ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಖಾಸಗಿ ಜಾಗೆಯಲ್ಲಿ ಸರ್ಕಾರಿ ಶಾಲೆ

Lingaraj Badiger
Updated On : 6 Dec 2013, 12:35 pm

ಬ್ಯಾಡಗಿ: ಖಾಸಗಿ ವ್ಯಕ್ತಿಯೊಬ್ಬರ ಜಾಗೆಯಲ್ಲಿ ಸರ್ಕಾರಿ ಶಾಲಾ ಕಟ್ಟಡ ನಿರ್ಮಿಸಿದ್ದೀರಿ. ಘಟನೆ ಜರುಗಿ 6 ವರ್ಷ ಸಂದರೂ ಆಗಿರುವ ಪ್ರಮಾದವನ್ನು ಶಿಕ್ಷಣ ಇಲಾಖೆ ಸರಿಪಡಿಸಿಕೊಂಡಿಲ್ಲ ಇದನ್ನು ಇಲಾಖೆಯ ಬೇಜವಬ್ದಾರಿ ಎನ್ನದೆ ಇನ್ನೇನು ವ್ಯಾಖ್ಯಾನಿಸಲು ಸಾಧ್ಯವೆಂದು ಗುರುವಾರ ಜರುಗಿದ ಕೆಡಿಪಿ ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಜಿಪಂ ಸದಸ್ಯ ವಿರೂಪಾಕ್ಷಪ್ಪ ಬಳ್ಳಾರಿ ತರಾಟೆಗೆ ತೆಗೆದುಕೊಂಡರು.
ತಾಲೂಕಿನ ಹಿರೇಹಳ್ಳಿ ಸರ್ಕಾರಿ ಶಾಲೆ ಕಟ್ಟಡ ಖಾಸಗಿ ವ್ಯಕ್ತಿಯೊಬ್ಬರ ಜಾಗೆಯಲ್ಲಿ ರು. 40 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಹೀಗಿದ್ದರೂ ಮಾಲೀಕತ್ವದ ಕುರಿತು ಸೂಕ್ತ ದಾಖಲೆಗಳನ್ನೇಕೆ ಇಟ್ಟುಕೊಂಡಿಲ್ಲ? ಖಾಸಗಿಯವರ ಜಾಗವೆಂದು ತಿಳಿದಿದ್ದರೂ ಸರ್ಕಾರದ ಅನುಮತಿ ಹೇಗೆ ಪಡೆದಿದ್ದೀರಿ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ಪ್ರಸನ್ನಕುಮಾರ, ಆರು ವರ್ಷಗಳ ಹಿಂದೆ ಸ್ಥಳೀಯ ಮುಖಂಡರ ಒಪ್ಪಂದದಂತೆ ಜಾಗೆ ಪಡೆಯಲಾಗಿತ್ತು. ವಿಷಯ ಈಗ ಮತ್ತೊಮ್ಮೆ ಸಮಸ್ಯೆ ಸೃಷ್ಟಿಸಿದೆ. ಹಿರಿಯ ಅಧಿಕಾರಿಗಳು, ಶಾಸಕರು ಹಾಗೂ ಗ್ರಾಮದ ಹಿರಿಯರಿಗೆ ವಿಷಯ ತಿಳಿಸಲಾಗಿದೆ ಎಂದರು.
ಗಂಗಾ ಕಲ್ಯಾಣ ಯೋಜನೆಯಡಿ ಮತ್ತೂರು ಗ್ರಾಮದ ಫಲಾನುಭವಿಯೊಬ್ಬರು ವಿದ್ಯುತ್ ಸಂಪರ್ಕಕ್ಕಾಗಿ ಮೂರು ವರ್ಷಗಳಿಂದ ಹೆಸ್ಕಾಂ ಕಚೇರಿಗೆ ಅಲೆಯುತ್ತಿದ್ದಾರೆ. ಅಧಿಕಾರಿಗಳು ಅನಗತ್ಯವಾಗಿ ವಿಳಂಬ ಮಾಡುತ್ತಿದ್ದಾರೆ. ಇದಕ್ಕೆ ಸ್ಪಷ್ಟ ಉತ್ತರಿಸುವಂತೆ ಅಧಿಕಾರಿಗಳಿಗೆ ಜಿಪಂ ಸದಸ್ಯ ಶಂಕ್ರಪ್ಪ ಮಾತನವರ ತಾಕೀತು ಮಾಡಿದರು.
ಹೆಸ್ಕಾಂ ಅಧಿಕಾರಿ ಎಂ. ನೀರಲಗಿ ಮಾತನಾಡಿ, ಗಂಗಾ ಕಲ್ಯಾಣ ಯೋಜನೆಯಡಿ 30 ಫಲಾನುಭವಿಗಳಿಗೆ ಸಂಪರ್ಕ ಕಲ್ಪಿಸುವ ಪ್ರಸ್ತಾವನೆಗೆ ಅನುಮೋದನೆ ದೊರೆತಿದ್ದು, ಅನುದಾನ ಬಿಡುಗಡೆಯಾಗಿಲ್ಲ. ಈ ತಿಂಗಳ ಕೊನೆಯ ವಾರದಲ್ಲಿ ವಿದ್ಯುತ್ ಸಂಪರ್ಕ ನೀಡುವುದಾಗಿ ಸಭೆಗೆ ತಿಳಿಸಿದರು.
ನಬಾರ್ಡ್ ಯೋಜನೆಯಲ್ಲಿ ಕೈಗೊಂಡ ರಸ್ತೆ ಕಾಮಗಾರಿಗಳು ಕಳಪೆಯಾಗಿದ್ದು, 5 ವರ್ಷಗಳ ಕಾಲ ದುರಸ್ತಿಯನ್ನು ಗುತ್ತಿಗೆದಾರರೇ ಮಾಡಬೇಕು. ಕೂಡಲೇ ನೋಟಿಸ್ ಜಾರಿಗೊಳಿಸುವಂತೆ ಜಿಪಂ ಸದಸ್ಯರು ಒತ್ತಾಯಿಸಿದರು. ಆದರೆ ಇದಕ್ಕೆ ಉತ್ತರಿಸಲು ಇಲಾಖೆ ಅಧಿಕಾರಿಗಳು ಗೈರುಹಾಜರಾಗಿದ್ದರು.
ಅಧ್ಯಕ್ಷೆ ಚಿನ್ನಮ್ಮ ಫಾಸಿ, ಸಭೆಯಲ್ಲಿ 10ಕ್ಕೂ ಹೆಚ್ಚು ಇಲಾಖೆ ಅಧಿಕಾರಿಗಳು ಗೈರು ಹಾಜರಿದ್ದು, ಸೂಕ್ತವಾದ ಮಾಹಿತಿ ಲಭ್ಯವಾಗುತ್ತಿಲ್ಲ. ಪ್ರತಿ ಬಾರಿಯೂ ತಾಲೂಕು ಮಟ್ಟದ ಅಧಿಕಾರಿಗಳು ವಿನಾಕಾರಣ ತಪ್ಪಿಸಿಕೊಳ್ಳುತ್ತಿದ್ದಾರೆ. ಮಾಹಿತಿ ಗೊತ್ತಿಲ್ಲದ ಸಹಾಯಕ ಅಧಿಕಾರಿಗಳನ್ನು ಸಭೆಗೆ ಕಳಿಸುವುದು ಮುಂದುವರೆದಿದೆ ಎಂದರು. ಟಿಇಓ ಎಸ್.ಆರ್. ಪಾಟೀಲ, ಉಪಾಧ್ಯಕ್ಷ ಚಂದ್ರಪ್ಪ ಮುಚ್ಚಟ್ಟಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement