ಹಾವೇರಿ ಸ್ವಚ್ಛತೆಗೆ ರು. 20 ಲಕ್ಷ
ಕನ್ನಡಪ್ರಭ ವಾರ್ತೆ, ಹಾವೇರಿ, ಡಿ. 2
ಗಬ್ಬೆದ್ದು ನಾರುತ್ತಿದ್ದ ನಗರದ ಚರಂಡಿಗಳಿಗೆ ನೈರ್ಮಲ್ಯದ ಭಾಗ್ಯ ಕೂಡಿ ಬಂದಿದೆ. ಇಲ್ಲಿಯ ನಗರಸಭೆಯಿಂದ ಹಮ್ಮಿಕೊಳ್ಳಲಾದ ಚರಂಡಿಗಳ ಸ್ವಚ್ಛತಾ ಅಭಿಯಾನಕ್ಕೆ ನಗರದ ಲಾಲ್ ಬಹದ್ದೂರ್ ಶಾಸ್ತ್ರೀ ತರಕಾರಿ ಮಾರುಕಟ್ಟೆ ಬಳಿ ಶಾಸಕ ರುದ್ರಪ್ಪ ಲಮಾಣಿ ಚಾಲನೆ ನೀಡಿದರು.
ಈ ಮೊದಲು ನಗರದ ಸ್ವಚ್ಛತೆಗೆ ಕೇವಲ ರು. 10 ಲಕ್ಷ ಮೀಸಲಿಡಲಾಗಿತ್ತು. ನಗರ ನೈರ್ಮಲ್ಯಕ್ಕೆ ಅಷ್ಟು ಅನುದಾನ ಸಾಕಾಗದ ಹಿನ್ನೆಲೆಯಲ್ಲಿ ಶನಿವಾರ ನಡೆದ ನಗರಸಭೆ ವಿಶೇಷ ಸಾಮಾನ್ಯ ಸಭೆಯಲ್ಲಿ ಹೆಚ್ಚುವರಿಯಾಗಿ ರು. 10 ಲಕ್ಷ ನೀಡಲು ತೀರ್ಮಾನಿಸಲಾಗಿತ್ತು. ನಗರದ ಗಟಾರಗಳ ಸ್ವಚ್ಛತೆಗೆ ರು. 20 ಲಕ್ಷ ತೆಗೆದಿರಿಸಲಾಗಿದ್ದು, ನಗರದ ಒಟ್ಟು 31 ವಾರ್ಡುಗಳಲ್ಲಿನ ಗಟಾರಗಳಲ್ಲಿ ತುಂಬಿರುವ ಹೂಳನ್ನು ತೆಗೆಯಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಅಭಿಯಾನದಲ್ಲಿ 50 ಪೌರಕಾರ್ಮಿಕರು ಪಾಲ್ಗೊಂಡಿದ್ದು, 12 ಟ್ರ್ಯಾಕ್ಟರ್ ಹಾಗೂ 4 ಜೆಸಿಬಿ ಬಳಸಿಕೊಳ್ಳಲಾಗುತ್ತಿದೆ. ನಗರದ ಶಾಸ್ತ್ರೀ ಮಾರುಕಟ್ಟೆ, ಜಿಲ್ಲಾಸ್ಪತ್ರೆ ಹಿಂಭಾಗದ ಮುರುಘರಾಜೇಂದ್ರ ನಗರ, ಮೆಹಬೂಬ ನಗರ, ಶಿವಲಿಂಗೇಶ್ವರ ನಗರ, ಜಿ.ಎಚ್. ಕಾಲೇಜು ರಸ್ತೆ ಗಟಾರಗಳ ತ್ಯಾಜ್ಯ ತೆರವಿಗೆ ಚಾಲನೆ ನೀಡಲಾಯಿತು.
ತ್ಯಾಜ್ಯ ಸಂಸ್ಕರಣಾ ಘಟಕ: ಜಿಲ್ಲಾಸ್ಪತ್ರೆಯ ತ್ಯಾಜ್ಯ ನಿರ್ವಹಣೆಗೆ ಸಂಸ್ಕರಣಾ ಘಟಕವನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಯೋಜನೆ ರೂಪಿಸಲಾಗಿದೆ. ಸರ್ಕಾರದ ಹಣಕಾಸು ವಿಭಾಗಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪೌರಾಡಳಿತ ಸಚಿವರೊಂದಿಗೆ ಚರ್ಚಿಸಲಾಗಿದೆ. ಶೀಘ್ರ ಅನುಮೋದನೆ ದೊರೆತು ಟೆಂಡರ್ ಕರೆಯಲಾಗುವುದು ಎಂದು ಲಮಾಣಿ ಹೇಳಿದರು.
ತುಂಗಭದ್ರಾಕ್ಕೆ ಬ್ಯಾರೇಜ್: ನಗರದ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ತುಂಗಭದ್ರಾ ನದಿಗೆ ಬ್ಯಾರೇಜ್ ನಿರ್ಮಾಣ ಕುರಿತಂತೆ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಚರ್ಚಿಸಲಾಗಿದೆ. ಗುತ್ತಲ ಸಮೀಪದ ತುಂಗಭದ್ರಾ ನದಿಯ ಜಾಕ್‌ವೆಲ್ ಬಳಿ ಕನಿಷ್ಠ 5ರಿಂದ 6 ಅಡಿ ಎತ್ತರದ ಬಾಂದಾರ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ಅಂತಾರಾಜ್ಯ ನದಿ ನೀರು ಹಂಚಿಕೆ ಸಮಸ್ಯೆಯ ನೆಪವೊಡ್ಡಿ ಇಷ್ಟು ದಿನಗಳ ಕಾಲ ತುಂಗಭದ್ರಾ ನದಿಗೆ ಬಾಂದಾರ ನಿರ್ಮಿಸಲು ಸಾಧ್ಯವಾಗಿರಲಿಲ್ಲ. ಆದರೆ ಬೇರೆ ರಾಜ್ಯಗಳಲ್ಲಿ ಕುಡಿಯುವ ನೀರಿನ ಉಪಯೋಗಕ್ಕಾಗಿ ನದಿಗಳಲ್ಲಿ ಬಾಂದಾರಗಳನ್ನು ನಿರ್ಮಾಣ ಮಾಡಿದ್ದಾರೆ. ಇಲ್ಲೂ ಬಾಂದಾರ ನಿರ್ಮಿಸಿದರೆ ತಪ್ಪೇನಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಅಧಿಕಾರಿಗಳಿಗೆ ತಿಳಿಸಿರುವುದಾಗಿ ಹೇಳಿದರು.
ಐಡಿಎಸ್‌ಎಂಟಿ ಮಳಿಗೆ: ನಗರದ ಗೂಗಿಕಟ್ಟೆಯಲ್ಲಿ ರು. 17 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಐಡಿಎಸ್‌ಎಂಟಿ ಮಳಿಗೆ ಹಾಗೂ ರು. 6 ಕೋಟಿ ಅಂದಾಜು ವೆಚ್ಚದ ನಗರಸಭೆ ಆಡಳಿತ ಕಚೇರಿ ನಿರ್ಮಾಣಕ್ಕೆ ನೀಲನಕ್ಷೆಯನ್ನು ತಯಾರಿಸಲಾಗಿದೆ. ಇದಕ್ಕಾಗಿ ಹಣಕಾಸು ನೆರವಿಗೆ ಮುಖ್ಯಮಂತ್ರಿ ಹಾಗೂ ಪೌರಾಡಳಿತ ಸಚಿವರನ್ನು ಕೇಳಿಕೊಳ್ಳಲಾಗಿದ್ದು, ಭರವಸೆ ಸಿಕ್ಕಿದೆ ಎಂದರು.
ನಗರಸಭೆ ಪೌರಾಯುಕ್ತ ಬಿ.ಎಸ್. ಶಿವಕುಮಾರಯ್ಯ ವಿವರ ನೀಡಿ, ಗಟಾರದಿಂದ ತೆಗೆದ ತ್ಯಾಜ್ಯವನ್ನು ನಗರದ ಹೊರವಲಯದ ವೀರಾಪುರದಲ್ಲಿ ನಗರಸಭೆಯ 10 ಎಕರೆ ಜಾಗದಲ್ಲಿರುವ ಸೀವೇಜ್ ಟ್ರೀಟ್‌ಮೆಂಟ್ ಟ್ಯಾಂಕ್ ಪ್ರದೇಶದಲ್ಲಿ ಒಂದು ವಾರ ಕಾಲ ಸಂಗ್ರಹಿಸಿ, ಗೌರಾಪುರದಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಲಾಗುವುದು ಎಂದರು.
ನಗರಸಭಾ ಅಧ್ಯಕ್ಷ ಐ.ಯು. ಪಠಾಣ, ಉಪಾಧ್ಯಕ್ಷೆ ರತ್ನಾ ಭೀಮಕ್ಕನವರ್, ಸದಸ್ಯರಾದ ಸಂಜೀವಕುಮಾರ ನೀರಲಗಿ, ಸುರೇಶ ದೊಡ್ಡಮನಿ, ರಮೇಶ ಕಡಕೋಳ, ಶಿವಬಸಪ್ಪ ಹಲಗಣ್ಣನವರ, ಕರಿಬಸಪ್ಪ ಹಳದೂರ, ವೀಣಾ ಹಲಗಣ್ಣನವರ, ರೇಣುಕಾ ಪೂಜಾರ, ಪಾರ್ವತಮ್ಮ ಹಲಗಣ್ಣನವರ, ಸಚಿನ ಡಂಬಳ, ಮರಿಗೌಡರ, ಅಭಿಯಂತ ಸುಭಾಶ ಕಂಬಳಿ ಇದ್ದರು.