ನದಿ ಜೋಡಿಸಿ, ನೀರಾವರಿ ಸೌಲಭ್ಯ ಕಲ್ಪಿಸಿ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಡಿ. 5
ಕಾಳಿ-ಬೇಡ್ತಿ, ವರದಾ ಹಾಗೂ ಮಲಪ್ರಭಾ ನದಿ ಜೋಡಣೆಯಂತಹ ಮಹತ್ವಾಕಾಂಕ್ಷಿ ಯೋಜನೆಯನ್ನು ಪ್ರಾರಂಭಿಸುವ ಮೂಲಕ ಹುಬ್ಬಳ್ಳಿ-ಧಾರವಾಡ ಮಹಾನಗರಗಳಿಗೆ ಕುಡಿಯುವ ನೀರು ಮತ್ತು ನೀರಾವರಿ ಸೌಲಭ್ಯ, ಧಾರವಾಡ, ಹಾವೇರಿ, ಗದಗ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಒದಗಿಸುವಂತೆ ಜೈ ಕಿಸಾನ್ ನದಿಗಳ ಜೋಡಣೆ ಹಾಗೂ ನೀರಾವರಿ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ, ಮಾಜಿ ಸಂಸದ ಮಂಜುನಾಥ ಕುನ್ನೂರ ಹೇಳಿದರು.
ಬೆಳಗಾವಿಯಲ್ಲಿ ಜೈ ಕಿಸಾನ ನದಿಗಳ ಜೋಡಣೆ ಹಾಗೂ ನೀರಾವರಿ ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಕುನ್ನೂರ, ಹುಬ್ಬಳ್ಳಿ-ಧಾರವಾಡ ಅವಳಿ ನಗರ, ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಗಳ ರೈತರ ಬವಣೆ ನಿವಾರಿಸಲು ನೀರಾವರಿ ಸೌಕರ್ಯ ಅಗತ್ಯವಾಗಿದೆ ಎಂದು ಮನವರಿಕೆ ಮಾಡಿಕೊಟ್ಟರು.
ಬೇಡ್ತಿ ಹಾಗೂ ಕಾಳಿ ನದಿಗಳು ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮಘಟ್ಟ ಪ್ರದೇಶದಲ್ಲಿ ಹರಿಯುತ್ತಿವೆ. ಅಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ನೀರು ವ್ಯರ್ಥವಾಗಿ ಹರಿದು ಸಮುದ್ರ ಸೇರುತ್ತಿದೆ. ಇದನ್ನು ಸಂಗ್ರಹಿಸಿ ಉಪಯೋಗಿಸುವಂತಾದರೆ ಈ ಭಾಗದ ಜನತೆಗೆ ಬಹಳ ಉಪಯುಕ್ತವಾಗಲಿದೆ. ಬೇಡ್ತಿ ಹಾಗೂ ವರದಾ ನದಿಗಳನ್ನು ಶಿರಸಿ, ಕಲಘಟಗಿ ಮಾರ್ಗವಾಗಿ, ಕಾಳಿ-ಬೇಡ್ತಿ ನದಿಗಳನ್ನು ಹುಬ್ಬಳ್ಳಿ-ಧಾರವಾಡ, ಕಲಘಟಗಿ ಮಾರ್ಗವಾಗಿ ಮತ್ತು ಕಾಳಿ, ಮಲಪ್ರಭಾ ನದಿಗಳನ್ನು ಧಾರವಾಡ ಮಾರ್ಗವಾಗಿ ಜೋಡಿಸಬಹುದು ಎಂದರು.
ನದಿ ಜೋಡಣೆ ನಕ್ಷೆ ಹಾಗೂ ಹೆಚ್ಚುವರಿ ನೀರನ್ನು ಸಂಗ್ರಹಿಸುವುದರಿಂದ ಈ ಭಾಗದ ರೈತರಿಗೆ ಆಗುವ ಲಾಭಗಳ ಕುರಿತು ನೀರಾವರಿ ತಜ್ಞರಿಂದ ತಯಾರಿಸಲಾದ ಸಮಗ್ರ ವರದಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಿದರು. ತ್ವರಿತವಾಗಿ ಈ ಯೋಜನೆ ಜಾರಿಗೊಳಿಸುವಂತೆ ಮನವಿ ಮಾಡಿದರು.
ಈ ಬಗ್ಗೆ 2009, ಜ. 25ರಂದೇ ತಾವು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದು, ಅದಕ್ಕೆ ಸ್ಪಂದಿಸಿ ಕೇಂದ್ರ ಜಲ ಸಂಪನ್ಮೂಲ ಸಚಿವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಅಭಿಪ್ರಾಯ ಕೇಳಿದ್ದರು. ಆದರೆ ಕರ್ನಾಟಕ ಸರ್ಕಾರ ಇನ್ನೂ ಸ್ಪಂದಿಸಿಲ್ಲ ಎಂಬುದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ಸಮಿತಿ ಉಪಾಧ್ಯಕ್ಷ ಸತೀಶ ಮೆರವಾಡೆ, ಕಾರ್ಯದರ್ಶಿ ರಾಜು ಕುನ್ನೂರ, ಸಹ ಕಾರ್ಯದರ್ಶಿ ವಿ.ಕೆ. ಪಾಟೀಲ, ಖಜಾಂಚಿ ಗಿರೀಶ ಸುಂಕದ, ಸದಸ್ಯರಾದ ಗಿರೀಶ ಗದಿಗೆಪ್ಪಗೌಡರ, ಮಹಮ್ಮದ ರಫೀಕ್ ದರ್ಗದ, ಸುಭಾಷ ದ್ಯಾಮಕ್ಕನವರ, ಮೋಹನ ಹಿರೇಮನಿ, ಕಲ್ಲಪ್ಪ ಯಲಿವಾಳ, ವೀರಣ್ಣ ಬಡ್ಡಿ ಇದ್ದರು.