ವಿಎಸ್ಸೆಸ್ ಮೂಲಕ ಬೆಳೆವಿಮೆ ಕೊಡಿ
ಬ್ಯಾಡಗಿ: ಬೆಳೆವಿಮೆ ಹಣವನ್ನು ವ್ಯವಸಾಯ ಸೇವಾ ಸಹಕಾರಿ ಸಂಘಗಳ ಮೂಲಕವೇ ಪಾವತಿಸುವಂತೆ ಆಗ್ರಹಿಸಿ ರೈತ ಸಂಘದ ನೇತೃತ್ವದಲ್ಲಿ ವಿಎಸ್ಸೆಸ್ ಆಡಳಿತ ಮಂಡಳಿ ಸದಸ್ಯರು ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು.
ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಿಂದ ಮೆರವಣಿಗೆ ಸಾಗಿದ ಪ್ರತಿಭಟನಾಕಾರರು, ಕೆಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಘೋಷಣೆ ಕೂಗುತ್ತಾ, ತಹಸೀಲ್ದಾರ್ ಕಚೇರಿ ತಲುಪಿದರು.
ಗಂಗಣ್ಣ ಎಲಿ ಮಾತನಾಡಿ, ಕೆಸಿಸಿ ಬ್ಯಾಂಕ್ ನಿರ್ದೇಶಕರು ಆದೇಶದಲ್ಲಿ ವಿಎಸ್ಸೆಸ್ ಕಾರ್ಯದರ್ಶಿಗಳನ್ನು ಸಂಶಯಾಸ್ಪದವಾಗಿ ಉಲ್ಲೇಖಿಸಿದ್ದು ಖಂಡನೀಯ. ಬೆಳೆವಿಮೆ ತುಂಬುವ ವೇಳೆ ವಿಎಸ್ಸೆಸ್ಗಳನ್ನು ಬಳಸಿಕೊಂಡ ಕೆಸಿಸಿ ಬ್ಯಾಂಕ್ ಹಣ ಬಂದ ಮೇಲೆ ಅಮಾನತು ಖಾತೆಯಲ್ಲಿ ಇಟ್ಟಿದ್ದು ಸರಿಯಲ್ಲ ಎಂದರು.
ಕೃಷಿಕರ ವ್ಯವಹಾರಗಳು ವಿಎಸ್ಸೆಸ್ಗಳ ಮೂಲಕ ನಡೆಯುತ್ತಿವೆ. ಸರ್ಕಾರವೂ ನಂಬಿಕೆಯಿಟ್ಟು ಯೋಜನೆಗಳನ್ನು ಅವುಗಳ ಮೂಲಕವೇ ರೈತರಿಗೆ ವಿತರಿಸುತ್ತಿದೆ. ಕೆಸಿಸಿ ಬ್ಯಾಂಕ್ನ ಇಂಥ ನಿರ್ಧಾರ ಸರಿಯಲ್ಲ ಎಂದರು.
ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, 21 ಸಾವಿರ ಬೆಳೆವಿಮೆ ಫಲಾನುಭವಿಗಳಿಗೆ ತಾಲೂಕಿನ ಕೆಸಿಸಿ ಬ್ಯಾಂಕ್ ಏಕೈಕ ಶಾಖೆಯಿಂದ ವಿತರಣೆ ಅಸಾಧ್ಯ. ದಿನಕ್ಕೆ 100 ರೈತರಿಗೆ ಬೆಳೆವಿಮೆ ವಿತರಿಸಿದರೂ ಆರು ತಿಂಗಳು ಬೇಕು. ಬೆಳೆವಿಮೆ ಬರುವುದು ಒಂದು ವರ್ಷ ತಡವಾಗಿದೆ. ರೈತರು ಇನ್ನೆಷ್ಟು ಕಾಯಲು ಸಾಧ್ಯ? ಎಂದರು.
ರೈತ ಮುಖಂಡ ಅಶೋಕ ಅಗಡಿ ಮಾತನಾಡಿ, ಕೆಸಿಸಿ ಬ್ಯಾಂಕ್ ಮೂಲಕ ಬೆಳೆವಿಮೆ ಹಣ ಪಡೆಯಲು ಉಳಿತಾಯ ಖಾತೆ ಹೊಂದುವುದು ಕಡ್ಡಾಯ. ಖಾತೆ ಆರಂಭಿಸಲು ಕನಿಷ್ಠ ರು. 600 ವ್ಯಯಿಸಬೇಕು. ಇದು ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಆರ್ಥಿಕ ಹೊರೆ. ಕೆಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದು ಸರಿಯಲ್ಲ ಎಂದರು.
ಬಾಬು ಹೂಲಿಹಳ್ಳಿ ಮಾತನಾಡಿ, ಕೆಸಿಸಿ ಬ್ಯಾಂಕ್ ತನ್ನ ನಿರ್ಧಾರ ಕೈಬಿಡದಿದ್ದರೆ ವಿಎಸ್ಸೆಸ್ ಬ್ಯಾಂಕ್ನಲ್ಲಿ ಖಾತೆ ಹೊಂದಿರುವ ಯಾವೊಬ್ಬ ರೈತರೂ ಕೆಸಿಸಿ ಬ್ಯಾಂಕ್ನಿಂದ ಹಣ ಪಡೆಯುವುದಿಲ್ಲ. ಬ್ಯಾಂಕಿಗೇ ಬೀಗ ಹಾಕಿ ಪ್ರತಿಭಟಿಸುತ್ತೇವೆ ಎಂದು ಎಚ್ಚರಿಸಿದರು. ಮನವಿ ಸಲ್ಲಿಕೆ ವೇಳೆ ಕೆಂಪೇಗೌಡ, ದಿಲೀಪ್ ಕುಮಾರ ಮೇಗಳಮನಿ, ಪ್ರಶಾಂತ್ ಹಾಲನಗೌಡ್ರ ಇದ್ದರು.