ವಿದ್ಯುತ್ಗೆ ರೈತರ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಡಿ. 5
ರೈತರ ಕೃಷಿ ಬದುಕಿಗೆ ಪೂರ್ಣ ಪ್ರಮಾಣದ ವಿದ್ಯುತ್ ನೀಡದಿರುವುದನ್ನು ವಿರೋಧಿಸಿ ತಾಲೂಕಿನ ಬೈಚವಳ್ಳಿ ವ್ಯಾಪ್ತಿಯ ರೈತರು ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಹಾನಗಲ್ಲಿನ ಹೆಸ್ಕಾಂ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ರೈತ ಸಂಘದ ಅಧ್ಯಕ್ಷ ಮಹಲಿಂಗಪ್ಪ ಅಕ್ಕಿವಳ್ಳಿ ಹಾಗೂ ಸಂಘಟನಾ ಕಾರ್ಯದರ್ಶಿ ಅಡಿವೆಪ್ಪ ಆಲದಕಟ್ಟಿ ಮಾತನಾಡಿ, ತಾಲೂಕಿನಾದ್ಯಂತ ರೈತರು ಕೊಳವೆ ಬಾವಿಗಳನ್ನು ನಂಬಿಕೊಂಡು ಫಸಲು ಮಾಡಿದ್ದಾರೆ. ಆದರೆ ವಿದ್ಯುತ್ ನೀಡುವಲ್ಲಿ ಹೆಸ್ಕಾಂ ತಾರತಮ್ಯ ನೀತಿ ಅನುಸರಿಸುತ್ತಿದೆ. ಬೈಚವಳ್ಳಿ ಫೀಡರ್ ವ್ಯಾಪ್ತಿಗೊಳಪಡುವ ಹಳ್ಳಿಗಳಾದ ಬೈಚವಳ್ಳಿ, ಚೀರನಹಳ್ಳಿ, ಹುಲಗಿನಕೊಪ್ಪ, ಕೊಪ್ಪರಸಿಕೊಪ್ಪ, ರಾಮತೀರ್ಥ, ಹೊಸಕೊಪ್ಪ, ಸಾತೇನಹಳ್ಳಿ, ಗುಡಗುಡಿ, ಹುಡಾ, ದಶರಥಕೊಪ್ಪ ಮುಂತಾದ ಗ್ರಾಮಗಳಲ್ಲಿ ನೀರಿಲ್ಲದೆ ಫಸಲು ಒಣಗುತ್ತಿವೆ. ಕೇವಲ 2-3 ತಾಸು ವಿದ್ಯುತ್ ನೀರಾವರಿಗೆ ಸಾಕಾಗುತ್ತಿಲ್ಲ. ಕನಿಷ್ಠ 10 ತಾಸು ತ್ರೀ ಫೇಸ್ ವಿದ್ಯುತ್ ನೀಡಬೇಕು. ಈ ಬಗ್ಗೆ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಸಮಸ್ಯೆ ಬಗೆಹರಿದಿಲ್ಲ. ವಾರದೊಳಗೆ ಸಮಸ್ಯೆಗೆ ಪರಿಹಾರ ದೊರೆಯದಿದ್ದರೆ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರೈತರ ಕಡೆಗಣನೆ: ಆಕ್ರೋಶ
ರೈತ ಮುಖಂಡ ಮಲ್ಲೇಶಪ್ಪ ಪರಪ್ಪನವರ ಮಾತನಾಡಿ, ಪಕ್ಕದ ಜಿಲ್ಲೆಗಳಲ್ಲಿ ನೀರಾವರಿಗೆ ಸಾಕಷ್ಟು ವಿದ್ಯುತ್ ನೀಡಲಾಗುತ್ತಿದೆ. ಇಲ್ಲಿ ಮಾತ್ರ ರೈತರನ್ನು ಕಡೆಗಣಿಸಲಾಗುತ್ತಿದೆ, ಅನಗತ್ಯ ಕಿರುಕುಳ ನೀಡಲಾಗುತ್ತಿದೆ. ಗುಜರಾತ್ ಮಾದರಿಯಲ್ಲಿ ರೈತರಿಗೆ ವಿದ್ಯುತ್ ನೀಡಿದರೆ ಕೃಷಿಯಲ್ಲಿ ಪ್ರಗತಿ ಸಾಧ್ಯ. ಆಹಾರ ಸಾಮಗ್ರಿಗಳನ್ನು ರೈತ ಬೆಳೆಯದಿದ್ದರೆ ಮನುಷ್ಯ ತಿನ್ನುವುದಾದರೂ ಏನು? ದೇಶಕ್ಕೆ ಅನ್ನ ನೀಡಲು ರೈತನಿಗೆ ಎಲ್ಲ ರೀತಿಯ ಸಹಕಾರ ಮೊದಲ ಆದ್ಯತೆಯಲ್ಲಿ ನೀಡುವಂತಾಗಬೇಕು ಎಂದು ಆಗ್ರಹಿಸಿದರು.
ಹೆಸ್ಕಾಂನಿಂದ ರೈತರಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಟಿಸಿಗಳು ಸುಟ್ಟರೆ ತಿಂಗಳುಗಟ್ಟಲೆ ಬದಲಾಯಿಸುವುದಿಲ್ಲ. 8 ತಾಸು ವಿದ್ಯುತ್ ನೀಡುವುದಾಗಿ ಭರವಸೆ ನೀಡಿದ್ದ ಅಧಿಕಾರಿಗಳು ಅದರಂತೆ ನಡೆದುಕೊಳ್ಳುತ್ತಿಲ್ಲ. ರೈತರ ಪ್ರತಿಭಟನೆಗಳಿಗೆ ಬೆಲೆ ಇಲ್ಲ. ರೈತ ಆತ್ಮಹತ್ಯೆ ಮಾಡಿಕೊಂಡರೆ ಸರ್ಕಾರ ಮೊಸಳೆ ಕಣ್ಣೀರು ಸುರಿಸುತ್ತವೆ. ಸಮಸ್ಯೆ ಪರಿಹಾರಕ್ಕೆ ಸ್ಪಂದಿಸುತ್ತಿಲ್ಲ. ಆರ್.ಆರ್. ನಂಬರ್ ನೀಡದಿರುವ ಲೈನ್ ಸ್ಥಗಿತಗೊಳಿಸಬಾರದು. ಬಿದ್ದಿರುವ ಕಂಬಗಳನ್ನು ಹಾಗೂ ಕೈಗೆಟಕುವ ತಂತಿಗಳನ್ನು ಕೂಡಲೇ ಬದಲಾಯಿಸಬೇಕು ಎಂಬ ಬೇಡಿಕೆಗಳು ವ್ಯಕ್ತವಾದವು.
ಎರಡು ಹಂತದಲ್ಲಿ...
ಮನವಿ ಸ್ವೀಕರಿಸಿದ ಹೆಸ್ಕಾಂ ಅಧಿಕಾರಿ ಕೃಷ್ಣಪ್ಪ, ರೈತರ ಸಮಸ್ಯೆ ಕುರಿತು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದ್ದೇವೆ. ನಿರಂತರ 8 ತಾಸು ವಿದ್ಯುತ್ ವಿತರಿಸುವಂತೆ ಕೋರಿದ್ದೇವೆ. ಸದ್ಯ ಎರಡು ಹಂತದಲ್ಲಿ 8 ತಾಸು ವಿದ್ಯುತ್ ನೀಡಲು ಸಾಧ್ಯ. ವಿದ್ಯುತ್ ಸಮಸ್ಯೆಯನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಾಗಿದೆ. ಟಿಸಿಗಳ ಸಾಮರ್ಥ್ಯ ಮೀರಿದ್ದರೆ ಹೊಸದಾಗಿ ಆರ್.ಆರ್. ಸಂಖ್ಯೆ ನೀಡುವುದಿಲ್ಲ. ಹೆಚ್ಚಿನ ವಿದ್ಯುತ್ ಬೇಡಿಕೆ ಈಡೇರಿಸಲು ಅಧಿವೇಶನದ ಬಳಿಕ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.
ಮಹಾತ್ಮಾ ಗಾಂಧಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆದು ಹೆಸ್ಕಾಂ ಕಚೇರಿ ಆವರಣದಲ್ಲಿ ಸಭೆಯಾಗಿ ಮಾರ್ಪಟ್ಟಿತು. ರೈತ ಮುಖಂಡರಾದ ರಾಮಪ್ಪ ಕೋಟಿ, ಶೇಕಪ್ಪ ದಾನಪ್ಪನವರ, ಸುರೇಶ ಕೋಟಿ, ಮರಿಗೌಡ ಪಾಟೀಲ, ಚಂದ್ರಣ್ಣ ಕೋಟಿ, ಪ್ರಶಾಂತ ದಾನಪ್ಪನವರ, ಮಲ್ಲನಗೌಡ ಪಾಟೀಲ, ರಮೇಶ ಭದ್ರಾವತಿ, ರಮೇಶ ಪೂಜಾರ ಪಾಲ್ಗೊಂಡಿದ್ದರು.