ಉ.ಕ. ರೈತರಿಗೆ ಪ್ಯಾಕೇಜ್ ಘೋಷಿಸಲು ಆಗ್ರಹ
ಹಾವೇರಿ: ಪ್ರಸಕ್ತ ಸಾಲಿನಲ್ಲಿ ಉತ್ತರ ಕರ್ನಾಟಕದ ರೈತರು ಅನೇಕ ತೊಂದರೆ ಎದುರಿಸುತ್ತಿದ್ದಾರೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಹಾವೇರಿ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಡಾ ಮಲ್ಲೇಶಪ್ಪ ಹರಿಜನ ಒತ್ತಾಯಿಸಿದ್ದಾರೆ.
ಮಳೆಗಾಲದಲ್ಲಿ ಅತಿವೃಷ್ಟಿಯಿಂದ ವರದಾ ನದಿ ತುಂಬಿ ಹರಿದು 2 ಸಾವಿರ ಹೆಕ್ಟೇರ್ ಬೆಳೆ ಹಾಳಾಗಿದೆ. ಸರ್ಕಾರ ಯಾವ ಪರಿಹಾರವನ್ನೂ ಕೊಟ್ಟಿಲ್ಲ. ಅತಿವೃಷ್ಟಿಯಿಂದ ಶೇಂಗಾ ಇಳುವರಿ ಕಡಿಮೆಯಾಗಿ ರೈತರು ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಗದಂತಾಗಿದೆ. ಬಿಟಿ ಹತ್ತಿ ಬೀಜದ ಕಳಪೆ ಗುಣಮಟ್ಟದಿಂದ ಗಿಡ ಕಾಯಿ ಬಿಡದೆ ರೈತರು ಕಂಗಾಲಾಗಿ ಬೀದಿಗಿಳಿದು ಹೋರಾಟದ ಹಾದಿ ಹಿಡಿಯುವಂತಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಮಲ್ಲೇಶಪ್ಪ ತಿಳಿಸಿದ್ದಾರೆ.
ಹಾವೇರಿಯಲ್ಲಿ ಖರೀದಿ ಕೇಂದ್ರವನ್ನು ಹೆಸರಿಗೆ ಮಾತ್ರ ಸ್ಥಾಪನೆ ಮಾಡಿ ರೈತರಿಂದ ಇದುವರೆಗೂ ಗೋವಿನಜೋಳವನ್ನು ಖರೀದಿ ಮಾಡಿಲ್ಲ. ಹಲವಾರು ಹೋರಾಟ, ಧರಣಿ ಬಳಿಕ ಬಿಡುಗಡೆಯಾದ ಬೆಳೆವಿಮೆ ಹಣ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರ ಖಾತೆಗೆ ಸರಿಯಾಗಿ ಜಮೆ ಆಗಿಲ್ಲ. ರೈತರ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿ ಗಣನೆಗೆ ತೆಗೆದುಕೊಂಡು ಸರ್ಕಾರ ಕೂಡಲೇ ಹತ್ತಿ, ಶೇಂಗಾ, ಕಬ್ಬು, ಗೋವಿನಜೋಳ ಮುಂತಾದ ಪ್ರಮುಖ ಬೆಳೆಗಳಿಗೆ ಪ್ರತಿ ವರ್ಷ ಮುಂಗಾರು ಸಮಯದಲ್ಲೇ ಬೆಂಬಲ ಬೆಲೆ ಘೋಷಣೆ ಮಾಡಬೇಕು, ಉತ್ತರ ಕರ್ನಾಟಕದ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.
ನಗರ ಘಟಕದ ಅಧ್ಯಕ್ಷ ಗುಡ್ಡನಗೌಡ್ರ ಅಂದಾನಿಗೌಡ್ರ, ಪ್ರಧಾನ ಕಾರ್ಯದರ್ಶಿ ಶಂಭಣ್ಣ ಗುಂಜಳ, ಶಿವಯೋಗಿ ಹೊಸಗೌಡ್ರ, ಚಂದ್ರು ಗಾಳೆಪ್ಪನವರ ಇದ್ದರು.