ರೈತರಿಗೆ ಬೆಳೆವಿಮೆ ವಿತರಣೆ
ಶಿಗ್ಗಾಂವಿ: ಹಾವೇರಿ ಜಿಲ್ಲೆಯಲ್ಲಿಯೇ ಪ್ರಥಮವಾಗಿ ಬೆಳೆವಿಮೆ ವಿತರಣೆ ಮಾಡಿದ ಹೆಗ್ಗಳಿಕೆ ಶಿಗ್ಗಾಂವಿಯ ಕೆಸಿಸಿ ಬ್ಯಾಂಕಿನದ್ದಾಗಿದೆ ಎಂದು ಧಾರವಾಡ ಕೆಸಿಸಿ ಬ್ಯಾಂಕ್ ನೂತನ ನಿರ್ದೇಶಕ ಗಂಗಣ್ಣ ಸಾತಣ್ಣವರ ಹೇಳಿದರು.
ಪಟ್ಟಣದ ಕರ್ನಾಟಕ ಸೆಂಟ್ರಲ್ ಕೋ ಆಪರೇಟಿವ್ ಬ್ಯಾಂಕ್ ಶಿಗ್ಗಾಂವಿ ಶಾಖೆಯಲ್ಲಿ 2012ನೇ ಸಾಲಿನ ಬೆಳೆವಿಮೆ ವಿತರಣಾ ಕಾರ್ಯಕ್ರಮದಲ್ಲಿ ಚೆಕ್ ವಿತರಣೆ ಮಾಡಿ ಮಾತನಾಡಿದ ಸಾತಣ್ಣವರ, ತಾಲೂಕಿಗೆ ರು. 4 ಕೋಟಿ 33 ಲಕ್ಷ ಮಂಜೂರಾಗಿದೆ. ಇದರಲ್ಲಿ ಶಿಗ್ಗಾವಿಗೆ ರು. 68 ಲಕ್ಷ, ಬಂಕಾಪುರಕ್ಕೆ ರು. 2.38 ಲಕ್ಷ, ಧುಂಡಶಿಗೆ ರು. 1.27 ಲಕ್ಷ ಬೆಳೆವಿಮೆ ಮಂಜೂರಾಗಿದೆ ಎಂದರು.
ನಮ್ಮ ಭಾಗದ ರೈತರು ಬಹಳ ಮುಗ್ಧರು. ಸಿಬ್ಬಂದಿ ಬ್ಯಾಂಕಿಗೆ ಬಂದ ರೈತರನ್ನು ಸೌಜನ್ಯ, ಗೌರವದಿಂದ ಕಾಣಬೇಕು. ರೈತರಿಗೆ ಸಂಬಂಧಿಸಿದ ಬ್ಯಾಂಕಿನ ಯಾವುದೇ ಕೆಲಸವನ್ನು ತಡ ಮಾಡದೇ ಸೂಕ್ತ ಮಾರ್ಗದರ್ಶನದ ಮೂಲಕ ನಿರ್ವಹಿಸಲು ಸೂಚಿಸಿದರು.
ರೈತರು ಹಣದ ವ್ಯವಹಾರನ್ನು ಬ್ಯಾಂಕಿನ ಮುಖಾಂತರವೆ ಮಾಡಬೇಕು. ಬೇರೆಯವರಿಂದ ವಂಚನೆಗೆ ಒಳಗಾಗಬಾರದು ಎಂದು ಕಿವಿಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಧಾರವಾಡ ಕೆಸಿಸಿ ಬ್ಯಾಂಕಿನ ವ್ಯವಸ್ಥಾಪಕ ಎ.ಐ. ಜೀರಗೋಡ, ರೈತರಿಗೆ ಬೆಳೆವಿಮೆಯಿಂದ ಅನುಕೂಲವಾಗಿದೆ. ಎಲ್ಲ ರೈತರೂ ಬೆಳೆವಿಮೆ ಮಾಡಿಸಬೇಕು. ರೈತರು ಕಡ್ಡಾಯವಾಗಿ ಬ್ಯಾಂಕ್ ಖಾತೆ ತೆರೆಯಬೇಕು ಎಂದರು.
ರಾಜಶೇಖರಸ್ವಾಮಿ ಕಂಭಾಳಿಮಠ, ಗುರಣ್ಣ ಹೊಸಮನಿ, ಬ್ಯಾಂಕ್ ನಿರೀಕ್ಷಕ ಯು.ಜಿ. ಜಾಧವ್, ತಾಲೂಕಿನ ರೈತರು ಹಾಗೂ ಬ್ಯಾಂಕ್ ಸಿಬ್ಬಂದಿ ಉಪಸ್ಥಿತರಿದ್ದರು. ಎಲ್ಲಪ್ಪ ಹಂಚಿನಮನಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.