ಮೂಢನಂಬಿಕೆ ಕುರಿತು ಚರ್ಚಿಸಿ ಪರಿಹಾರ
ರಾಣಿಬೆನ್ನೂರು: ನಂಬಿಕೆ, ಮೂಢನಂಬಿಕೆಗಳ ಕುರಿತು ಚರ್ಚಿಸಿದ ಮೇಲಷ್ಟೇ ಸೂಕ್ತ ಪರಿಹಾರ ಕಂಡುಕೊಳ್ಳಲು ಸಾಧ್ಯವೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಲಕ್ಷ್ಮಣ ತಿಳಿಸಿದರು.
ನಗರದ ಹುಣಶಿಕಟ್ಟಿ ರಸ್ತೆಯಲ್ಲಿರುವ ಎನ್.ಆರ್. ಸಂಕೇತ್ ಆಂಗ್ಲ ಮಾಧ್ಯಮ ಪ್ರೌಡಶಾಲೆಯಲ್ಲಿ ಮೂಢನಂಬಿಕೆ ನಿಷೇಧ ಕುರಿತು ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ತಾಲೂಕು ಮಟ್ಟದ ಚರ್ಚಾ ಸ್ಪರ್ಧೆ ಉದ್ಘಾಟಿಸಿದ ಅವರು, ನಂಬಿಕೆ-ಮೂಢನಂಬಿಕೆ ಬಗ್ಗೆ ಸರಿಯಾದ ಮಾಹಿತಿ ಸಂಗ್ರಹಿಸಬೇಕು. ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಬೇಕು ಎಂದರು.
ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಬಿ.ಆರ್. ಪಾಟೀಲ ಹಾಗೂ ತರಳಬಾಳು ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ ಎಸ್.ಎನ್. ಶಿವಲಿಂಗಪ್ಪ ಮಾತನಾಡಿದರು. ಬಿಎಜೆಎಸ್ಎಸ್ ಮಹಿಳಾ ಕಾಲೇಜಿನ ಉಪ ಪ್ರಾಂಶುಪಾಲ ಎನ್.ಕೆ. ರಾಮಚಂದ್ರಪ್ಪ, ಎನ್.ಆರ್ ಸಂಕೇತ ಶಾಲೆ ಮುಖ್ಯಶಿಕ್ಷಕ ಜಿ.ಎಚ್. ಉಮಾಕಾಂತ, ಶಿಕ್ಷಕಿ ಪೂರ್ಣಿಮಾ ಬಣಕಾರ ಮಾತನಾಡಿದರು. ಪೂಜಾ ಕಟ್ಟಿಮನಿ, ವರ್ಷಿತಾ ಬೆಲ್ಲದ ಬಹುಮಾನ ಪಡೆದರು. 30ಕ್ಕೂ ಅಧಿಕ ವಿದ್ಯಾರ್ಥಿಗಳು ಚರ್ಚೆಯಲ್ಲಿ ಭಾಗವಹಿಸಿದ್ದರು.