ಚಿಣ್ಣರ ಅಳಲು ಕೇಳೋರೇ ಇಲ್ಲ!
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಡಿ. 3
ಸೈಕಲ್ ಕೊಡಿ, ಬೀದಿದೀಪ ಬೇಕು, ಜೂಜಾಟಕ್ಕೆ ಕಡಿವಾಣ ಹಾಕಿ, ವೈದ್ಯಕೀಯ ತಪಾಸಣೆ ನಡದಿಲ್ಲ, ನೀರಿನ ತೊಟ್ಟಿ ತೊಳೆದಿಲ್ಲ, ಶೌಚಾಲಯ ಬಳಸಲಾರದಂತಿವೆ, ಸಾರಾಯಿ ಕುಡಿದು ಬರುವ ಉಪಾಧ್ಯಾಯರಿದ್ದಾರೆ ಎಂದು ಶಾಲೆ ಮಕ್ಕಳು ಅಳಲು ತೋಡಿಕೊಂಡರು.
ತಾಲೂಕಿನ ಕರಗುದರಿ ಗ್ರಾಪಂ ಸಹಯೋಗದಲ್ಲಿ ಹಾನಗಲ್ಲಿನ ರೋಶನಿ ಸಮಾಜ ಸೇವಾ ಸಂಸ್ಥೆ ಆಯೋಜಿಸಿದ್ದ ಮಕ್ಕಳ ಗ್ರಾಮಸಭೆಯ ಚಿತ್ರಣವಿದು. ಆದರೆ, ಮಕ್ಕಳ ನೋವು ಕೇಳಲು ಅಧಿಕಾರಿಗಳೇ ಇರಲಿಲ್ಲ. ಗ್ರಾಪಂ ಅಭಿವೃದ್ಧಿ ಅಧಿಕಾರಿ ಟಿ.ಎನ್. ಚೋಕಳೆ ಮಾತ್ರ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು.
ಕರಗುದರಿ ಗ್ರಾಪಂ ವ್ಯಾಪ್ತಿಯ ಮಹರಾಜಪೇಟ, ನೆಗವಣಗಿ, ನಿಟಗಿನಕೊಪ್ಪ, ರತ್ನಾಪುರ, ಗುಂಡೂರು, ಜಾನಗುಂಡಿ ಹಾಗೂ ಕರಗುದರಿ ಗ್ರಾಮಗಳ 300ಕ್ಕೂ ಅಧಿಕ ವಿದ್ಯಾರ್ಥಿಗಳು ಮಕ್ಕಳ ಗ್ರಾಮಸಭೆಯಲ್ಲಿ ಪಾಲ್ಗೊಂಡಿದ್ದರು.
ಗ್ರಾಪಂ ಉಪಾಧ್ಯಕ್ಷ ಮಹಮ್ಮದ್ ಇಕ್ಬಾಲ್ ಡೊಳ್ಳೇಶ್ವರ, ನಿರ್ಮಲಾ ಹರಿಜನ, ಗೀತಾ ಬೆಂಗೇರಿ, ಶಂಭು, ರೋಶನಿ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕಿ ಸಿಸ್ಟರ್ ಅನಿತಾ ಪಾಲ್ಗೊಂಡಿದ್ದರು. ಸರ್ಕಾರ ಸೈಕಲ್ ಕೊಡುವುದಾಗಿ ಹೇಳಿ ವಂಚಿಸಿದೆ. ಸೈಕಲ್‌ಗಾಗಿ ಕಾದು ನಾವು ನಿರಾಶರಾಗಿದ್ದೇವೆ. ಅದು ಸಿಗುವ ವಿಶ್ವಾಸವನ್ನೇ ಕೈಬಿಡಬೇಕೇ ಎಂದು ಮಕ್ಕಳು ಪ್ರಶ್ನಿಸಿದರು.
ವಿದ್ಯುತ್ ಕಣ್ಣಾಮುಚ್ಚಾಲೆ ಆಡಿದರೆ ಓದುವುದು ಹೇಗೆ? ಬೀದಿ ದೀಪಗಳಿಲ್ಲದೆ ಹಳ್ಳಿಗಳ ಬೀದಿಗಳಲ್ಲಿ ಮಕ್ಕಳು ಓಡಾಡುವುದು ಸಾಧ್ಯವೇ? ಗ್ರಾಮದಲ್ಲಿ ಅವಿತರವಾಗಿರುವ ಜೂಜಾಟಕ್ಕೆ ಕಡಿವಾಣ ಹಾಕುವವರು ಯಾರು? ಅನಧಿಕೃತ ಸಾರಾಯಿ ಅಂಗಡಿಗಳಿಂದಾಗಿ ಕುಡುಕರ ಕಾಟ ಹೆಚ್ಚಿದೆ. ಇದಕ್ಕೆ ಪರಿಹಾರವೇ ಇಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಂಬಾಕು ಸೇವಿಸಿ ಗ್ರಾಮಸಭೆಗೆ ಬಂದ ಹಿರಿಯರಿಗೂ ಛೀಮಾರಿ ಹಾಕಿ, ಅದರ ದುಷ್ಪರಿಣಾಮಗಳ ಬಗ್ಗ ಎಚ್ಚರಿಸಿದರು. ಮಕ್ಕಳ ವೈದ್ಯಕೀಯ ತಪಾಸಣೆ ಶಾಲೆಗಳಲ್ಲಿ ನಡೆದಿಲ್ಲ. ನೀರಿನ ತೊಟ್ಟಿ ತೊಳೆದಿಲ್ಲ. ಶೌಚಾಲಯ ಸ್ವಚ್ಛಗೊಳಿಸದೆ ಬಳಸಲು ಯೋಗ್ಯವಾಗಿ ಉಳಿದಿಲ್ಲ. ಮಕ್ಕಳ ಗ್ರಾಮಸಭೆ ಔಪಚಾರಿಕವಾಗಿ ಆಗದೆ, ಸಮಸ್ಯೆಗೆ ಪರಿಹಾರ ಸಿಗಬೇಕು ಎಂದು ಒತ್ತಾಯ ಮಾಡಿದರು.
ವಿವಿಧ ಶಾಲೆ ವಿದ್ಯಾರ್ಥಿಗಳಾದ ಸತೀಶ ಲಮಾಣಿ, ವಿಜಯಲಕ್ಷ್ಮೀ ನೀರಲಗಿ, ನಾಗರತ್ನಾ ಅಂಗಡಿ, ಸ್ವಪ್ನಾ ಹತ್ತೀಕಾಳ, ಸುನೀತಾ ಬೆಳವತ್ತಿ, ವಿಷ್ಣು ಲಮಾಣಿ, ಪ್ರಶಾಂತ, ಅರುಣ ಬಂಕಾಪುರ, ಸಂಗಮೇಶ, ಜ್ಯೋತಿ ಕೊಪ್ಪದ, ಈರಣ್ಣ ವಿರಕ್ತಮಠ, ಕಿರಣ ಓಲೇಕಾರ ಮಾತನಾಡಿದರು.