ಹಾನಗಲ್ಲ: ನಾಳೆ ಹೆಸ್ಕಾಂ ಕಚೇರಿಗೆ ರೈತರ ಮುತ್ತಿಗೆ
ಹಾನಗಲ್ಲ: ಕೃಷಿ ಪಂಪ್‌ಸೆಟ್‌ಗಳಿಗೆ ನಿತ್ಯ 12 ತಾಸು ತ್ರಿಫೇಸ್ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿ ಡಿ. 5ರಂದು ಹಾನಗಲ್ಲ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲು ರೈತರು ನಿರ್ಧರಿಸಿದ್ದಾರೆ. ಅಂದು ಹೆಸ್ಕಾಂ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದು, ರೈತರ ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದು ರೈತ ಸಂಘ-ಹಸಿರು ಸೇನೆಯ ಮಹಲಿಂಗಪ್ಪ ಅಕ್ಕಿವಳ್ಳಿ, ಅಡಿವೆಪ್ಪ ಆಲದಕಟ್ಟಿ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಮುಖಂಡರು, ಮುತ್ತಿಗೆ ಕುರಿತು ಹೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಸದ್ಯ 3-4 ತಾಸು ಕೂಡ ವಿದ್ಯುತ್ ಕೊಡುತ್ತಿಲ್ಲ. ಅಧಿಕಾರಿಗಳು ರೈತರ ದಾರಿ ತಪ್ಪಿಸುತ್ತಿದ್ದಾರೆ. ಹಲವು ಬಾರಿ ಪ್ರತಿಭಟನೆ ನಡೆಸಿ, ಸರ್ಕಾರದ ಗಮನ ಸೆಳೆದಿದ್ದರೂ ಸಮಸ್ಯೆ ಬಗೆಹರಿದಿಲ್ಲ ಎಂದು ತಿಳಿಸಿದ್ದಾರೆ.
ಡಿ. 5ರಂದು ಮಹಾತ್ಮಾ ಗಾಂಧಿ ವೃತ್ತದಲ್ಲಿರುವ ವಿನಾಯಕ ದೇವಸ್ಥಾನದ ಹತ್ತಿರದಿಂದ ವಿರಕ್ತ ಮಠದ ಹತ್ತಿರ ಇರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಕಚೇರಿ ವರೆಗೆ ರೈತರು ಪ್ರತಿಭಟನಾ ರ್ಯಾಲಿ ನಡೆಸಲಿದ್ದಾರೆ. ಬಳಿಕ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ಬೇಡಿಕೆಗಳಿಗೆ ಅಧಿಕಾರಿಗಳು ಸ್ಥಳದಲ್ಲೇ ಪರಿಹಾರ ನೀಡಬೇಕು. ಅಲ್ಲಿಯ ತನಕ ಧರಣಿ ನಿಲ್ಲಿಸುವುದಿಲ್ಲ ಎಂದರು.
ತಾಲೂಕಿನ ಬೈಚವಳ್ಳಿ ವಿದ್ಯುತ್ ಫೀಡರ್‌ಗೆ ಸಂಬಂಧಿಸಿದ ಚೀರನಹಳ್ಳಿ, ಬೈಚವಳ್ಳಿ, ಬಾಳಿಹಳ್ಳಿ, ಹೀರೂರ, ಬ್ಯಾತನಾಳ, ಯಲ್ಲಾಪುರ, ಶೇಷಗಿರಿ ಗ್ರಾಮಗಳಲ್ಲಿ ರೈತರಿಗೆ ಹೆಚ್ಚು ಸಮಸ್ಯೆಗಳಿವೆ. ತಾಲೂಕಿನ ರೈತರು ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವರು ಎಂದು ವಿವರಿಸಿದರು.