ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕಬ್ಬು ಕಟಾವಿಗೆ ಬಂದವರು ಮರಳಿ ಶಾಲೆಗೆ

Vishwanath S
Updated On : 5 Dec 2013, 11:09 am

ಕನ್ನಡಪ್ರಭ ವಾರ್ತೆ, ಹಾನಗಲ್ಲ, ಡಿ. 4
ಸರ್ಕಾರ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ತಂದಿದೆ. ಆದರೂ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಸಂಖ್ಯೆಯ ಮಕ್ಕಳು ಶಾಲೆಯಿಂದ ಹೊರಗುಳಿದಿರುವುದು ಕಹಿ ಸತ್ಯ. ಇಂತಹ ಮಕ್ಕಳನ್ನು ಗುರುತಿಸಿ ಅವರನ್ನು ಶಾಲೆಗೆ ಸೇರಿಸಿ, ಎಲ್ಲ ಸೌಲಭ್ಯ ಒದಗಿಸುವ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭು ಸುಣಗಾರ, ಶಿಕ್ಷಣ ಇಲಾಖೆ ಇತರ ಅಧಿಕಾರಿಗಳು ಕಳಕಳಿ ಮೆರೆದಿದ್ದಾರೆ.
ಗಣತಿ ಕಾರ್ಯದ ವೇಳೆ ತಾಲೂಕಿನ ಕಾಡಶೆಟ್ಟಿಹಳ್ಳಿ ಗ್ರಾಮಕ್ಕೆ ಕಬ್ಬು ಕಟಾವಿಗೆ ದೂರದ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನಿಂದ 15-20 ಕುಟುಂಬಗಳು ವಲಸೆ ಬಂದಿದ್ದವು. ಈ ಕುಟುಂಬಗಳ 10 ಮಕ್ಕಳು ತಮ್ಮ ಸ್ವಂತ ಊರುಗಳಲ್ಲಿ ದಾಖಲಾಗಿದ್ದರೂ ಶಾಲೆಗೆ ತೆರಳದೆ ಪಾಲಕರ ಜತೆ ಕಬ್ಬಿನ ಕಟಾವಿಗೆ ಬಂದಿದ್ದರು. ಗಣತಿ ಕಾರ್ಯದ ವೇಳೆ ಈ ಮಕ್ಕಳನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡ ಗುರುತಿಸಿ, ಅವರೆಲ್ಲರನ್ನೂ ಕಾಡಶೆಟ್ಟಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತಾತ್ಕಾಲಿಕವಾಗಿ ದಾಖಲಿಸಿ ಗಮನ ಸೆಳೆದಿದ್ದರು.
ಕಾಡಶೆಟ್ಟಿಹಳ್ಳಿಯಲ್ಲಿ ಆಯೋಜಿಸಲಾಗಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಈ ಎಲ್ಲ ಮಕ್ಕಳಿಗೆ ಪಠ್ಯಪುಸ್ತಕ, ಸ್ಕೂಲ್‌ಬ್ಯಾಗ್, ಸಮವಸ್ತ್ರ ಮುಂತಾದ ಕಲಿಕಾ ಸಾಮಗ್ರಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭು ಸುಣಗಾರ ತಮ್ಮ ಸ್ವಂತ ಖರ್ಚಿನಲ್ಲಿ ಖರೀದಿಸಿ ವಿತರಿಸಿದರು.
ಪ್ರಭು ಸುಣಗಾರ ಮಾತನಾಡಿ, 6ರಿಂದ 16 ವಯಸ್ಸಿನ ಎಲ್ಲ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ದೊರಕುವಂತೆ ನೋಡಿಕೊಳ್ಳಬೇಕಿದೆ. ಯಾವ ಮಗುವೂ ಶಾಲೆಗೆ ಗೈರು ಹಾಜರಾಗದಂತೆ ಗಮನ ಹರಿಸಬೇಕಿದ್ದು, ಗೈರು ಹಾಜರಿ ಇರುವ ಮಕ್ಕಳ ಮನೆಗೆ ವಾರಕ್ಕೊಮ್ಮೆ ಭೇಟಿ ನೀಡಿ ಮಗು ಶಾಲೆಗೆ ಬರುವಂತೆ ಪ್ರೇರೇಪಿಸಬೇಕಿದೆ ಎಂದರು.
ಸಮನ್ವಯಾಧಿಕಾರಿ ಎಸ್. ರಂಗಸ್ವಾಮಿ, ಸಂಪನ್ಮೂಲ ವ್ಯಕ್ತಿಗಳಾದ ಪಿ.ಎಂ. ಚಲವಾದಿ, ಉಮೇಶ ಅಂಗಡಿ, ಶಿಕ್ಷಕ ಟಿ. ಶಿವಕುಮಾರ್, ಎಸ್‌ಡಿಎಂಸಿ ಅಧ್ಯಕ್ಷ ಪುಟ್ಟರಾಜಗೌಡ ಪಾಟೀಲ, ಗಿರಿಜವ್ವ ದೊಡ್ಡಮನಿ, ಪೂರ್ಣಿಮಾ ಎಂ.ಎಸ್., ಎಸ್.ಕೆ. ದೊಡ್ಡಮನಿ, ಮಲ್ಲಪ್ಪ ರಾಮಾಪುರ, ಜಿತೇಂದ್ರಗೌಡ ಪಾಟೀಲ, ಶಿವರುದ್ರಪ್ಪ ದೊಡ್ಡಮನಿ, ಆರ್.ಕೆ. ಕರಗುದರಿ, ಇಸ್ಮಾಯಿಲ್ ಖಾನ್ ಮುಲ್ಲಾ, ಗುಡ್ಡಪ್ಪ ಕೆಮ್ಮಣ್ಣಕೇರಿ, ಶೇಖಪ್ಪ ಕೋತಂಬರಿ, ಅನಿಲಕುಮಾರ್ ಗೋಣೆಣ್ಣನವರ್, ಗಿರೀಶ ನೆಲ್ಲಿಕೊಪ್ಪ, ಪ್ರಭಾ ಪಾಂಡುರಂಗ, ಗೋಪಾಲ ಕೋಳಿ, ಸಂಗೀತಾ ನಾಯಕ್, ರೇಖಾ ಕವಲಿ, ಗೀತಾ ನಾಗನಗೌಡ, ಎಸ್.ಎಚ್. ನೀರಲಗಿಮಠ, ಶ್ವೇತಾ ಊದಗಟ್ಟಿ ಇದ್ದರು.
6ರಿಂದ 16 ವಯಸ್ಸಿನ ಎಲ್ಲ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ದೊರಕುವಂತೆ ನೋಡಿಕೊಳ್ಳಬೇಕಿದೆ. ಯಾವ ಮಗುವೂ ಶಾಲೆಗೆ ಗೈರು ಹಾಜರಾಗದಂತೆ ಗಮನ ಹರಿಸಬೇಕಿದ್ದು, ಗೈರು ಹಾಜರಿ ಇರುವ ಮಕ್ಕಳ ಮನೆಗೆ ವಾರಕ್ಕೊಮ್ಮೆ ಭೇಟಿ ನೀಡಿ ಮಗು ಶಾಲೆಗೆ ಬರುವಂತೆ ಪ್ರೇರೇಪಿಸಬೇಕಿದೆ.
- ಪ್ರಭು ಸುಣಗಾರ
ಹಾನಗಲ್ಲ ಬಿಇಒ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement