ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ರೈತರ ಸಮಸ್ಯೆಗೆ ಸ್ಪಂದಿಸಿ: ಮನವಿ

Vishwanath S
Updated On : 5 Dec 2013, 11:08 am

ಶಿಗ್ಗಾಂವಿ: ಸರ್ಕಾರದ ರೈತ ವಿರೋಧಿ ನೀತಿಯಿಂದ ಅನ್ನದಾತ ಆತ್ಮಹತ್ಯೆ ದಾರಿ ಹಿಡಿಯುವಂತಾಗಿದೆ. ರೈತರ ಸಮಸ್ಯೆಗೆ ಸರ್ಕಾರ ಸ್ಪಂದಿಸಬೇಕೆಂದು ಒತ್ತಾಯಿಸಿ ತಾಲೂಕು ಅನ್ನದಾತ ರೈತ ಹೋರಾಟ ಸಮಿತಿ ಕಾರ್ಯಕರ್ತರು ಪಟ್ಟಣದ ಪುರಸಭೆ ವೃತ್ತದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಅರ್ಪಿಸಿದರು.
ಬೆಳಗಾವಿ ಸುವರ್ಣ ಸೌಧದೆದುರು ಪ್ರತಿಭಟನೆ ವೇಳೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾದ ರೈತ ವಿಠ್ಠಲ ಅರಭಾವಿಗೆ ಶ್ರದ್ಧಾಂಜಲಿ ಸಲ್ಲಿಸಿದ ರೈತರು, ಕಬ್ಬಿಗೆ ಬೆಂಬಲ ಬೆಲೆ ಘೋಷಿಸುವಲ್ಲಿ ಸರ್ಕಾರ ಮಾಡುತ್ತಿರುವ ವಿಳಂಬ ನೀತಿಯಿಂದ ಅನ್ನದಾತನ ಜೀವಹಾನಿಗೆ ಚಾಲನೆ ದೊರೆತಂತಾಗಿದೆ. ರೈತನ ಸಾವಿಗೆ ಸರ್ಕಾರವೇ ನೇರ ಹೊಣೆ. ರೈತ ಅರಭಾವಿಯದು ಆತ್ಮಹತ್ಯೆಯಲ್ಲ, ಸರ್ಕಾರದಿಂದಾದ ಕೊಲೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೃತ ರೈತನ ಕುಟುಂಬಕ್ಕೆ ಸರ್ಕಾರ ತಕ್ಷಣ ರು. 25 ಲಕ್ಷ ಪರಿಹಾರ ಹಾಗೂ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ಘೋಷಿಸಬೇಕೆಂದು ಆಗ್ರಹಿಸಿದ ರೈತರು, ಪ್ರತಿ ಟನ್ ಕಬ್ಬಿಗೆ ರು. 3 ಸಾವಿರ ಬೆಂಬಲ ಬೆಲೆ ಘೋಷಿಸಬೇಕು. ರೈತರಿಗೆ ಸಕ್ಕರೆ ಕಾರ್ಖಾನೆಗಳಿಂದ ಆಗುತ್ತಿರುವ ಕಿರುಕುಳ ತಪ್ಪಿಸಲು ರೈತರನ್ನು ಒಳಗೊಂಡ ಜಿಲ್ಲಾವಾರು ಸಮಿತಿಯನ್ನು ರಚಿಸಬೇಕು. ಆಗ ಮಾತ್ರ ಕಾರ್ಖಾನೆ ಮಾಲೀಕರು ಮತ್ತು ಆಡಳಿತ ಮಂಡಳಿ ನಿಯಂತ್ರಣದಲ್ಲಿರಲು ಸಾಧ್ಯ ಎಂದರು.
ರೈತ ಹೋರಾಟ ಸಮಿತಿಯ ಅಧ್ಯಕ್ಷ ಗಂಗಾಧರ ಗಡ್ಡಿ, ಕಾರ್ಯದರ್ಶಿ ನವೀನ ಸವಣೂರು ಮಾತನಾಡಿ, ಅನ್ನದಾತನ ಸಂಕಷ್ಟಕ್ಕೆ ಸ್ಪಂದಿಸುವಲ್ಲಿ ಸರ್ಕಾರ ವಿಫಲವಾಗಿದೆ. ಕಬ್ಬು ಬೆಳೆಗಾರರ ಪ್ರತಿಭಟನಾ ಸ್ಥಳಕ್ಕೆ ಸಿ.ಎಂ. ಸಿದ್ಧರಾಮಯ್ಯ ಭೇಟಿ ನೀಡಿ ರೈತರಿಗೆ ಧೈರ್ಯ ತುಂಬಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ ಎಂದು ಆರೋಪಿಸಿ, ತಹಸೀಲ್ದಾರ ಎಸ್.ಎ ಚೌಗಲೆ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ಸೂಚಿಸಿದರು. ರೈತ ಮುಖಂಡರಾದ ವಿರೂಪಾಕ್ಷಪ್ಪ ಸಿಂಧೂರ, ಚಂದ್ರಣ್ಣ ಗುದಗಿ, ರಾಜಣ್ಣ ಕುಲಕರ್ಣಿ, ರಮೇಶ್ ಬೇಡಿಕೆ, ಮುತ್ತಣ್ಣ ಕಲಕಟ್ಟಿ, ಬೂದಪ್ಪ ಬೂದಿಹಾಳ, ಚನ್ನಪ್ಪ ಕೋರಿ, ಚನ್ನಪ್ಪ ಗಾಣಿಗೇರ, ಶಂಕ್ರಪ್ಪ ಮೂಡಣ್ಣವರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement