ಹಾವೇರಿ ನಗರಸಭೆಯಲ್ಲಿ ಅಕ್ರಮ
ಕನ್ನಡಪ್ರಭ ವಾರ್ತೆ, ಹಾವೇರಿ, ಡಿ. 6
ನಗರಸಭೆಯ ಶೇ. 22ರ ಅನುದಾನದಡಿ ಮನೆ ನಿರ್ಮಾಣಕ್ಕೆ ಮಂಜೂರಾಗಿದ್ದಕ್ಕಿಂತ ಹೆಚ್ಚಿನ ಹಣವನ್ನು ಫಲಾನುಭವಿಗಳಿಗೆ ನೀಡುವ ಮೂಲಕ ಅಧಿಕಾರಿಗಳು ಅವ್ಯವಹಾರ ನಡೆಸಿದ್ದಾರೆ ಎಂದು ನಗರಸಭೆಯ ಬಿಜೆಪಿ ಸದಸ್ಯರು ಆರೋಪಿಸಿದ್ದಾರೆ.
ನಗರಸಭೆ ಸದಸ್ಯ ಸುರೇಶ ದೊಡ್ಡಮನಿ ನೇತೃತ್ವದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ನಗರಸಭೆ ಸದಸ್ಯರು, ಪ್ರಸಕ್ತ ಸಾಲಿನ ಶೇ. 22ರ ಅನುದಾನದಲ್ಲಿ ಮನೆ ನಿರ್ಮಿಸಿಕೊಳ್ಳಲು 9 ಫಲಾನುಭವಿಗಳಿಗೆ ತಲಾ ರು. 70 ಸಾವಿರ ಮಂಜೂರು ಮಾಡಲಾಗಿದೆ. ಆದರೆ ಅಧಿಕಾರಿಯೊಬ್ಬರು ಅಧ್ಯಕ್ಷರು, ಆಯುಕ್ತರ ಹಾಗೂ ಸದಸ್ಯರ ಗಮನಕ್ಕೆ ತಾರದೇ ಇಬ್ಬರು ಫಲಾನುಭವಿಗಳಿಗೆ ಹೆಚ್ಚುವರಿಯಾಗಿ ತಲಾ ರು. 20 ಸಾವಿರ ಸಂದಾಯ ಮಾಡಿದ್ದಾರೆ ಎಂದು ಆಪಾದಿಸಿದರು.
ಈ ಯೋಜನೆಯಲ್ಲಿ ಆಯ್ಕೆಯಾದ ಫಲಾನುಭವಿಗಳು ಹಾಗೂ ಅವರಿಗೆ ಮಂಜೂರಾದ ಹಣದ ಬಗ್ಗೆ ಮಾಹಿತಿ ನೀಡುವಂತೆ ಕೇಳಿದರೂ ಅಧಿಕಾರಿಗಳು ಸತಾಯಿಸುತ್ತಿರುವುದನ್ನು ಗಮನಿಸಿದರೆ, ಅವ್ಯವಹಾರ ನಡೆಸಿರುವುದು ಸ್ಪಷ್ಟವಾಗುತ್ತದೆ. ಕೂಡಲೇ ಜಿಲ್ಲಾಧಿಕಾರಿಗಳು ನಗರಸಭೆಗೆ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಬೇಕಲ್ಲದೆ, ಅವ್ಯವಹಾರ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸ್ಥಗಿತಗೊಂಡ ಒಳಚರಂಡಿ: ನಗರದಲ್ಲಿ 2-3 ವರ್ಷಗಳಿಂದ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ಹಾದಿಯಲ್ಲಿಯೇ ನಗರೋತ್ಥಾನ ಯೋಜನೆ ಸಾಗುತ್ತಿದೆ ಎಂದು ನಗರಸಭೆ ಬಿಜೆಪಿ ಸದಸ್ಯರು ಆರೋಪಿಸಿದರು.
ಒಳಚರಂಡಿ ಕಾಮಗಾರಿ ಸ್ಥಗಿತಗೊಂಡು ಹಲವು ತಿಂಗಳು ಗತಿಸಿದರೂ ಈವರೆಗೆ ಶಾಸಕರಾಗಲಿ, ನಗರಸಭೆ ಆಡಳಿತ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಸದಸ್ಯರಾಗಲಿ ಗಮನ ಹರಿಸಿಲ್ಲ. ಹೀಗಾಗಿ ಆ ಯೋಜನೆ ಪೂರ್ಣಗೊಳ್ಳುತ್ತದೆಯೋ ಇಲ್ಲವೋ ಎಂಬ ಸಂಶಯ ಮೂಡುತ್ತಿದೆ. ಇದರ ಮಾದರಿಯಲ್ಲೇ ನಗರೋತ್ಥಾನ ಯೋಜನೆ ನಡೆದಿದೆ. ಟೆಂಡರ್ ನೀಡಿ ನಾಲ್ಕೈದು ತಿಂಗಳು ಗತಿಸುತ್ತಾ ಬಂದಿದೆ. ಆದರೆ ಗುತ್ತಿಗೆಗಾರರು ಯಾವುದೇ ಕಾಮಗಾರಿ ಆರಂಭ ಮಾಡಿಲ್ಲ ಎಂದು ದೂರಿದರು.
ಡಾಂಬರೀಕರಣ ವಿಳಂಬ
ನಗರೋತ್ಥಾನ ಯೋಜನೆಯ ರು. 30 ಕೋಟಿ ಅನುದಾನದಲ್ಲಿ ರು. 15 ಕೋಟಿ ನಗರದ ರಸ್ತೆಗಳ ಡಾಂಬರೀಕರಣಕ್ಕೆ ನೀಡಲಾಗಿದೆ. ಆದರೆ ಗುತ್ತಿಗೆದಾರರು ನಗರದಲ್ಲಿ ಡಾಂಬರ್ ಪ್ಲಾಂಟ್ ಹಾಕಿಲ್ಲ. ಯಾವುದೇ ಕಾಮಗಾರಿ ಆರಂಭಿಸಿಲ್ಲ. ಚಳಿಗಾಲ ಮುಗಿಯುವ ಹಂತಕ್ಕೆ ಬಂದಿದೆ. ಯಾವುದಾದೂ ಅಡ್ಡ ಮಳೆ ಬಂದರೆ ಆ ನೆಪದಲ್ಲಿ ಕಾಮಗಾರಿ ಆರಂಭ ಮತ್ತಷ್ಟು ಮುಂದಕ್ಕೆ ಹೋಗುವ ಸಾಧ್ಯತೆಯಿದೆ. ಕೂಡಲೇ ಜಿಲ್ಲಾಧಿಕಾರಿಗಳು ಈ ಬಗ್ಗೆಯೂ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಒಂದು ವಾರದಲ್ಲಿ ತಮ್ಮ ಬೇಡಿಕೆಗಳು ಈಡೇರದಿದ್ದರೆ ನಗರಸಭೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ನಗರಸಭೆ ಸದಸ್ಯರಾದ ಹನುಮಂತ ನಾಯ್ಕ್ ಬದಾಮಿ, ನಿರಂಜನ ಹೆರೂರ, ರೇಣುಕವ್ವ ಪೂಜಾರ, ಗೀತಾ ಜೂಜಗಾಂವ, ಕರಬಸಪ್ಪ ಹಳದೂರ ಹಾಜರಿದ್ದರು.