ಇಂದು ಧರ್ಮ ದೀವಿಗೆ
ಹಾವೇರಿ: ತಾಲೂಕಿನ ನೆಗಳೂರು ಗ್ರಾಮದ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದಲ್ಲಿ ಕರ್ತೃ ಗುರುಶಾಂತ ಶಿವಯೋಗಿಗಳ ಕಾರ್ತೀಕ ಮಂಗಲ ಮಹೋತ್ಸವ ಹಾಗೂ ಧರ್ಮ ದೀವಿಗೆ ಕಾರ್ಯಕ್ರಮ ಡಿ. 5ರಂದು ಸಂಜೆ 7 ಗಂಟೆಗೆ ನಡೆಯಲಿದೆ. ಹಿರೇಮಠದ ಗುರುಶಾಂತ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ದಳವಾಯಿ ಮಠದ ಶಿವಕುಮಾರ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ. ಹಾಲಸ್ವಾಮಿ ಮಠದ ಸಿದ್ದರಾಮ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದು, ಹುಕ್ಕೇರಿ ಮಠ ಮಹಿಳಾ ಮಹಾವಿದ್ಯಾಲಯದ ಡಾ ಪುಷ್ಪಾ ಶೆಲವಡಿಮಠ ಉಪನ್ಯಾಸ ನೀಡಲಿದ್ದಾರೆ. ರಾಣಿಬೆನ್ನೂರು ಅಯ್ಯಪ್ಪಸ್ವಾಮಿ ಮಂದಿರದ ಮಂಜುನಾಥ ಗುರುಸ್ವಾಮಿ, ಡಾ ಸಿದ್ದಲಿಂಗಸ್ವಾಮಿ, ಡಾ ಎಚ್.ಎಸ್. ಗೋಪಾಲ ರಾವ್ ಪಾಲ್ಗೊಳ್ಳಲಿದ್ದಾರೆ. ಆನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಿ: ಅಕ್ಕಿವಳ್ಳಿ
ಹಾನಗಲ್ಲ: ಬೆಂಬಲ ಬೆಲೆಯಲ್ಲಿ ಬತ್ತ ಹಾಗೂ ಗೋವಿನ ಜೋಳ ಖರೀದಿ ಕೇಂದ್ರ ಉದ್ಘಾಟನೆ ಮಾಡಿದ್ದರೂ ಈವರೆಗೆ ಖರೀದಿ ಕೇಂದ್ರದ ಬಾಗಿಲನ್ನೂ ತೆರೆದಿಲ್ಲ. ಇಲ್ಲಿ ಅಧಿಕಾರಿಗಳು ಸುಳಿಯದೆ ರೈತರನ್ನು ದಾರಿ ತಪ್ಪಿಸಿದಂತಾಗಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಬಿ.ಎಸ್. ಅಕ್ಕಿವಳ್ಳಿ ಆರೋಪಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿರುವ ಅವರು, ಈ ಭಾಗದಲ್ಲಿ ಖರೀದಿ ಕೇಂದ್ರ ಆರಂಭಿಸದೇ ಇರುವುದರಿಂದ ರೈತರ ಗೋವಿನಜೋಳ ಹಾಗೂ ಬತ್ತವನ್ನು ವ್ಯಾಪಾರಸ್ಥರು ಕಡಿಮೆ ಬೆಲೆಗೆ ಖರೀದಿಸಿ, ಅನ್ನದಾತರಿಗೆ ನಷ್ಟ ಉಂಟು ಮಾಡುತ್ತಿದ್ದಾರೆ. ಕೂಡಲೇ ಈ ಖರೀದಿ ಕೇಂದ್ರದಲ್ಲಿ ಗೋವಿನ ಜೋಳ ಹಾಗೂ ಬತ್ತವನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವಂತೆ ಒತ್ತಾಯಿಸಿದ್ದಾರೆ. ತಾಲೂಕಿನ ರೈತರು ಗೋವಿನಜೋಳ ಹಾಗೂ ಬತ್ತದ ಮಾರಾಟದ ಮಾದರಿಗಳನ್ನು ಎಪಿಎಂಸಿಗೆ ತಂದು ತೋರಿಸುತ್ತಿದ್ದಾರೆ. ಕೂಡಲೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಖರೀದಿ ಪ್ರಕ್ರಿಯೆ ಆರಂಭಿಸಲು ಸೂಕ್ತ ಮಾರ್ಗದರ್ಶನ ನೀಡಬೇಕೆಂದು ಅಕ್ಕಿವಳ್ಳಿ ಆಗ್ರಹಿಸಿದ್ದಾರೆ.
ನಾಳೆ ರಕ್ತದಾನ ಶಿಬಿರ
ಹಾವೇರಿ: ವಿಶ್ವ ರಕ್ತದಾನ ದಿನಾಚರಣೆ ಅಂಗವಾಗಿ ಸೃಷ್ಟಿ ಫೌಂಡೇಷನ್, ಎಚ್ಡಿಎಫ್ಸಿ ಬ್ಯಾಂಕ್, ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರಗಳ ಆಶ್ರದಲ್ಲಿ ಡಿ. 6ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2ರ ವರೆಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಎಲ್ಐಸಿ ಎದುರಿನ ಎಚ್ಡಿಎಫ್ಸಿ ಬ್ಯಾಂಕ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಸೃಷ್ಟಿ ಫೌಂಡೇಷನ್ ರಕ್ತದಾನಿಗಳ ನೋಂದಣಿ ಮಾಡಿಸಿ, ಅಗತ್ಯ ಸಂದರ್ಭದಲ್ಲಿ ರಕ್ತ ನೀಡುವ ಆಸಕ್ತ ಯುವಕರ ಸಂಘಟನೆ. ಐದು ವರ್ಷಗಳಿಂದ ಸೇವೆಯಲ್ಲಿ ತೊಡಗಿಕೊಂಡಿದೆ. ಆಸಕ್ತ ಸ್ವಯಂಪ್ರೇರಿತ ರಕ್ತದಾನಿಗಳು ಹೆಸರು ನೋಂದಾಯಿಸಬಹುದು. ತುರ್ತು ಸಂದರ್ಭದಲ್ಲಿ ಅಗತ್ಯವಿರುವ ಗುಂಪಿನ ರಕ್ತದಾನಿಗಳ ಸೇವೆ ಪಡೆಯಬಹುದು. ಶಿಬಿರದಲ್ಲಿಯೂ ರಕ್ತದಾನಿಗಳ ಸೇರ್ಪಡೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸುಭಾಸ್ ಹುಲ್ಯಾಳದ. ಮೊ. 9901796999 ಹಾಗೂ ರಾಘವೇಂದ್ರ ರಾವ್, ಮೊ. 9900254501 ಅವರನ್ನು ಸಂಪರ್ಕಿಸಲು ಕೋರಲಾಗಿದೆ.
ತಂತ್ರಜ್ಞಾನ ಯುಗದಲ್ಲಿ ಶಿಕ್ಷಣ ಅವಶ್ಯ
ಹಾವೇರಿ: ತಂತ್ರಜ್ಞಾನ ಯುಗದಲ್ಲಿ ಶಿಕ್ಷಣ ಪ್ರಾಮುಖ್ಯ ಪಡೆದುಕೊಂಡಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಲು ಎಲ್ಲ ಪಾಲಕರು ಮುಂದಾಗಬೇಕು ಎಂದು ಬಿಜೆಪಿ ಮುಖಂಡ ಸಿದ್ದರಾಜ ಕಲಕೋಟಿ ಕರೆ ನೀಡಿದರು.
ಸ್ಥಳೀಯ ಚಂದನ ಪ್ರಾಥಮಿಕ ಶಾಲೆಯ ಅಡಿಗಲ್ಲು ಸಮಾರಂಭ ಉದ್ಘಾಟಿಸಿದ ಅವರು, ಚಂದನ ಪ್ರಾಥಮಿಕ ಶಾಲೆ 9 ವರ್ಷಗಳಿಂದ ಉತ್ತಮ ಸೇವೆ ನೀಡುತ್ತಿದ್ದು, ಶಾಲೆಯ ಅಭಿವೃದ್ಧಿಗೆ ಶ್ರಮಿಸೋಣ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಪಂ ಸದಸ್ಯೆ ಸುಮಾ ಏಕಬೋಟೆ, ಹೆಣ್ಣು ಮಕ್ಕಳು ಮನೆಯೊಳಗಿರದೆ, ಹೊರಬಂದು ಶಿಕ್ಷಣ ಪಡೆದು, ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ವಿಯಾಗಬೇಕು. ಮಕ್ಕಳು ಎಷ್ಟು ಕಲಿಯುತ್ತಾರೋ ಅಲ್ಲಿಯ ವರೆಗೂ ಕಲಿಸಿ ಎಂದರು.
ಗುದ್ದಲಿ ಶಿವಯೋಗೀಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ಶಾಶ್ವತವಾಗಿ ಉಳಿಯುವ ಸಂಪತ್ತು ಜ್ಞಾನ ಮಾತ್ರ. ಮನುಷ್ಯ ಸಂಸ್ಕಾರವಂತನಾಗಬೇಕು. ತನ್ನ ದುಡಿಮೆಯ ಸ್ವಲ್ಪ ಹಣವನ್ನು ಸತ್ಕಾರ್ಯಗಳಿಗೆ ದಾನ ಮಾಡಬೇಕೆಂದು ತಿಳಿಸಿದರು.
ಚನ್ನಬಸಪ್ಪ ಅರಳಿ, ಡಾ ಎಸ್.ಎಸ್. ಮಠದ, ಕಮಲಾಕ್ಷಮ್ಮ ಹೇಮಗಿರಿಮಠ, ಕವಿತಾ ಮಾಗಡಿಮಠ, ಜಿ.ಎಸ್. ಮಠದ, ಎಂ.ಎಂ. ವಗ್ಗಣ್ಣನವರ, ಎನ್.ಕೆ. ಮರೋಳ, ಮಲ್ಲಣ್ಣ ಹಳ್ಳಿಕೇರಿ, ಪ್ರಭು ಹಿಟ್ನಳ್ಳಿ, ಚನ್ನವೀರಯ್ಯ ಹಾವೇರಿಮಠ ಇದ್ದರು. ಎಸ್.ಎಸ್. ಮಠದ ಸ್ವಾಗತಿಸಿದರು, ಡಿ.ಎಚ್. ಶಿವಾನಂದ ಪ್ರಾಸ್ತಾವಿಕ ಮಾತನಾಡಿದರು. ಅರುಣಕುಮಾರ ಶೆಟ್ಟರ ವಂದಿಸಿದರು. ಎಂ.ಆರ್. ಪಟ್ಟಣಶೆಟ್ಟಿ ನಿರೂಪಿಸಿದರು.
ಹೊಸ ಖಾತೆಗಳಿಗೂ ಸಾಲ: ಸಾತಣ್ಣವರ
ಶಿಗ್ಗಾಂವಿ: ಈ ಮೊದಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಹಳೆಯ ಖಾತೆ ಹೊಂದಿದ ರೈತರಿಗೆ ಮಾತ್ರ ರು. 2 ಲಕ್ಷದ ವರೆಗೆ ಸಾಲ ನೀಡಲಾಗುತ್ತಿತ್ತು. ಮುಂದೆ ಪ್ರತಿ ಸಹಕಾರಿ ಸಂಘದಲ್ಲಿ 40 ಹೊಸ ಖಾತೆಗಳಿಗೂ ಸಾಲ ಕೊಡಲು ಒತ್ತಾಯಿಸುವುದಾಗಿ ಧಾರವಾಡ ಕೆಸಿಸಿ ಬ್ಯಾಂಕ್ ನೂತನ ನಿರ್ದೇಶಕ ಗಂಗಣ್ಣ ಸಾತಣ್ಣವರ ಹೇಳಿದರು. ತಾಲೂಕಿನ ಕೋಣನಕೇರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಅವರು, ತಾಲೂಕಿನಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಟ್ಟಡಗಳಿಗೆ ಸಹಕಾರಿ ಸಚಿವರ ಅನುದಾನದಲ್ಲಿ ಶಾಸಕ ಬಸವರಾಜ ಬೊಮ್ಮಾಯಿ ರು. 1.5 ಕೋಟಿ ಅನುದಾನ ಕೊಡುವಂತೆ ಒತ್ತಾಯಿಸಿದ್ದರು. ಸಚಿವ ಮಹಾದೇವಪ್ರಸಾದ್ ರು. 75 ಲಕ್ಷ ಅನುದಾನ ನೀಡಿದ್ದು, ಜಿಪಂನಿಂದ ಹೆಚ್ಚಿನ ಅನುದಾನ ನೀಡಲು ವಿನಂತಿಸುವುದಾಗಿ ಹೇಳಿದರು. ಚನ್ನವೀರಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮಾದೇವಪ್ಪ ಮಾಸನಕಟ್ಟಿ, ಉಪಾಧ್ಯಕ್ಷ ಹನುಮಂತಪ್ಪ ಶ್ಯಾಬಳ ಹಾಗೂ ಸದಸ್ಯರಾದ ಗುತ್ತೆಪ್ಪ ಚಿನ್ನಳ್ಳಿ, ಬಸಪ್ಪ ಸಿಗ್ಗಟ್ಟಿ, ಸದಾಶಿವಯ್ಯ ಸಾಲಿಮಠ, ಬಂಕಪ್ಪ ಶ್ಯಾಬಣ್ಣವರ, ಸೋಮಂತ್ರೆವ್ವ ಕುನ್ನೂರ, ರತ್ನವ್ವ ನಾಯಕ (ಲಮಾಣಿ), ಮ್ಯಾನೇಜರ್ ನಾಗರಾಜ ಸಿಗ್ಗಟ್ಟಿ, ಸಿಬ್ಬಂದಿ ಹನಮಂತಪ್ಪ ಸಾಳಂಕೆ, ಬಸಪ್ಪ ಆಡಿನ, ಸಿದ್ದಣ್ಣವರ, ಗೌಡರ, ಅನ್ನದಾತ ರೈತ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ನವೀನ ಸವಣೂರ ಇದ್ದರು. ಯಲ್ಲಪ್ಪ ಚವ್ಹಾಣ ಪ್ರಾಸ್ತಾವಿಕ ಮಾತನಾಡಿದರು. ಮನೋಹರ ಬಳಿಗಾರ ಸ್ವಾಗತಿಸಿ, ನಿರೂಪಿಸಿದರು.
ಸಮುದಾಯ ಅಭಿವೃದ್ಧಿಗೆ ಧರ್ಮಸ್ಥಳ ಸಂಸ್ಥೆ ನೆರವು
ಶಿಗ್ಗಾಂವಿ: ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು, ಅದಕ್ಕೆ ಸ್ಥಳೀಯರ ಸಹಕಾರ ಅವಶ್ಯ ಎಂದು ಯೋಜನಾಧಿಕಾರಿ ಗಣಪತಿ ಮಾಳಂಜಿ ಹೇಳಿದರು.
ತಾಲೂಕಿನ ದುಂಡಶಿ ಗ್ರಾಮದ ವಿರಕ್ತಮಠಕ್ಕೆ ಸಮುದಾಯದ ಅಭಿವೃದ್ಧಿಗಾಗಿ ನೀಡಿದ ರು. 1 ಲಕ್ಷ ಸಹಾಯಧನದ ಡಿಡಿ ಹಸ್ತಾಂತರಿಸಿ ಅವರು ಮಾತನಾಡಿದರು. ವಿರಕ್ತಮಠದ ಕುಮಾರ ಸ್ವಾಮೀಜಿ ನೆರವು ಸ್ವೀಕರಿಸಿದರು. ನ್ಯಾಯವಾದಿ ಎಸ್.ಜಿ. ಪಾಟೀಲ, ಗ್ರಾಪಂ ಅಧ್ಯಕ್ಷ ಈರಣ್ಣ ಮಹಾಜನಶೆಟ್ಟರ, ಎ.ಪಿ. ಮುಲ್ಲಾ, ಪ್ರಕಾಶ ಪಾಸರ, ವೀರಭದ್ರಪ್ಪ ವಾಲಿಶೆಟ್ಟರ ಮಾತನಾಡಿದರು. ವಲಯ ಮೇಲ್ವಿಚಾರಕ ವಿಶ್ವನಾಥ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಶಾರದಾ ವಂದಿಸಿದರು.
ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಪ್ರೋತ್ಸಾಹಧನ
ಗದಗ: ನಿರ್ಮಲ ಭಾರತ ಅಭಿಯಾನ ಕಾರ್ಯಕ್ರಮದಡಿ ಗ್ರಾಮೀಣ ಪ್ರದೇಶದಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡುವ ಅರ್ಹ ಬಿಪಿಎಲ್, ಅರ್ಹ ಎಪಿಎಲ್ ಕುಟುಂಬಗಳಿಗೆ ರು. 4700 ಪ್ರೋತ್ಸಾಹಧನವನ್ನು ವಿತರಿಸಲಾಗುವುದು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿಕೊಳ್ಳುವ ಅರ್ಹ ಬಿಪಿಎಲ್ ಕುಟುಂಬಗಳಿಗೆ ರು. 4500 ಅನುದಾನ ವಿತರಿಸಲಾಗುವುದು. ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ಇಚ್ಛಿಸುವ ಕುಟುಂಬದವರು, ಸಂಬಂಧಪಟ್ಟ ಗ್ರಾಪಂಗೆ ಅರ್ಜಿ ಸಲ್ಲಿಸಿ, ಶೌಚಾಲಯ ನಿರ್ಮಾಣದ ನಂತರ ಈ ಅನುದಾನದ ಪ್ರಯೋಜನವನ್ನು ಪಡೆಯಬಹುದಾಗಿದೆ ಎಂದು ಸಿಇಓ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಬೈಕ್ ರ್ಯಾಲಿ
ಲಕ್ಷ್ಮೇಶ್ವರ: ನವಭಾರತ ಕಟ್ಟೋಣ ಬನ್ನಿ, ನರೇಂದ್ರ ಮೋದಿಯನ್ನು ಬೆಂಬಲಿಸೋಣ ಬನ್ನಿ ಎನ್ನುವ ಉದ್ದೇಶದೊಂದಿಗೆ ಪಟ್ಟಣದ ನಮೋ ಬ್ರಿಗೇಡ್ನಿಂದ ಯುಥ್ ಬೈಕ್ ರ್ಯಾಲಿಯು ಡಿ. 5ರ ಬೆಳಗ್ಗೆ 11ಕ್ಕೆ ಪ್ರಾರಂಭವಾಗುತ್ತದೆ ಎಂದು ಸಂಘಟನೆಯ ಸಂಚಾಲಕರು ತಿಳಿಸಿದ್ದಾರೆ.
ಬೆಳಕು ಪ್ರಗತಿ ಸಂಕೇತ: ಶ್ರೀ
ಹಾವೇರಿ: ಬೆಳಕು ಪ್ರಗತಿ ಹಾಗೂ ಜ್ಞಾನದ ಸಂಕೇತ. ಅಂತಹ ಬೆಳಕು ಸಕಲ ಜೀವಾತ್ಮರಿಗೂ ಸಿಗಲಿ ಎಂದು ಹರಸೂರು ಬಣ್ಣದಮಠದ ಅಭಿನವರುದ್ರ ಚೆನ್ನಮಲ್ಲಿಕಾರ್ಜುನ ಶ್ರೀಗಳು ನುಡಿದರು. ಇಲ್ಲಿಯ ಜಗದ್ಗುರು ರೇಣುಕಾಚಾರ್ಯ ಮಂದಿರದಲ್ಲಿ ನಡೆದ ಕಾರ್ತೀಕೋತ್ಸವ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಒತ್ತಡದಲ್ಲಿರುವ ಆಧುನಿಕ ಜಗತ್ತಿಗೆ ಸಂತೋಷವೆಂಬ ಬೆಳಕು ದೊರಕಬೇಕಿದೆ ಎಂದು ಶುಭ ಹಾರೈಸಿದರು. ಜಗದ್ಗುರು ರೇಣುಕಾಚಾರ್ಯ ಸೇವಾ ಸಮಿತಿಯ ಎಸ್.ಎಸ್. ತುಪ್ಪದ ಅಧ್ಯಕ್ಷತೆ ವಹಿಸಿದ್ದರು. ಎಂ.ಬಿ. ಹಿರೇಮಠ, ಸಿ.ಬಿ. ಹಿರೇಮಠ, ಜಿ.ಎಸ್. ಮರೆವಣ್ಣನವರ, ವಿರೂಪಾಕ್ಷಪ್ಪ ಹತ್ತಿಮತ್ತೂರ, ರುದ್ರಗೌಡ ಪಾಟೀಲ, ಶಿವಯ್ಯ ನಡುವಿನಮಠ, ಅಜ್ಜನಗೌಡ ಗೌಡಪ್ಪನವರ, ಎಸ್.ಜಿ. ಬೆನಕೊಪ್ಪ, ಐ.ಸಿ. ನಡುವಿನಮಠ, ಮಠದ ವ್ಯವಸ್ಥಾಪಕ ಹಾಲಯ್ಯ ಹಿರೇಮಠ ಇದ್ದರು.
ದುರ್ಬಲ ವರ್ಗಗಳ ಮಕ್ಕಳಿಗೆ ಶಾಲೆ ಪ್ರವೇಶ
ಹಾವೇರಿ: ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ ಅನ್ವಯ ಜಿಲ್ಲೆಯ ಎಲ್ಲ ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ (ಭಾಷಾ ಮತ್ತು ಮತೀಯ ಅಲ್ಪಸಂಖ್ಯಾತ ವರ್ಗದ ಶಾಲೆಗಳನ್ನು ಹೊರತುಪಡಿಸಿ) 2014-15ನೇ ಸಾಲಿಗೆ ಪೂರ್ವ ಪ್ರಾಥಮಿಕ ಅಥವಾ 1ನೇ ತರಗತಿಗೆ ದಾಖಲಾತಿ ವೇಳೆ, ಅನನುಕೂಲ ಪರಿಸ್ಥಿತಿಯಲ್ಲಿರುವ ಮತ್ತು ದುರ್ಬಲ ವರ್ಗದ ಮಕ್ಕಳಿಗೆ ಮೀಸಲಾದ ಶೇ. 25ರಷ್ಟು ಸೀಟುಗಳ ಆಯ್ಕೆಗೆ ಫೆ. 8ರೊಳಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಸಿಬಿಎಸ್ಇ, ಐಸಿಎಸ್ಇ ಪಠ್ಯಕ್ರಮ ಅನುಸರಿಸುವ ಶಾಲೆಗಳೂ ಸೇರಿದಂತೆ ಎಲ್ಲ ಅನುದಾನರಹಿತ ಶಾಲೆಗಳಲ್ಲಿ ಒಂದನೇ ಅಥವಾ ಪೂರ್ವ ಪ್ರಾಥಮಿಕ ತರಗತಿಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರುವ ಮಕ್ಕಳ ಆದಾಯ ಮಿತಿ ರು. 3.50 ಲಕ್ಷ. ಆಯ್ಕೆ ಪ್ರಕ್ರಿಯೆ ವೇಳೆ ವಾರ್ಷಿಕ ಆದಾಯ ರು. 1 ಲಕ್ಷಕ್ಕಿಂತ ಕಡಿಮೆ ಇರುವ ಮಕ್ಕಳನ್ನು ಮೊದಲು ಪರಿಗಣಿಸಲಾಗುವುದು. ಮಕ್ಕಳ ಸಂಖ್ಯೆ ಜಾಸ್ತಿ ಇದ್ದಲ್ಲಿ ಲಾಟರಿ ಮುಖಾಂತರ ನಿರ್ಧರಿಸುವುದು. ಸೀಟುಗಳು ಉಳಿದಿದ್ದಲ್ಲಿ ರು. 3.50 ಲಕ್ಷದ ವರೆಗಿನ ಆದಾಯ ಹೊಂದಿರುವವರನ್ನೂ ಪರಿಗಣಿಸಲಾಗುವುದು. ಅರ್ಜಿ ನಮೂನೆಗಳು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಜಿಲ್ಲಾ ಉಪನಿರ್ದೇಶಕರ ಕಚೇರಿ, ಶಾಲೆಗಳಲ್ಲಿ ಅಥವಾ ವೆಬ್ಸೈಟ್ಗಳಲ್ಲಿ ಲಭ್ಯ. ಅರ್ಜಿ ನಮೂನೆಗೆ ಶುಲ್ಕವಿಲ್ಲ., ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರತಿ ಶಾಲೆಯಲ್ಲಿ ಲಭ್ಯವಿರುವ ಶೇ. 25 ಸೀಟುಗಳನ್ನು ಜ. 6ರಂದು ಪ್ರಕಟಿಸಲಿದ್ದು, ದಾಖಲಾತಿ ಕೋರಿ ಪೋಷಕರು ಜ. 7ರಿಂದ ಫೆ. 8ರ ವರೆಗೆ ಅರ್ಜಿ ಸಲ್ಲಿಸಬಹುದು. ಶಾಲೆಯವರು ಸ್ವೀಕರಿಸಿದ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ, ಆಯ್ಕೆ ಪಟ್ಟಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಫೆ. 17ರೊಳಗೆ ಸಲ್ಲಿಸಬೇಕು. ಅವರು ಅದನ್ನು ಅನುಮೋದಿಸಿ, ಫೆ. 28ರೊಳಗೆ ಶಾಲೆಗಳಿಗೆ ಕಳುಹಿಸುತ್ತಾರೆ. ಮಾ. 3ರಿಂದ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಬಿ. ಕೊಡ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.