ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಎಂಇಎಸ್ ಶಾಸಕರ ಅಣಕು ಶವಯಾತ್ರೆ

Vishwanath S
Updated On : 5 Dec 2013, 10:57 am

ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಡಿ. 4
ಎಂಇಎಸ್ ಶಾಸಕ ಸಂಭಾಜಿ ಪಾಟೀಲ ಹಾಗೂ ಅರವಿಂದ ಪಾಟೀಲರ ಕನ್ನಡ ವಿರೋಧಿ ಧೋರಣೆಯನ್ನು ಖಂಡಿಸಿ ಬೆಂಗಳೂರಿನಿಂದ ಬೆಳಗಾವಿಯ ವರೆಗೆ ಈ ಇಬ್ಬರೂ ಶಾಸಕರ ಅಣಕು ಶವಯಾತ್ರೆ ಪ್ರತಿಭಟನೆ ಕೈಗೊಂಡಿದ್ದ ವಾಟಾಳ್ ನಾಗರಾಜ್, ಕನ್ನಡಪರ ಹೋರಾಟಗಾರ ಸಾ.ರಾ. ಗೋವಿಂದು ಮುಂತಾದವರನ್ನು ಬಂಕಾಪುರ ಟೋಲ್ ಬಳಿ ಪೊಲೀಸರು ತಡೆದು, ಬಂಧಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯ ಟೋಲ್ ಗೇಟ್ ಬಳಿ ಬೆಂಗಳೂರಿಂದ ಬೆಳಗಾವಿಯತ್ತ ಸಾಗುತ್ತಿದ್ದ ಅಂಬ್ಯುಲೆನ್ಸ್‌ನಲ್ಲಿ ಸಿದ್ಧಪಡಿಸಿದ್ದ ಅಣಕು ಶವಯಾತ್ರೆಯನ್ನು ಹಾಗೂ ಕನ್ನಡ ಪರ ಹೋರಾಟಗಾರರ ವಾಹನಗಳನ್ನು ತಡೆದ ಹಾವೇರಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಡಿ. ಜಗಮಯ್ಯನವರ ನೇತೃತ್ವದ ತಂಡ ಬೆಳಗಾವಿಗೆ ತೆರಳದಂತೆ ತಡೆದು, ಹೋರಾಟಗಾರರನ್ನು ಬಂಧಿಸಿದರು. ಪ್ರಕರಣ ದಾಖಲಿಸಿಕೊಂಡು ಅವರನ್ನು ಬಿಡುಗಡೆ ಮಾಡಲಾಯಿತು.
ಹೆದ್ದಾರಿಯಲ್ಲೇ ಅಗ್ನಿಸ್ಪರ್ಶ: ಬೆಳಗಾವಿಗೆ ಒಯ್ಯುತ್ತಿದ್ದ ಅಣಕು ಶವಯಾತ್ರೆಗೆ ಬಂಕಾಪುರ ಟೋಲ್ ಪ್ಲಾಜಾದ ಬಳಿ ಹೋರಾಟದ ಅಂತಿಮ ರೂಪ ನೀಡುವುದಾಗಿ ನಿರ್ಧರಿಸಿದ್ದರು. ಅಣಕು ಶವಯಾತ್ರೆಗೆ ತಡೆಯೊಡ್ಡಿದ್ದರಿಂದ ಬೆಳಗಾವಿಯಲ್ಲಿ ಕೈಗೊಳ್ಳಬೇಕಿದ್ದ ಅಣಕು ಶವ ಸಂಸ್ಕಾರವನ್ನು ಸ್ಥಳದಲ್ಲಿಯೇ ಮಾಡಲು ನಿರ್ಧರಿಸಿದರು. ಟೋಲ್‌ಗೇಟ್ ಬಳಿಯ ಹೊಲವೊಂದರಲ್ಲಿ ಶವಗಳನ್ನು ಇರಿಸಿ ತಮಟೆ ಬಾರಿಸುವ ಮೂಲಕ ಹೆದ್ದಾರಿಯತ್ತ ತಂದು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಿದರು. ಎಂಇಎಸ್ ಶಾಸಕರ ಕನ್ನಡ ವಿರೋಧಿ ಧೋರಣೆ ಖಂಡಿಸಿ ಸರ್ಕಾರ ಅವರ ರಕ್ಷಣೆಗೆ ನಿಂತಿದೆ ಎಂದು ಧಿಕ್ಕಾರ ಕೂಗಿ, ಮಾಜಿ ಶಾಸಕ ವಾಟಾಳ್ ನಾಗರಾಜ್ ನೇತೃತ್ವದ ಹೋರಾಟಗಾರರ ತಂಡ ಅಣಕು ಶವಗಳಿಗೆ ಅಗ್ನಿಸ್ಪರ್ಶ ಮಾಡಿತು.
ವಾಟಾಳ್ ನಾಗರಾಜ್ ಮಾತನಾಡಿ, ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಕನ್ನಡ ಮತ್ತು ಕನ್ನಡಪರ ಹೋರಾಟಗಾರರಿಗೆ ರಕ್ಷಣೆ ಇಲ್ಲದಂತಾಗಿದೆ. ನಾಡು, ನುಡಿಗೆ ಕಳಂಕ ತರುವವರ ವಿರುದ್ಧ ಹೋರಾಟಕ್ಕಿಳಿದರೆ ಅದನ್ನು ಹತ್ತಿಕ್ಕುವ ಪ್ರಯತ್ನ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೂಂಡಾ ಕಾಯ್ದೆಯಡಿ ಬಂಧಿಸಿ: ಎಂಇಎಸ್ ಶಾಸಕರಾದ ಸಂಭಾಜಿ ಪಾಟೀಲ ಮತ್ತು ಅರವಿಂದ ಪಾಟೀಲ ಬೆಳಗಾವಿ ಅಧಿವೇಶನಕ್ಕೆ ಪರ್ಯಾಯವಾಗಿ ನಡೆಸಿದ ಮಹಾಮೇಳದಲ್ಲಿ ಸರ್ಕಾರದ ಶವಯಾತ್ರೆ ಮಾಡುವ, ತಿಥಿ ಊಟ ಹಂಚುವ ಅವಹೇಳನಕಾರಿ ಹೇಳಿಕೆ ನೀಡಿದ್ದಲ್ಲದೆ ಗಡಿ ಕ್ಯಾತೆ ಪ್ರಾರಂಭಿಸಿದ್ದಾರೆ. ಅಂತಹ ನಾಡ ವಿರೋಧಿ ಶಾಸಕರ ವಿರುದ್ಧ ನಮ್ಮ ಕನ್ನಡದ ಶಾಸಕರ್ಯಾರೂ ಸದನದಲ್ಲಿ ವಿರೋಧ ವ್ಯಕ್ತಪಡಿಸಿ ಅವರ ಸದಸ್ಯತ್ವ ರದ್ದತಿಗೆ ಒತ್ತಾಯಪಡಿಸದಿರುವುದು ದುರದೃಷ್ಟಕರ ಎಂದರು.
ಗೂಂಡಾ ಕಾಯ್ದೆಯಡಿ ಇಬ್ಬರು ಎಂಇಎಸ್ ಶಾಸಕರನ್ನು ಬೆಳಗಾವಿ ಜಿಲ್ಲಾಡಳಿತ ತಕ್ಷಣ ಬಂಧಿಸಬೇಕು. ನಾಡ ವಿರೋಧಿ ಹೇಳಿಕೆಯಿಂದ ಕನ್ನಡಿಗರ ಮನಸ್ಸಿಗೆ ನೋವುಂಟು ಮಾಡಿ, ಶಾಂತವಾಗಿದ್ದ ಬೆಳಗಾವಿಯನ್ನು ಹೊತ್ತಿ ಉರಿಯುವಂತೆ ಮಾಡಿದ ಈ ಇಬ್ಬರನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದ ಅವರು, ಬೆಳಗಾವಿಯಲ್ಲೊಂದು ನಿಮ್ಹಾನ್ಸ್ ಆಸ್ಪತ್ರೆಯನ್ನು ಎಂಇಎಸ್ ಪುಂಡರಿಗೋಸ್ಕರ ತೆರೆಯುವುದು ಅವಶ್ಯವಿದೆ ಎಂದರು.
ರಾಜ್ಯ ವಿಭಜನೆಗೆ ಕತ್ತಿ ಯತ್ನ: ಎರಡು ಬಾರಿ ಸಚಿವರಾಗಿದ್ದ ಉಮೇಶ್ ಕತ್ತಿ ಸರ್ಕಾರ ಮತ್ತು ರಾಜ್ಯವನ್ನು ಇಬ್ಭಾಗ ಮಾಡಲು ಹೊರಟಿದ್ದಾರೆ. ಇದು ಸರಿಯಲ್ಲ. ತಾವು ಸಚಿವರಾಗಿದ್ದ ಸಮಯದಲ್ಲಿ ಏನೇನು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾಗಿ ಶ್ವೇತಪತ್ರ ಹೊರಡಿಸಲಿ ಎಂದು ಸವಾಲು ಹಾಕಿದ ವಾಟಾಳ್, ಈ ಹಿಂದೆ ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ತಾವು ಕೈಗೊಂಡ ಹೋರಾಟದ ಅರಿವು ಕತ್ತಿಯವರಿಗೆ ಇಲ್ಲ ಎಂದರು. ಕನ್ನಡಪರ ಹೋರಾಟಗಾರ ಸಾ.ರಾ. ಗೋವಿಂದು, ರಾಜ್ಯ ಕನ್ನಡ ಸೇನೆ ಅಧ್ಯಕ್ಷ ಕೆ. ಕುಮಾರ, ದಲಿತ ಸಂಘರ್ಷ ಸಮಿತಿಯ ಎನ್. ಮೂರ್ತಿ, ಯಶ್ವಂತ ಮುನಿಯಪ್ಪನವರ, ಚಂದ್ರಗೌಡ, ರಾಮುಮೂರ್ತಿ, ಮರಿಸ್ವಾಮಿ ಇದ್ದರು.
ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಕನ್ನಡ ಮತ್ತು ಕನ್ನಡಪರ ಹೋರಾಟಗಾರರಿಗೆ ರಕ್ಷಣೆ ಇಲ್ಲದಂತಾಗಿದೆ. ನಾಡು, ನುಡಿಗೆ ಕಳಂಕ ತರುವವರ ವಿರುದ್ಧ ಹೋರಾಟಕ್ಕಿಳಿದರೆ ಅದನ್ನು ಹತ್ತಿಕ್ಕುವ ಪ್ರಯತ್ನ ಆಗುತ್ತಿದೆ. ಎಂಇಎಸ್ ಶಾಸಕರಾದ ಸಂಭಾಜಿ ಪಾಟೀಲ ಮತ್ತು ಅರವಿಂದ ಪಾಟೀಲ ಬೆಳಗಾವಿ ಅಧಿವೇಶನಕ್ಕೆ ಪರ್ಯಾಯವಾಗಿ ನಡೆಸಿದ ಮಹಾಮೇಳದಲ್ಲಿ ಸರ್ಕಾರದ ಶವಯಾತ್ರೆ ಮಾಡುವ, ತಿಥಿ ಊಟ ಹಂಚುವ ಅವಹೇಳನಕಾರಿ ಹೇಳಿಕೆ ನೀಡಿದ್ದಲ್ಲದೆ ಗಡಿ ಕ್ಯಾತೆ ಪ್ರಾರಂಭಿಸಿದ್ದಾರೆ. ಅಂತಹ ನಾಡ ವಿರೋಧಿ ಶಾಸಕರ ವಿರುದ್ಧ ನಮ್ಮ ಕನ್ನಡದ ಶಾಸಕರ್ಯಾರೂ ಸದನದಲ್ಲಿ ವಿರೋಧ ವ್ಯಕ್ತಪಡಿಸಿ ಅವರ ಸದಸ್ಯತ್ವ ರದ್ದತಿಗೆ ಒತ್ತಾಯಪಡಿಸದಿರುವುದು ದುರದೃಷ್ಟಕರ.
- ವಾಟಾಳ್ ನಾಗರಾಜ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement