ಓದುವ ಹವ್ಯಾಸ ಬೆಳೆಸಿಕೊಳ್ಳಿ
ಹಿರೇಕೆರೂರು: ವಾಚನಾಲಯ ದೇವಾಲಯವಿದ್ದಂತೆ. ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡು ಜ್ಞಾನ ಹೆಚ್ಚಿಸಿಕೊಳ್ಳಬೇಕು. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸರ್ಕಾರಿ ನೌಕರರು ಆರಂಭಿಸಿದ ಗ್ರಂಥಾಲಯಕ್ಕೆ ಉಚಿತವಾಗಿ ಪತ್ರಿಕೆಗಳು ಬರುವಂತೆ ಕ್ರಮ ಜರುಗಿಸಲಾಗುವುದು ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಬಿ. ಕಿನ್ನಾಳ ತಿಳಿಸಿದರು. ಪಟ್ಟಣದ ನೌಕರರ ಭವನದಲ್ಲಿ ಆರಂಭಿಸಿದ ನೌಕರರ ವಾಚನಾಲಯಉದ್ಘಾಟಿಸಿ ಮಾತನಾಡಿದರು. ನೌಕರರ ಸಂಘವನ್ನು ಸಂವರ್ಧನೆ ಗೊಳಿಸುವ ನಿಟ್ಟಿನಲ್ಲಿ 2014ರ ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ನೌಕರರ ಸಂಘದ ಸದಸ್ಯತ್ವಕ್ಕೆ ಚಾಲನೆ ನೀಡಲಾಗುವುದು. ಸದಸ್ಯರಾಗುವವರು ರು. 100 ಪ್ರವೇಶಧನ ಪಾವತಿಸಿ ಸದಸ್ಯತ್ವ ಪಡೆಯುವ ಮೂಲಕ ಸಂಘದ ಬೆಳವಣಿಗೆಗೆ ಸಹಕರಿಸಬೇಕು. ಸಂಘದ ಎಲ್ಲ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಮುಂಬರುವ ದಿನಗಳಲ್ಲಿ ಸರ್ಕಾರಿ ನೌಕರರಿಗೆ ಕ್ರೀಡಾಕೂಟ ಏರ್ಪಡಿಸಲಾಗವುದು ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ.ಬಿ. ಸಾವಜ್ಜೀವಯರ ಮಾತನಾಡಿ, ಸಂಘವು ಕ್ರಿಯಾತ್ಮಕ, ಕಾನೂನಾತ್ಮಕವಾಗಿ ಕೆಲಸ ಮಾಡಲಿ. ಇದೀಗ ಆರಂಭಿಸಿದ ಗ್ರಂಥಾಲಯದಲ್ಲಿ ಕಾನೂನಿನ ಮಾಹಿತಿ ಪುಸ್ತಕಗಳನ್ನು ಒದಗಿಸುವ ಮೂಲಕ ಸಾರ್ವಜನಿಕರಿಗೆ ಕಾನೂನಿನ ಮಾಹಿತಿ ದೊರೆಯುವಂತೆ ಮಾಡಿ ಮಾದರಿ ವಾಚನಾಲಯವಾಗುವಂತೆ ಮಾಡಬೇಕು ಎಂದರು.
ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಟಿ. ಬಿ. ಹೊಸೂರ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ನಾಗರಾಜ ಮಾಳಗಿಮನಿ, ಎಸ್.ಎಚ್. ಜಾಡರ, ಐ.ಎಚ್. ಇಟಗಿ, ಎಚ್.ಆರ್. ನಾಯಕ, ಜಿ.ವಿ. ಭಜಂತ್ರಿ, ಎಂ.ವಿ. ಮರಡಿ, ಬೂದಿಗೌಡ ಪಾಟೀಲ, ಮಂಗಳಾ ಬಣಕಾರ, ಚಂದ್ರಕಲಾ ನೀಲನಗೌಡ್ರ ಇದ್ದರು.