ಮಠಗಳಿಗೆ ಅನುದಾನ ಪ್ರಶ್ನಿಸುವುದು ಢೋಂಗಿ ಸಮಾಜವಾದ: ದಿಂಡೂರ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಡಿ. 6
ಮಠಗಳಿಗೆ ಸರ್ಕಾರ ನೀಡಿದ ಅನುದಾನವನ್ನು ಪ್ರಶ್ನಿಸುವವರು ಅವುಗಳ ಆಡಳಿತ ವೈಖರಿಯನ್ನೊಮ್ಮೆ ಕೂಲಂಕಷವಾಗಿ ನೋಡುವುದು ಸೂಕ್ತ. ಕೆಲವೊಮ್ಮೆ ಸರ್ಕಾರದಿಂದಲೂ ಆಗದಿರುವ ಕೆಲಸವನ್ನು ಮಠಗಳು ಮಾಡಿದ ನಿದರ್ಶನಗಳಿವೆ ಎಂದು ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ಬಸವರಾಜ ದಿಂಡೂರು ತಿಳಿಸಿದರು.
ಕಾಗಿನೆಲೆ ಪ್ರಾಧಿಕಾರದ ಕನಕ ಭವನದಲ್ಲಿ ಹರಿಹರದಲ್ಲಿ ಪಂಚಮಸಾಲಿ ಪೀಠದ ಕಟ್ಟಡ ನಿರ್ಮಿಸುವ ಉದ್ದೇಶದ ಹಿನ್ನೆಲೆಯಲ್ಲಿ ಪಾದಯಾತ್ರೆ ಮೂಲಕ ದೇಣಿಗೆ ಸಂಗ್ರಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಮಠಗಳು, ಪೀಠಾಧ್ಯಕ್ಷರ ಸೊತ್ತಲ್ಲ. ಅವುಗಳೂ ಸಾರ್ವಜನಿಕ ಆಸ್ತಿಗಳೇ. ಆದರೆ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಕೆಲ ಢೋಂಗಿ ಸಮಾಜವಾದಿಗಳು ತಮ್ಮ ವೈಯಕ್ತಿಕ ವರ್ಚಸ್ಸನ್ನು ಹೆಚ್ಚಿಸುವ ಉದ್ದೇಶದಿಂದ ಮಠಗಳಿಗೆ ನೀಡುವ ಅನುದಾನವನ್ನು ಪ್ರಶ್ನಿಸುತ್ತಿದ್ದಾರೆ ಎಂದರು.
ನಾಡಿನ ಬಹಳಷ್ಟು ಶರಣರು, ಮಠಾಧೀಶರು ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸುವ ಮೂಲಕ ಎಲ್ಲ ವರ್ಗದ ಲಕ್ಷಾಂತರ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಿದ್ದಾರೆ. ಆರಂಭದಿಂದಲೇ ಅವರು ಸಾಮಾಜಿಕ ನ್ಯಾಯದ ಪರಿಕಲ್ಪನೆ ಹಾಗೂ ಸಾರ್ವಜನಿಕ ಹಿತಾಸಕ್ತಿ ಹೊಂದಿದ್ದಾರೆ ಎಂದು ಶ್ಲಾಘಿಸಿದರು.
ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ಸಿದ್ಧಗಂಗಾ ಮಠದ ಶಿವಕುಮಾರಶ್ರೀಗಳು ನಡೆಸಿಕೊಂಡು ಬಂದಿರುವ ಸೇವೆಗೆ ಸಮನಾದ ಸರ್ಕಾರವೊಂದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಪ್ರಶ್ನೆ ಮಾಡುವ ಹಕ್ಕು ಪ್ರತಿಯೊಬ್ಬರಿಗೂ ಇದೆ ಆದರೆ ಅದಕ್ಕೂ ಮುನ್ನ ಜವಾಬ್ದಾರಿಗಳನ್ನು ಅರಿತು ಆರೋಪ ಮಾಡುವುದು ಒಳಿತು ಎಂದರು.
ಪೀಠಾಧ್ಯಕ್ಷರಾದ ಸಿದ್ದಲಿಂಗ ಶ್ರೀಗಳು ಮಾತನಾಡಿ, ಹರಿಹರದ ಪೀಠಕ್ಕೂ ಕಾಗಿನೆಲೆಗೂ ಇರುವ ಅವಿನಾಭಾವ ಸಂಬಂಧವನ್ನು ವಿವರಿಸಿದರು. ಕಾಗಿನೆಲೆ ಪೀಠದಂತೆ ಪಂಚಮಸಾಲಿ ಪೀಠವೂ ಬೃಹದಾಕಾರವಾಗಿ ಬೆಳೆಯಲು ನಿರಂಜನಾನಂದ ಶ್ರೀಗಳ ಪಾದಯಾತ್ರೆ ಸ್ಫೂರ್ತಿಯಾಗಲಿದೆ ಎಂದರು.
ರಾಜ್ಯದ ಗೌರವಾಧ್ಯಕ್ಷ ಬಾವಿ ಬೆಟ್ಟಪ್ಪ, ಬಿ.ಸಿ. ಉಮಾಪತಿ, ಜಿಲ್ಲೆಯ ಗೌ. ಅಧ್ಯಕ್ಷ ಪಿ.ಡಿ. ಶಿರೂರು, ಅಧ್ಯಕ್ಷ ಎಸ್.ಆರ್. ಅಂಗಡಿ, ತಾಲೂಕಾಧ್ಯಕ್ಷ ನಾಗನಗೌಡ್ರ ಪಾಟೀಲ, ಜಿಪಂ ಸದಸ್ಯೆ ಬಸಮ್ಮ ಅಬಲೂರು, ರಾಜ್ಯ ಮಹಿಳಾ ಕಾರ್ಯದರ್ಶಿ ನೀಲಮ್ಮ ಹೊಸಮನಿ, ಮುಖಂಡರಾದ ಶಂಕರಗೌಡ್ರ ಪಾಟೀಲ, ಸುರೇಶ ಯತ್ನಳ್ಳಿ, ಭರಮಗೌಡ್ರ ರಾಯನಗೌಡ್ರ, ಕರಬಸಪ್ಪ ಬಳ್ಳಾರಿ, ಚನ್ನಬಸನಗೌಡ್ರ ಪಾಟೀಲ ಕೆ.ಕೆ. ಕೊಪ್ಪದ ಇದ್ದರು.
ನಾಡಿನ ಬಹಳಷ್ಟು ಶರಣರು, ಮಠಾಧೀಶರು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವ ಮೂಲಕ ಎಲ್ಲ ವರ್ಗದ ಲಕ್ಷಾಂತರ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಿದ್ದಾರೆ. ಆರಂಭದಿಂದಲೇ ಅವರು ಸಾಮಾಜಿಕ ನ್ಯಾಯದ ಪರಿಕಲ್ಪನೆ, ಸಾರ್ವಜನಿಕ ಹಿತಾಸಕ್ತಿ ಹೊಂದಿದ್ದಾರೆ.
-ಬಸವರಾಜ ದಿಂಡೂರ