ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸರ್ವೀಸ್ ರಸ್ತೆ ದುರಸ್ತಿ ಮಾಡಿಲ್ಲವೇಕೆ?

Lingaraj Badiger
Updated On : 4 Dec 2013, 11:37 am

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಡಿ. 3
ದುರಸ್ತಿ ಕಾಣದೆ ಮೋಟೆಬೆನ್ನೂರಿನ ಸರ್ವೀಸ್ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಜನತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ನೀವು ಏನು ಮಾಡುತ್ತಿದ್ದೀರಿ ಎಂದು ಸಂಸದ ಶಿವಕುಮಾರ ಉದಾಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆಯ ದುರವಸ್ಥೆ ಕುರಿತು ಸಾರ್ವಜನಿಕರ ದೂರು ಆಲಿಸಲು ಮಂಗಳವಾರ ಮೋಟೆಬೆನ್ನೂರಿಗೆ ಆಗಮಿಸಿದ್ದ ಅವರು, ಸುಗಮ ಸಂಚಾರಕ್ಕೆ ಗುಣಮಟ್ಟದ ರಸ್ತೆಗಳು ಬೇಕು. ಇದಕ್ಕಾಗಿ ಸರ್ಕಾರ ಕೋಟಿಗಟ್ಟಲೆ ಹಣ ವ್ಯಯಿಸುತ್ತಿದೆ. ಆದರೆ, ಪ್ರಾಧಿಕಾರದ ನಿರ್ಲಕ್ಷ್ಯದಿಂದ ಸಾರ್ವಜನಿಕರಿಗೆ ಅನುಕೂಲ ಆಗುತ್ತಿಲ್ಲ ಎಂದರು.
ಸರ್ವೀಸ್ ರಸ್ತೆ ಪ್ರಾಧಿಕಾರದ ನಿರ್ಲಕ್ಷ್ಯದಿಂದ ಎಲ್ಲೆಂದರಲ್ಲಿ ಗುಂಡಿ ಬಿದ್ದಿದೆ. ಸಂಚಾರ ಸ್ಥಗಿತಗೊಂಡಿದೆ. ರಾಷ್ಟ್ರೀಯ ಹೆದ್ದಾರಿ ಎಷ್ಟು ಸುರಕ್ಷಿತ ಎಂದು ಜನರು ಪ್ರಶ್ನಿಸುವಂತಾಗಿದೆ. ಚರಂಡಿ ವ್ಯವಸ್ಥೆ ಕಲ್ಪಿಸಿದ ಮೇಲೆಯೇ ಸರ್ವೀಸ್ ರಸ್ತೆ ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಉದಾಸಿ ತಾಕೀತು ಮಾಡಿದರು.
ದ್ವಿಮುಖ ಸಂಚಾರ ಬೇಕು: ಶಿವಬಸಪ್ಪ ಕುಳೇನೂರ ಮಾತನಾಡಿ, ನಿತ್ಯ 150ಕ್ಕೂ ಹೆಚ್ಚು ಬಸ್‌ಗಳು ಗ್ರಾಮಕ್ಕೆ ಬರುತ್ತವೆ. ಆದರೆ, ಕೆಳಸೇತುವೆ ಏಕಮುಖವಾಗಿದ್ದು, ಒಮ್ಮೆಲೇ ಎರಡು ಬಸ್‌ಗಳು ಬಂದರೆ ಸಂಚಾರ ಸಾಧ್ಯವಿಲ್ಲ. ಇನ್ನೊಂದು ಕೆಳಸೇತುವೆ ನಿರ್ಮಿಸಿ, ದ್ವಿಮುಖ ಸಂಚಾರಕ್ಕೆ ಅನುಕೂಲ ಕಲ್ಪಿಸಿ ಎಂದರು.
ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಮೋಟೆಬೆನ್ನೂರಿನಲ್ಲಿ ರಿಯಾಯಿತಿ ಪಾಸ್ ಇರುವ ಸಾವಿರಾರು ವಿದ್ಯಾರ್ಥಿಗಳು ಹಾವೇರಿ, ರಾಣೆಬೆನ್ನೂರು ಕಾಲೇಜುಗಳಿಗೆ ತೆರಳುತ್ತಾರೆ. ಸಾರಿಗೆ ಸಂಸ್ಥೆ ಎಲ್ಲ ವೇಗದೂತ ಬಸ್ಸುಗಳಿಗೆ ನಿಲುಗಡೆಗೆ ಅವಕಾಶವಿದ್ದರೂ ಸರ್ವೀಸ್ ರಸ್ತೆ ಕೆಟ್ಟಿದ್ದರಿಂದ ಕೆಳಗಿಳಿಸಲು ಚಾಲಕರು ಸಿದ್ಧರಿಲ್ಲ. ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ದೂರಿದರು.
ಮನವಿಗೆ ಸ್ಪಂದಿಸಿಲ್ಲ: ಜಿಪಂ ಸದಸ್ಯ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ಮೋಟೆಬೆನ್ನೂರು ಗ್ರಾಮದಲ್ಲಿ ಸೇತುವೆ ನಿರ್ಮಿಸಿದ್ದಾರೆ. ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಕೆಳಗಿಳಿಸಿದರೆ, ವಾಹನಕ್ಕೆ ಅಪಾಯ ತಪ್ಪಿದ್ದಲ್ಲ. ಕೃಷಿ ಪ್ರಧಾನವಾಗಿರುವ ಗ್ರಾಮದ ಈ ರಸ್ತೆಯಲ್ಲಿ ಚಕ್ಕಡಿ ಸಂಚರಿಸಲೂ ಸಾಧ್ಯವಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದರು.
ಮಂಜುನಾಥ ಬೆನಕನಕೊಂಡ ಮಾತನಾಡಿ, ಡಿವೈಡರ್‌ಗಳಲ್ಲಿ ಜಾನುವಾರು ಮೇಯಿಸುತ್ತಿದ್ದು, ಮುನ್ಸೂಚನೆಯಿಲ್ಲದೇ ರಸ್ತೆಗಿಳಿಯುವ ಅವುಗಳನ್ನು ಬದುಕಿಸಬೇಕೋ ಅಥವಾ ತಾನು ಬದುಕಬೇಕೋ ಎಂಬ ಧರ್ಮ ಸಂಕಟದಲ್ಲಿ ವಾಹನ ಚಾಲಕರಿದ್ದಾರೆ. ವೇಗವಾಗಿ ಸಂಚರಿಸುವ ವಾಹನಗಳನ್ನು ಹಠಾತ್ತಾಗಿ ನಿಯಂತ್ರಿಸುವುದೂ ಸಾಧ್ಯವಿಲ್ಲ. ಹೀಗಾಗಿ ಇದು ಅಪಘಾತದ ಕೇಂದ್ರವಾಗುತ್ತಿದೆ ಎಂದರು.
ಚತುಷ್ಪಥಕ್ಕಾಗಿ ಮರಗಳನ್ನು ಕಡಿದಿರುವ ಪ್ರಾಧಿಕಾರ, ಡಿವೈಡರ್‌ನಲ್ಲಿ ಹೂಗಿಡಗಳನ್ನೂ ಬೆಳೆಸಿಲ್ಲ. ಹೆದ್ದಾರಿ ಮಧ್ಯದಲ್ಲೇ ಮುಳ್ಳಿನ ಗಿಡಗಳು ಬೆಳೆಯುತ್ತಿವೆ. ರಕ್ಷಣಾ ಗೋಡೆ ಕಾಮಗಾರಿ ಸ್ಥಗಿತಗೊಂಡಿದ್ದು, ಜನ, ಜಾನುವಾರು ಹಾಗೂ ಚಕ್ಕಡಿಗಳಿಗೆ ರಕ್ಷಣೆಯೇ ಇಲ್ಲದಂತಾಗಿದೆ ಎಂದರು.
ಶಾಡ್ಲಿ ಹಳ್ಳಕ್ಕೆ ಪೈಪ್ ಬೇಡ: ಬಾಬಣ್ಣ ಹಾವನೂರ ಮಾತನಾಡಿ, ಗ್ರಾಮದಿಂದ 2 ಕಿ.ಮೀ. ದೂರದಲ್ಲಿರುವ ಶಾಡ್ಲಿ ಹಳ್ಳಕ್ಕೆ ಅಡ್ಡಲಾಗಿ ಪೈಪ್ ಹಾಕಿ ಸರ್ವೀಸ್ ರಸ್ತೆ ನಿರ್ಮಿಸಲಾಗುತ್ತಿದೆ. ಇದನ್ನು ಸ್ಥಗಿತಗೊಳಿಸಿ, ಸೇತುವೆ ನಿರ್ಮಿಸುವಂತೆ ಆಗ್ರಹಿಸಿದರು.
ಮೂರು ತಿಂಗಳಲ್ಲಿ ಪೂರ್ಣ: ಡಿ. 22ರಂದು ಅಧಿಕಾರಿಗಳ ಹಾಗೂ ಗುತ್ತಿಗೆದಾರರ ಸಭೆ ಕರೆಯಲಾಗಿದ್ದು, ಮೂರು ತಿಂಗಳಲ್ಲಿ ಬಾಕಿ ಕಾಮಗಾರಿ ಪೂರ್ಣಗೊಳ್ಳುವಂತೆ ಮಾಡಲಾಗುವುದು ಎಂದು ಸಂಸದ ಉದಾಸಿ ಭರವಸೆ ನೀಡಿದರು. ಹಾವೇರಿ ಮಾಜಿ ಶಾಸಕ ನೆಹರು ಓಲೇಕಾರ, ಗ್ರಾಪಂ ಅಧ್ಯಕ್ಷೆ ನೀಲಮ್ಮ ಗೊರವರ, ಉಪಾಧ್ಯಕ್ಷ ವಿಜಯ ಸವಣೂರ, ಕೃಷಿಕ ಸಮಾಜದ ಅಧ್ಯಕ್ಷ ಗಂಗಣ್ಣ ಎಲಿ, ಸಿದ್ದಣ್ಣ ಬೆಳವಿಗಿ, ಅಶೋಕ ಅಗಡಿ, ಮಲ್ಲಣ್ಣ ಬೆಳವಿಗಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement