ಸಾಧನೆ ಕೈ ಬಿಡಲಿಲ್ಲ
ಕನ್ನಡಪ್ರಭ ವಾರ್ತೆ, ಹಾವೇರಿ, ಡಿ.2
ಅಂಗ ವೈಕಲ್ಯ ಶಾಪವಲ್ಲ, ಛಲವಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದನ್ನು ಜಗತ್ತಿಗೆ ತೋರಿಸುವ ಕೆಲಸವನ್ನು ಮಾಧ್ಯಮಗಳು ಮಾಡುತ್ತವೆ. ಆದರೆ, ಮಾಧ್ಯಮ ಕ್ಷೇತ್ರದಲ್ಲೇ ಇರುವ ಅಂಥ ವ್ಯಕ್ತಿಗಳು ಬೆಳಕಿಗೆ ಬರುವುದಿಲ್ಲ. ಹೀಗೆ ಅಂಗವೈಕಲ್ಯ ಮೆಟ್ಟಿ ನಿಂತ ಪತ್ರಕರ್ತರೊಬ್ಬರು ನಮ್ಮ ನಡುವೆಯೇ ಇದ್ದಾರೆ.
ಸಂಜೆವಾಣಿ ಹಾಗೂ ಸ್ಥಳೀಯ ಮೂಡಣ ಪತ್ರಿಕೆಯ ಹಾವೇರಿ ವರದಿಗಾರರಾಗಿ ಕಳೆದ 2 ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ನಿಂಗಪ್ಪ ಚಾವಡಿ ಎಲ್ಲರಿಗೆ ಸ್ಫೂರ್ತಿಯಾಗಿದ್ದಾರೆ. ಹುಟ್ಟಿನಿಂದ ಒಂದು ಕೈ ಇಲ್ಲದಿದ್ದರೂ ಸಾಮಾನ್ಯರಂತೆಯೇ ಕೆಲಸ ಮಾಡುತ್ತಿದ್ದಾರೆ. ಎರಡೂ ಕೈ ಸರಿಯಿದ್ದವರು ಪತ್ರಿಕೆಯಲ್ಲಿ ಮಾಡಬಹುದಾದ ಎಲ್ಲ ಕಾರ್ಯವನ್ನು ಇವರು ಮಾಡುತ್ತಾರೆ. ಕಂಪ್ಯೂಟರ್ ಕೀಲಿ ಮಣೆಯನ್ನು ಒಂದೇ ಕೈಯಲ್ಲಿ ನಿಭಾಯಿಸುತ್ತಾರೆ. ಸುದ್ದಿ ಬರೆಯುವುದು, ಪುಟ ವಿನ್ಯಾಸ ಸೇರಿದಂತೆ ಒಂದು ಪತ್ರಿಕೆ ಹೊರಬರಲು ಅಗತ್ಯವಾದ ಎಲ್ಲ ಕಾರ್ಯವನ್ನು ನಿರ್ವಹಿಸುವಷ್ಟು ಕೌಶಲಗಳನ್ನು ಇವರು ಕರಗತ ಮಾಡಿಕೊಂಡಿದ್ದಾರೆ.
ಪತ್ರಿಕಾ ಕ್ಷೇತ್ರದಲ್ಲಿ 20 ವರ್ಷ
ಪಿಯುಸಿ ವರೆಗೆ ವಿದ್ಯಾಭ್ಯಾಸ ಪೂರೈಸಿರುವ ಇವರಿಗೆ ಆರಂಭದಿಂದಲೂ ಮಾಧ್ಯಮ ಕ್ಷೇತ್ರದತ್ತ ಒಲವಿತ್ತು. ಆರಂಭದ ಸುಮಾರು 10 ವರ್ಷಗಳ ಕಾಲ ದಾವಣಗೆರೆಯಿಂದ ಹೊರಬರುವ ಜನತಾವಾಣಿಯ ಹಾವೇರಿ ವರದಿಗಾರರಾಗಿ ಇವರು ಕಾರ್ಯನಿರ್ವಹಿಸಿದ್ದಾರೆ. ಸದ್ಯ ಸಂಜೆವಾಣಿ ವರದಿಗಾರರಾಗಿ ಹಾಗೂ ಸ್ಥಳೀಯ ಮೂಡಣ ದಿನಪತ್ರಿಕೆಯ ಸುದ್ದಿ ವಿಭಾಗವನ್ನು ನಿರ್ವಹಿಸುತ್ತಿದ್ದಾರೆ. ಬೆಳಗ್ಗೆಯಿಂದ ತಡರಾತ್ರಿ 12 ಗಂಟೆವರೆಗೂ ಇವರ ಕಾಯಕ ಮುಂದುವರಿಯುತ್ತದೆ. ಸಭೆ ಸಮಾರಂಭಗಳಿಗೆ ವರದಿ ಮಾಡಲು ಹೋಗುವುದು, ಕಚೇರಿಗೆ ಬಂದು ಬರೆಯುವುದು, ನಂತರ ಮೂಡಣ ಪತ್ರಿಕೆ ಅಚ್ಚಾಗುವ ವರೆಗಿನ ಹಂತದವರೆಗೂ ಏಕಾಂಗಿಯಾಗಿ ಕಾರ್ಯನಿರ್ವಹಿಸುತ್ತಾರೆ.
ಅಂಗ ವೈಕಲ್ಯತೆಯೇ ನಾಚುವಂತೆ ಇವರು ಸದಾ ಪಾದರಸದಂತೆ ಚುರುಕಾಗಿ ಕೆಲಸ ಮಾಡುತ್ತಾರೆ. ಇವರ ಕೆಲಸದ ವೈಖರಿ ಪತ್ರಕರ್ತರೂ ಸೇರಿದಂತೆ ಸಾಮಾನ್ಯ ಜನರಿಗೆ ಮಾದರಿಯಂತಿದೆ.
ಕುಟುಂಬದ ಜವಾಬ್ದಾರಿ
ಹಾವೇರಿ ತಾಲೂಕಿನ ಬಸಾಪುರ ಗ್ರಾಮದವರಾದ ನಿಂಗಪ್ಪ ಚಾವಡಿ ನಾಲ್ಕು ಜನ ಸಹೋದರರ ಪೈಕಿ ಹಿರಿಯವರು. ತಂದೆ ನಿಧನಾನಂತರ ಕುಟುಂಬದ ಎಲ್ಲ ಜವಾಬ್ದಾರಿ ಇವರ ಹೆಗಲ ಮೇಲೆ ಬಿದ್ದಿದೆ. ವಿದ್ಯುತ್ ಅವಘಡದಿಂದ ಒಬ್ಬ ಸಹೋದರನ ಕೈ ಕೂಡ ಕತ್ತರಿಸಲಾಗಿದೆ. ಮತ್ತೊಬ್ಬ ಗ್ರಾಮದಲ್ಲಿ ಕುರಿ ಕಾಯುವ ಕಸುಬು ಮಾಡುತ್ತಾರೆ. ಕುಟುಂಬ ನಿರ್ವಹಣೆ ಹೊಣೆ ನಿಂಗಪ್ಪ ಅವರೇ ಮೇಲೆಯೇ ಇದ್ದು, ಅದನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಒಂದೇ ಕೈಯಲ್ಲಿ ಸ್ಕೂಟಿ ಚಲಾಯಿಸುವ ಇವರು, ಸದಾ ಚಟುವಟಿಕೆ ಹಾಗೂ ಲವಲವಿಕಿಯಿಂದಲೇ ಇರುತ್ತಾರೆ. ಸಂಘ-ಸಂಸ್ಥೆಗಳಲ್ಲಿ ಕೂಡ ತಮ್ಮನ್ನು ತೊಡಗಿಸಿಕೊಂಡಿದ್ದು, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೇ ಇವರ ಕ್ರಿಯಾಶೀಲತೆಯನ್ನು ತೋರಿಸುತ್ತದೆ.
ಅವಕಾಶ ಕೊಡಿ
ವಿಕಲಚೇತನರ ಬಗ್ಗೆ ಸಮಾಜದ ಕೆಲವರಲ್ಲಿ ಕೀಳರಿಮೆಯಿದೆ. ಅಲ್ಲದೇ ಅಂಗವಿಕಲರೂ ತಮ್ಮಿಂದ ಏನೂ ಆಗದು ಎಂಬ ಕೀಳರಿಮೆ ಬೆಳೆಸಿಕೊಂಡಿರುತ್ತಾರೆ. ಆದರೆ, ನಮ್ಮಂಥ ವಿಕಲಚೇತನರ ಬಗ್ಗೆ ಯಾರೂ ಕನಿಕರ ತೋರುವುದು ಬೇಡ. ನಮಗೂ ಅವಕಾಶ ಸಿಕ್ಕರೆ ಸಾಧನೆ ಮಾಡುತ್ತೇವೆ ಎಂಬ ಆತ್ಮವಿಶ್ವಾಸದ ನುಡಿಯನ್ನು ನಿಂಗಪ್ಪ ಆಡುತ್ತಾರೆ.
ಸರ್ಕಾರಿ ಸೌಲಭ್ಯಗಳಿಗೆ ಎಂದೂ ಮನಸ್ಸು ಮಾಡದ ನಿಂಗಪ್ಪ ಅವರ ಮಾತು ಅಂಗವಿಕಲರಿಗೆ ಸ್ಫೂರ್ತಿ ನೀಡುವಂತಿದೆ. ಸರ್ಕಾರದ ಸೌಲಭ್ಯಗಳಿಗೆ ಎಡತಾಕುವ ಮಂದಿಗೆ ಚಾಟಿಯಂತಿದೆ.
ನಾನು ಅಂಗವಿಕಲನಾಗಿದ್ದರೂ ಇಲ್ಲಿ ವರೆಗೆ ಸರ್ಕಾರದ ಯಾವ ಸೌಲಭ್ಯವನ್ನೂ ಪಡೆದಿಲ್ಲ. ಅದರ ಅಗತ್ಯವೂ ಇಲ್ಲ. ಕೆಲಸ ಮಾಡುವ ಮನಸ್ಸಿದ್ದರೆ ಒಂದು ಕೈ ಕೊರತೆ ಗೌಣವಾಗುತ್ತದೆ. ಈ ಕೊರತೆ ಎಂದೂ ನನ್ನನ್ನು ಬಾಧಿಸಿಲ್ಲ. ಲವ್ ಮಾಡಿ ಅಂತರ್ಜಾತಿ ವಿವಾಹ ಮಾಡಿಕೊಂಡಿದ್ದೇನೆ. ಪತ್ನಿ ಎಸ್ಸಿ ಆದ್ದರಿಂದ ಸರ್ಕಾರದ ಸೌಲಭ್ಯ ಪಡೆಯುವಂತೆ ಕೆಲವರು ಸಲಹೆ ನೀಡಿದ್ದರು. ಆದರೆ, ನನಗೆ ಅದರ ಅಗತ್ಯ ಕಾಣಲಿಲ್ಲ. ನನಗೆ ಕೆಲಸ ನೀಡಿದ ಪತ್ರಿಕೆ ಮಾಲೀಕರು ನನ್ನ ಮೇಲಿಟ್ಟ ವಿಶ್ವಾಸವನ್ನು ಉಳಿಸಿಕೊಂಡ ತೃಪ್ತಿಯಿದೆ.
-ನಿಂಗಪ್ಪ ಚಾವಡಿ
-ನಾರಾಯಣ ಹೆಗಡೆ