ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕಲ್ಲು ಗಣಿಗಾರಿಕೆ: ದುರುದ್ದೇಶದಿಂದ ಹೆಸರು ಸೇರ್ಪಡೆ

Vishwanath S
Updated On : 8 Dec 2013, 11:30 am

ಹಾನಗಲ್ಲ:  ತಾಲೂಕಿನ ನೆಲ್ಲಿಬೀಡ ಗುಡ್ಡವೊಂದರಲ್ಲಿ ಡಿಆರ್ಎನ್ ಇನ್ಫ್ರಾಸ್ಟ್ರಕ್ಚರ್ ಕಂಪನಿ ನಡೆಸುತ್ತಿರುವ ಕಲ್ಲು ಗಣಿಗಾರಿಕೆ ವಿಷಯದಲ್ಲಿ ಅನಗತ್ಯವಾಗಿ ನನ್ನ ಹೆಸರು ಸೇರಿಸಿ ಆಪಾದನೆಗೊಳಪಡಿಸುತ್ತಿರುವುದು ನನ್ನ ಮೇಲಿನ ರಾಜಕೀಯ ದುರುದ್ದೇಶದಿಂದ.
ಈ ಪ್ರಕರಣದ ಎಲ್ಲ ರೀತಿಯ ತನಿಖೆಗೆ ನಾನು ಸಿದ್ಧ. ವಿನಾಕಾರಣ ಆರೋಪ ಮಾಡುತ್ತಿರುವವರ ಮೇಲೆ ಮಾನಹಾನಿ ಪ್ರಕರಣ ದಾಖಲಿಸಲು ತಜ್ಞರ ಸಲಹೆ ಪಡೆಯುತ್ತಿದ್ದೇನೆ ಎಂದು ಹಾನಗಲ್ಲ ಶಾಸಕ ಮನೋಹರ ತಹಶೀಲ್ದಾರ್ ಸ್ಪಷ್ಟಪಡಿಸಿದರು.
ಶನಿವಾರ ಸುದ್ದಿಗಾರರಿಗೆ ಈ ಪ್ರಕರಣದ ಕುರಿತು ವಿವರ ನೀಡಿದ ಅವರು, ಈ ಗುಡ್ಡದಲ್ಲಿ ಕಲ್ಲು ತೆಗೆಯುವ ವಿಷಯಕ್ಕೆ ಸಂಬಂಧಿಸಿದಂತೆ 2012ರಲ್ಲಿಯೇ ಅರಣ್ಯ ಇಲಾಖೆ, ಗಣಿ ಭೂ ವಿಜ್ಞಾನ, ಪರಿಸರ ಹಾಗೂ ಕಂದಾಯ ಇಲಾಖೆಯಿಂದ ಪರವಾನಗಿ ಪಡೆದು ಕಾನೂನು ಬದ್ಧವಾಗಿಯೇ ಕೆಲಸ ಆರಂಭಿಸಿರುವುದು ನನ್ನ ಗಮನಕ್ಕೆ ಬಂದಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದ್ದೇನೆ. ಇದರಲ್ಲಿ ಯಾವುದೆ ಅಕ್ರಮದ ಪ್ರಶ್ನೆ ಉದ್ಭವಿಸದು.
ಈ ಪ್ರಕರಣಕ್ಕೂ ನನಗೂ ಯಾವುದೆ ಸಂಬಂಧವಿಲ್ಲ. ಆ ಸಂದರ್ಭದಲ್ಲಿ ನಾನು ಶಾಸಕನೂ ಆಗಿರಲಿಲ್ಲ. ಹಿಂದಿನ ಅವಧಿಯಲ್ಲಿಯೇ ಆರಂಭವಾಗಿದ್ದ ಈ ಕಾಮಗಾರಿಗೆ ನನ್ನ ಹೆಸರನ್ನು ಜೋಡಿಸಿಕೊಳ್ಳುತ್ತಿರುವುದು ದುರುದ್ದೇಶಪೂರಿತವಾಗಿದೆ. ಈ ಕ್ರಷರ್ನ ಮಾಲೀಕನೂ ನಾನಲ್ಲ, ಪಾಲುದಾರನೂ ಅಲ್ಲ. ಈ ಕ್ರಷರ್ ನಡೆಸುತ್ತಿರುವವರು ನನ್ನ ಸಂಬಂಧಿಯೂ ಅಲ್ಲ ಎಂದು ಸ್ಪಷ್ಟಪಡಿಸಿದರು.
ತಿಳಿವಳಿಕೆ: ಆದರೆ ಹಾನಗಲ್ಲ-ಹಾವೇರಿ ರಸ್ತೆ ಕಾಮಗಾರಿ ನೆನೆಗುದಿಗೆ ಬಿದ್ದು, ಇಲ್ಲಿ ಸಂಚರಿಸುವವರು ಆತಂಕದಲ್ಲಿದ್ದಾರೆ. ನೆಲ್ಲಿಬೀಡ ಗ್ರಾಮದ ಕೆಲವರು ಈ ಕ್ರಷರ್ನ ಧೂಳಿನಿಂದ ತೊಂದರೆಯಾಗುತ್ತದೆ ಎಂದು ನನ್ನ ಗಮನಕ್ಕೆ ತಂದಿದ್ದರು. ಈ ವಿಷಯದ ಕುರಿತು ಗುತ್ತಿಗೆದಾರರು, ನೆಲ್ಲಿಬೀಡ ಗ್ರಾಮಸ್ಥರು ಹಾಗೂ ದೂರುದಾರರು ಸೇರಿ ನನ್ನ ಬಳಿ ಬಂದಾಗ ಸಾರ್ವಜನಿಕ ಹಿತಾಸಕ್ತಿಗಾಗಿ ಈ ಗಣಿಯಿಂದ ಕಲ್ಲು ತೆಗೆಯಲು ಅನುಕೂಲ ಮಾಡಿಕೊಡುವಂತೆ ಹಾಗೂ ಈ ಮೂಲಕ ಹಾನಗಲ್ಲ-ಹಾವೇರಿ ರಸ್ತೆ ಕಾಮಗಾರಿಗೆ ವೇಗದ ಚಾಲನೆ ಪಡೆಯಲು ಅನುಕೂಲ ಕಲ್ಪಿಸುವಂತೆ ತಿಳಿವಳಿಕೆ ಹೇಳಿದ್ದೇನೆ. ಈ ಸಂದರ್ಭದಲ್ಲಿ ಹಾವೇರಿ ಶಾಸಕ ರುದ್ರಪ್ಪ ಲಮಾಣಿ ಹಾಗೂ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ನನ್ನ ಜೊತೆಯಲ್ಲಿ ಇದ್ದರು ಎಂದು ತಿಳಿಸಿದರು.
ನೋವು ತಂದಿದೆ: ಇಷ್ಟಾದ ಮೇಲೆ ಮಾಧ್ಯಮಗಳಲ್ಲಿ ತಮ್ಮ ಹೆಸರನ್ನು ಪ್ರಸ್ತಾಪಿಸಿ ಆಮಿಷ ಒಡ್ಡಲಾಗಿದೆ ಎಂದು ಆರೋಪಿಸಿರುವುದು ನನಗೆ ನೋವು ತಂದಿದೆ. ಗೆಜ್ಜಿಹಳ್ಳಿ ಎಂಬ ಶಿಕ್ಷಕ ಈ ಪ್ರಕರಣದಲ್ಲಿ ಮಧ್ಯವರ್ತಿ ಎಂದು ಬಿಂಬಿಸಲಾಗಿದೆ. ಈ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಕಾನೂನಿನಂತೆ ನಡೆದುಕೊಳ್ಳಿ ಎಂದು ಸಲಹೆ ನೀಡಿದ್ದೇನೆ. ಆದರೆ, ನೆಲ್ಲೀಬೀಡ ಗ್ರಾಮದಲ್ಲಿ ಶಿಕ್ಷಕ ಗೆಜ್ಜಿಹಳ್ಳಿ ಅವರೊಂದಿಗೆ ಭಿನ್ನಾಭಿಪ್ರಾಯವುಳ್ಳ ಕೆಲವರು ಇಂತಹ ಪ್ರಕರಣ ಸೃಷ್ಟಿ ಮಾಡಿ, ಅದರಲ್ಲಿ ನನ್ನ ಹೆಸರನ್ನೂ ಸೇರಿಸಿ ಅಪಪ್ರಚಾರ ಮಾಡುತ್ತಿರುವುದು ಖೇದದ ಸಂಗತಿ. ವಿನಾಕಾರಣವಾಗಿ ನನ್ನ ಹೆಸರನ್ನು ತಳುಕು ಹಾಕಲಾಗಿದೆ ಎಂದು ತಿಳಿಸಿದರು.
ಈ ಪ್ರಕರಣದಲ್ಲಿ ಅನಗತ್ಯವಾಗಿ ತಮ್ಮ ಹೆಸರನ್ನು ಸೇರಿಸಿ ಅವಮಾನಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇನ್ನೊಮ್ಮೆ ಪರಿಶೀಲಿಸಿ ತಜ್ಞರ ಸಲಹೆ ಪಡೆದು ನನ್ನ ಮೇಲೆ ಆಪಾದನೆ ಮಾಡಿದವರ ಮೇಲೆ ಮಾನಹಾನಿ ಪ್ರಕರಣ ಹೂಡಲು ಯೋಚಿಸುತ್ತಿದ್ದೇನೆ ಎಂದು ಅವರು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement