ಇಂದು ಅಂಬೇಡ್ಕರ್ ಪರಿನಿರ್ವಾಣ ದಿನ
ಹಾವೇರಿ: ಡಾ ಬಿ.ಆರ್. ಅಂಬೇಡ್ಕರ್ ಅವರ 57ನೇ ಪರಿನಿರ್ವಾಣದ ಅಂಗವಾಗಿ ಡಿ. 6ರಂದು ಬೆಳಗ್ಗೆ 11 ಗಂಟೆಗೆನಗರದ ಡಿ. ದೇವರಾಜ್ ಅರಸು ಸಭಾಭವನದಲ್ಲಿ ಕಾರ್ಯಕ್ರಮ ಜರುಗಲಿದೆ. ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರ ಆಡಳಿತಾಧಿಕಾರಿ ಡಾ ಟಿ.ಎಂ. ಭಾಸ್ಕರ್ ಉಪನ್ಯಾಸ ನೀಡಲಿದ್ದಾರೆ ಎಂದು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಮಲ್ಲೇಶಪ್ಪ ಹೊರಪೇಟೆ ತಿಳಿಸಿದ್ದಾರೆ.
ಸಲೀಂ ಅಹ್ಮದ್ ಪ್ರವಾಸ
ಹಾವೇರಿ: ಕೇಂದ್ರ ಸರ್ಕಾರದ ನೆಹರು ಯುವ ಕೇಂದ್ರದ ಮಹಾ ನಿರ್ದೇಶಕ ಸಲೀಂ ಅಹ್ಮದ್ ಡಿ. 8ರಂದು ಹಾವೇರಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಡಿ. 8ರಂದು ಬೆಂಗಳೂರಿನಿಂದ ಹೊರಟು ಬೆಳಗ್ಗೆ 11ಕ್ಕೆ ಹಿರೇಕೆರೂರಿಗೆ ಆಗಮಿಸಿ, ಕ್ರೀಡಾಕೂಟ ಹಾಗೂ ಯುವ ಸಂಸತ್ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಅನಂತರ ಬೆಂಗಳೂರಿಗೆ ಪ್ರಯಾಣ ಬೆಳಸುವರು.
ಗ್ರಾಮೀಣ ನಿರುದ್ಯೋಗಿ ಯವಜನತೆಗೆ ಅವಕಾಶ
ಹಾವೇರಿ: ರಾಜೀವ ಗಾಂಧಿ ಚೈತನ್ಯ ಯೋಜನೆಯಡಿ ಗ್ರಾಮೀಣ ನಿರುದ್ಯೋಗಿಗಳಿಗೆ (ಯಾವುದೇ ಸರ್ಕಾರಿ ಯೋಜನೆಗಳ ಪ್ರತಿಫಲ ಪಡೆಯದ) ಲಾಭದಾಯಕ ಸ್ವಯಂ ಉದ್ಯೋಗದ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೌಶಲ್ಯ ತರಬೇತಿಯೊಂದಿಗೆ ಜಿಪಂ ಮತ್ತು ಬ್ಯಾಂಕ್‌ಗಳ ಮೂಲಕ ರಾಜೀವ್ ಗಾಂಧಿ ಚೈತನ್ಯ ನಿಧಿ (ಸಾಲ ಮತ್ತು ಸಹಾಯಧನ) ಸಿಗುವಂತೆ ಸಂಪರ್ಕ ಕಲ್ಪಿಸುವಲ್ಲಿ ಗ್ರಾಮ ಸಭೆಗಳ ಮೂಲಕ ಪ್ರತಿ ಗ್ರಾಪಂನಿಂದ ಮೀಸಲಾತಿಗೆ ಅನುಗುಣವಾಗಿ 40 ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದೆಂದು ತಾಪಂ ಇಒ ಎ.ಟಿ. ಜಯಕುಮಾರ ತಿಳಿಸಿದ್ದಾರೆ. ಕನಿಷ್ಠ 8ನೇ ತರಗತಿ ಉತ್ತೀರ್ಣರಾದ 18ರಿಂದ 35 ವಯೋವುತಿಯ ಯುವಕ ಹಾಗೂ ಯುವತಿಯರು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬೇಕೆಂದು ಸೂಚಿಸಿದ್ದಾರೆ.
9ರಿಂದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ
ಹಾವೇರಿ: ಜಿಪಂ, ತಾಪಂ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆಶ್ರಯದಲ್ಲಿ ಹಾವೇರಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸಾಂಸ್ಕೃತಿಕ, ಶೈಕ್ಷಣಿಕ ಸ್ಪರ್ಧೆಗಳು ಡಿ. 9 ಹಾಗೂ 10ರಂದು ನಗರದ ಚನ್ನಬಸಪ್ಪ ಮಾಗಾವಿ ಪ್ರೌಢಶಾಲೆಯಲ್ಲಿ ಜರುಗಲಿವೆ. ಡಿ. 9ರಂದು ಬೆಳಗ್ಗೆ 10 ಗಂಟೆಗೆ ಶಾಸಕ ಬಸವರಾಜ ಶಿವಣ್ಣನವರ ಉದ್ಘಾಟಿಸುವರು. ಶಾಸಕ ರುದ್ರಪ್ಪ ಲಮಾಣಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಸಂಸದ ಶಿವಕುಮಾರ ಉದಾಸಿ ಪಾಲ್ಗೊಳ್ಳುವರು.
ಸ್ಪರ್ಧೆಗಳ ವಿವರ: ಡಿ. 9ರಂದು 1ರಿಂದ 7ನೇ ತರಗತಿಗಳ ವೈಯಕ್ತಿಕ ಹಾಗೂ ಸಾಮೂಹಿಕ ಸ್ಪರ್ಧೆಗಳು ಮತ್ತು ಡಿ. 10ರಂದು 8ರಿಂದ 10ನೇ ತರಗತಿಗಳ ವೈಯಕ್ತಿಕ ಹಾಗೂ ಸಾಮೂಹಿಕ ಸ್ಪರ್ಧೆಗಳು ಜರುಗಲಿವೆ ಎಂದು ಪ್ರಕಟಣೆ ತಿಳಿಸಿದೆ.