ವಿಕಲಾಂಗರ ಆಸಕ್ತಿಗೆ ತಕ್ಕಂತೆ ತರಬೇತಿ
ಹಾನಗಲ್ಲ: ವಿಕಲಾಂಗರ ಸೇವೆ ಮಾಡುವುದು ಪುಣ್ಯದ ಕೆಲಸ. ಅವರಲ್ಲಿರುವ ವಿಶೇಷತೆ ಗುರುತಿಸಿ, ಅವರ ಆಸಕ್ತಿಗೆ ಅನುಗುಣವಾಗಿ ತರಬೇತಿ ನೀಡಿ, ಸರ್ಕಾರದ ಸೌಲಭ್ಯ ಒದಗಿಸಿದರೆ, ಅವರೂ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬಹುದು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಿ.ಆರ್. ಶೆಟ್ಟರ ಅವರು ಹೇಳಿದರು.
ಪಟ್ಟಣದ ರೋಶನಿ ಸಮಾಜಸೇವಾ ಸಂಸ್ಥೆಯಲ್ಲಿ ನಡೆದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಅವರು, ಅಂಗವೈಕಲ್ಯ ಶಾಪವಲ್ಲ. ವಿಕಲಾಂಗರು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಪುನರ್ವಸತಿ ಕಾರ್ಯಕರ್ತರು ತಮ್ಮ ವ್ಯಾಪ್ತಿಯಲ್ಲಿ ಬರುವ ಅಂಗವಿಕಲರಿಗೆ ಮಾಹಿತಿ ಒದಗಿಸಬೇಕು. ಅಧಿಕಾರಿಗಳೂ ಕಾಳಜಿ ವಹಿಸಬೇಕು ಎಂದು ಕಳಕಳಿ ವ್ಯಕ್ತಪಡಿಸಿದರು.
ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಎಸ್.ಎಸ್. ಅಡಿಗ ಮಾತನಾಡಿ, ವಿಕಲಾಂಗರನ್ನು ಯಾರೂ ಕೀಳರಿಮೆಯಿಂದ ನೋಡಬಾರದು. ಅವರಿಗೆ ಸಹಾನುಭೂತಿಗಿಂತ ಅವಕಾಶ ಮುಖ್ಯ. ವಿಕಲಾಂಗರಿಗಾಗಿ ಸರ್ಕಾರದ 31 ಯೋಜನೆಗಳು ಜಾರಿಯಲ್ಲಿವೆ. ಆದರೆ ಶೇ. 80-90ರಷ್ಟು ಜನರಿಗೂ ಈ ಸೌಲಭ್ಯ ತಲುಪುತ್ತಿಲ್ಲ ಎಂದು ವಿಷಾದಿಸಿದರು.
ರೋಶನಿ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕಿ ಸಿಸ್ಟರ್ ಅನಿತಾ ಡಿ'ಸೋಜಾ ಅಧ್ಯಕ್ಷತೆ ವಹಿಸಿದ್ದರು. ನೋಡಲ್ ಅಧಿಕಾರಿಗಳಾದ ಎಚ್. ಹುಲ್ಲತ್ತಿ ಮಾತನಾಡಿದರು. ಯೋಜನಾ ಸಹಾಯಕ, ಹಿರಿಯ ನಾಗರಿಕರ ಅಧಿಕಾರಿ ಕೆ.ಡಿ. ಪ್ರಭಾಕರ ಇಲಾಖೆ ಯೋಜನೆಗಳ ತರಬೇತಿ ನೀಡಿದರು. ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ವಿತರಿಸಲಾಯಿತು. ಸಿ. ಡಿಂಪಲ್ ಡಿ'ಸೋಜ ಸ್ವಾಗತಿಸಿದರು. ಗ್ರಾಮೀಣ ಮಟ್ಟದ ಪುನರ್ವಸತಿ ಕಾರ್ಯಕರ್ತೆ ನಿರ್ಮಲಾ ನಿರೂಪಿಸಿದರು. ಜಗದೀಶ ಗಂಟನವರ ವಂದಿಸಿದರು.