updated On : 3 Dec 2013, 11:09 am

ಕನ್ನಡಪ್ರಭ ವಾರ್ತೆ, ಹಾವೇರಿ, ಡಿ. 2
ಜಿಲ್ಲೆಯ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವರ್ಗಗಳ ಬಡ ಜನರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ನಗರದ ಮುರುಘರಾಜೇಂದ್ರ ಮಠದಿಂದ ಮೆರವಣಿಗೆ ಮೂಲಕ ಆಗಮಿಸಿದ ನೂರಾರು ಕಾರ್ಯಕರ್ತರು ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ರಸ್ತೆ ತಡೆ, ಧರಣಿ ಪ್ರತಿಭಟನೆ ನಡೆಸಿದರು. ಸಂಘಟನೆ ರಾಜ್ಯ ಸಂಚಾಲಕ ವಾಸುದೇವ ಬಸವ್ವನವರ ಮಾತನಾಡಿ, ಜಿಲ್ಲೆಯ ಬಡ ದಲಿತ, ಹಿಂದುಳಿದ ಜನರು ಅಕ್ರಮ ಸಾಗುವಳಿ ಮಾಡುತ್ತಿರುವ ಜಮೀನನ್ನು ಸಕ್ರಮಗೊಳಿಸಬೇಕು. ನ್ಯಾ. ಸದಾಶಿವ ಆಯೋಗದ ವರದಿಯನ್ನು ಚಳಿಗಾಲದ ಅಧಿವೇಶನದಲ್ಲೇ ಅನುಷ್ಠಾನಗೊಳಿಸುವ ಮೂಲಕ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವರ್ಗೀಕರಣ ಬಿಲ್ಲನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು. ಖಾಲಿ ಇರುವ ಸಾವಿರಾರು ಬ್ಯಾಕ್‌ಲಾಗ್ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದವರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು.
ಸೇವೆ ಕಾಯಂಗೊಳಿಸಿ
ಜಿಲ್ಲಾ ಸಂಚಾಲಕ ಮಾಲತೇಶ ಯಲ್ಲಾಪುರ ಮಾತನಾಡಿ, ಮಾದಿಗ ಹಾಗೂ ಹೊಲೆಯ ಸಮಾಜಗಳಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ನಗರ ಸ್ಥಳೀಯ ಸಂಸ್ಥೆ, ಹಾಸ್ಟೆಲ್, ಆಸ್ಪತ್ರೆಗಳಲ್ಲಿ 15 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರನ್ನು ಹಾಗೂ ಕಾರ್ಮಿಕರನ್ನು ಕಾಯಂಗೊಳಿಸಬೇಕು. ಮಾದಾರ ಚನ್ನಯ್ಯ ಜಯಂತಿಯನ್ನು ಸರ್ಕಾರವೇ ಆಚರಿಸಬೇಕು. ಪಿಎಂಜಿಎಸ್‌ವೈ ಯೋಜನೆಯಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಪಡೆದ ನಿರುದ್ಯೋಗಿ ಸಾಲವನ್ನು ಮನ್ನಾ ಮಾಡಬೇಕು, ಅಕ್ರಮ ಸಕ್ರಮ ಜಮೀನು ಮಂಜೂರು ಮಾಡಿ ಪಟ್ಟಾ ವಿತರಿಸಬೇಕು ಎಂದು ಒತ್ತಾಯಿಸಿದರು.
ಮೊಕದ್ದಮೆ ವಾಪಸಾಗಲಿ
ಹಿರೇಕೆರೂರು ತಾಲೂಕಿನ ಬೇಟಕೇರೂರು ಗ್ರಾಮದಲ್ಲಿ ದಲಿತರ ಮೇಲೆ ಹೂಡಿರುವ ಸುಳ್ಳು ಮೊಕದ್ದಮೆ ಹಿಂತೆಗೆದುಕೊಳ್ಳಬೇಕು. ಸವಣೂರು ತಾಲೂಕಿನ ತೊಂಡುರು ಗ್ರಾಮದಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲಿಸಿ, ಅಲ್ಲಿ ಅಗತ್ಯ ಮೂಲಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು. ಹಾವೇರಿ ತಾಲೂಕಿನ ಶೀಲವಂತ ಗ್ರಾಮದಲ್ಲಿ ದೇವದಾಸಿಗೆ ನೀಡಿದ ಜಮೀನು ಕಬಳಿಸುವ ಹುನ್ನಾರ ನಡೆದಿದ್ದು, ತಡೆಯಬೇಕು ಎಂದು ಆಗ್ರಹಿಸುವ ಮನವಿಯನ್ನು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.
ನಿಂಗಪ್ಪ ನಿಂಬಕ್ಕನವರ, ಉಡಚಪ್ಪ ಮಾಳಗಿ, ಎನ್.ಎಂ. ಕಾಳೆ, ಗಡಿಗೆಪ್ಪ ಎನ್.ಎಂ., ಬಾಬಕ್ಕ ಬಳ್ಳಾರಿ, ಮಜೀದ್ ಮಾಳಗಿಮನಿ, ಸಂಜಯಗಾಂಧಿ ಸಂಜೀವಣ್ಣನವರ, ಬಸವರಾಜ ಕಟ್ಟಿಮನಿ, ನಿಂಗಪ್ಪ ಮರಿಗಪ್ಪನವರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement