ಅಂಗವೈಕಲ್ಯ ಶಾಪವಲ್ಲ: ನ್ಯಾ. ಎನ್.ಎಸ್. ಪಾಟೀಲ
ಹಾವೇರಿ: ಅಂಗವೈಕಲ್ಯ ಶಾಪವಲ್ಲ, ಸಮಾಜಕ್ಕೆ ಹೊರೆಯೂ ಅಲ್ಲ. ವಿಕಲಾಂಗರೂ ಈ ಸಮಾಜದ ಮುಖ್ಯ ಅಂಗ. ಅವರಿಗೂ ಸಮಾಜದಲ್ಲಿ ಸಮಾನ ಹಕ್ಕು ಇದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎನ್.ಎಸ್. ಪಾಟೀಲ ಹೇಳಿದರು. ಅವರು ಗುರುವಾರ ನಗರದ ಹೊಸಮಠದ ಎಸ್.ಜೆ.ಎಂ. ಅಂಗವಿಕಲರ ಪ್ರೌಢಶಾಲೆಯಲ್ಲಿ ಹಾವೇರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಜರುಗಿದ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ.ಎನ್. ಮಾಳಗೇರ ಮಾತನಾಡಿ, ಸಮಾಜದಲ್ಲಿ ವಿಕಲಾಂಗರ ಅಭಿವೃದ್ಧಿಗೆ ಪ್ರೋತ್ಸಾಹ ನೀಡಬೇಕಿದೆ ಎಂದರು. ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಎಸ್.ಎಸ್. ಹಿರೇತನದ ಮುಖ್ಯ ಅತಿಥಿಗಳಾಗಿದ್ದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಲಿತಾ ಡಿ.ಎಚ್. ವಿಕಲಚೇತನರ ಹಕ್ಕು ಮತ್ತು ಕರ್ತವ್ಯಗಳ ಕುರಿತು ಉಪನ್ಯಾಸ ನೀಡಿದರು.