ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಹಳೆಗುಂಗರಗೊಪ್ಪ ಕಂದಾಯ ಗ್ರಾಮವಾಗಿಸಿ

Vishwanath S
Updated On : 8 Dec 2013, 11:30 am

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಡಿ. 7
ಹಳೆಗುಂಗರಗೊಪ್ಪ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಮಾಡುವಂತೆ ಶನಿವಾರ ನಡೆದ ಜನಸ್ಪಂದನ ಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದರು.
ಕಂದಾಯ ಗ್ರಾಮವನ್ನಾಗಿ ಘೋಷಣೆ ಮಾಡುವಂತೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ, ಬ್ಯಾಡಗಿ ಭೂಪಟದಲ್ಲಿ ಇಲ್ಲದಿರುವ ಗ್ರಾಮಕ್ಕೆ ಮೂಲಭೂತ ಸೌಕರ್ಯಯಗಳನ್ನು ಕಲ್ಪಿಸುವುದಾಗಲಿ ಅಥವಾ ಪಡೆದುಕೊಳ್ಳುವುದಕ್ಕಾಗಲಿ ಅಧಿಕಾರಿಗಳು ಮತ್ತು ಸಾರ್ವಜನಿಕರಿಗೆ ತೊಂದರೆದಾಯಕವಾಗಿದೆ. ಗ್ರಾಮದಲ್ಲಿರುವ ಹಿಂದುಳಿದ ಬಡ ಕುಟುಂಬಗಲಿಗೆ ಸರ್ಕಾರದಿಂದ ಈ ವರೆಗೂ ಯಾವುದೇ ಸೌಲಭ್ಯಗಳು ದೊರೆತಿಲ್ಲ. ಕೂಡಲೇ ಕಂದಾಯ ಗ್ರಾಮವೆಂದು ಘೋಷಿಸಿಯೇ ಜನಸ್ಪಂದನ ಆರಂಭಿಸುವಂತೆ ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಹಸೀಲ್ದಾರ್ ಶಿವಶಂಕರ ನಾಯಕ್, ಪ್ರಸ್ತುತ ಸರ್ಕಾರದಲ್ಲಿ ಹಿಂದುಳಿದ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಯೋಜನೆ ಹಾಕಿಕೊಂಡಿದೆ. ಹಳೆಗುಂಗರಗೊಪ್ಪ ಗ್ರಾಮ ಸೇರಿದಂತೆ ತಾಲೂಕಿನ 37 ಹಿಂದುಳಿದ ಗ್ರಾಮಗಳನ್ನು ಕಂದಾಯ ಗ್ರಾಮವನ್ನಾಗಿ ಪರಿವರ್ತನೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲಿಯೇ ಜಾರಿ ಆದೇಶ ಹೊರಬೀಳಲಿದೆ. ಆತಂಕಪಡುವ ಅಗತ್ಯವಿಲ್ಲ ಎಂದು ಸಮಜಾಯಿಷಿ ನೀಡಿದರು.
ವಿದ್ಯುತ್ ಕಂಬಗಳನ್ನು ಗ್ರಾಮದ ರಸ್ತೆ ಮಧ್ಯದಲ್ಲಿಯೇ ಹಾಕಲಾಗಿದ್ದು ಜನ, ಜಾನುವಾರು ಸೇರಿದಂತೆ ವಾಹನಗಳ ಸಂಚಾರಕ್ಕೆ ತೀವ್ರ ತೊಂದಯಾಗಿದೆ. ಅಲ್ಲದೆ, ಅವುಗಳಲ್ಲಿರುವ ತಂತಿಗಳು ತೀರಾ ಕೆಳಮಟ್ಟದಲ್ಲಿದ್ದು, ಯಾವುದೇ ಸಂದರ್ಭದಲ್ಲಿ ಅಪಾಯವನ್ನು ಎದುರಿಸುವಂತಾಗಿದ್ದು, ಅವುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಹಾಗೂ ಸುಮಾರು 40ಕ್ಕೂ ಹೆಚ್ಚು ಮನೆಗಳಿಗೆ ಈವರೆಗೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ ಇದರಿಂದ ಸಾರ್ವಜನಿಕರು ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ. ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಹೆಸ್ಕಾಂನ ಎಇಇ ಹಾಲೇಶ್ ಅಂತರವಳ್ಳಿ ವಿದ್ಯುತ್ ತಂತಿಗಳು ಕೆಳಮಟ್ಟದಲ್ಲಿರುವುದು ಗಮನಕ್ಕೆ ಬಂದಿದೆ. ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಸಂದರ್ಭದಲ್ಲಿ ಇವುಗಳನ್ನು ಎತ್ತರಿಸಲಾಗುವುದು. ಅಲ್ಲದೆ ಸೂಕ್ತ ದಾಖಲೆ ಪತ್ರಗಳನ್ನು ಸಲ್ಲಿಸಿದ ಬಳಿಕ 40 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದಾಗಿ ತಿಳಿಸಿದರು.
ಗ್ರಾಮಲ್ಲಿರುವ ಶಾಲೆಗಳಿಗೆ ಹೆಚ್ಚುವರಿಯಾಗಿ 2 ಕೊಠಡಿಗಳ ಅವಶ್ಯಕತೆಯಿದೆ. ಬಹುತೇಕ ಮಕ್ಕಳು ಶಾಲೆಯ ಹೊರ ಆವರಣದಲ್ಲಿ ಕುಳಿತು ಕಲಿಯುವಂತಾಗಿದೆ. ಕೂಡಲೇ ಮಂಜೂರು ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ಪ್ರಸನ್ನಕುಮಾರ ಮಕ್ಕಳ ಸಂಖ್ಯೆಗನುಗುಣವಾಗಿ ಈಗಾಗಲೇ ಕೊಠಡಿಗಳಿವೆ. ಅವಶ್ಯಕತೆಯಿದ್ದಲ್ಲಿ ಬರುವ ದಿನಗಳಲ್ಲಿ ಇನ್ನೆರಡು ಕೊಠಡಿಗಳನ್ನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.
ಗ್ರಾಮದಲ್ಲಿರುವ ಸ್ಮಶಾನವನ್ನು ಹದ್ದುಬಸ್ತ್ ಮಾಡಿ ಮೂಲಭೂತ ಸೌಕರ್ಯ ಒದಗಿಸಬೇಕು ಹಾಗೂ ಅದಕ್ಕೆ ಸಂಬಂಧಿಸಿದ ರಸ್ತೆ ಅಭಿವೃದ್ಧಿಪಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಇಒ ಎಸ್.ಆರ್. ಪಾಟೀಲ ಈಗಾಗಲೇ ಸ್ಮಶಾನದ ಅಭಿವೃದ್ಧಿಗೆ ಎನ್ಆರ್ಇಜಿ ಯೋಜನೆಯಡಿ ರು. 3 ಲಕ್ಷದ ಕ್ರಿಯಾಯೋಜನೆ ಸಿದ್ದಪಡಿಸಿದ್ದು, ಅನುಮೋದನೆಗಾಗಿ ಕಳುಹಿಸಿಕೊಡಲಾಗಿದೆ ಎಂದರು.
ಶಾಲಾ ಮೈದಾನ ಸಮತಟ್ಟುಗೊಳಿಸಿ ಮೈದಾನದ ಸುತ್ತಲೂ ಕಾಂಪೌಂಡ್ ನಿರ್ಮಿಸುವಂತೆ ಬೀರಪ್ಪ ಹಾವೇರಿ ಕೇಳಿದರು. ಇದಕ್ಕೆ ಉತ್ತರಿಸಿದ ಜಿಪಂ ಎಂಜಿನಿಯರ್ ಸುರೇಶ ಬೇಡರ ಕ್ರಿಯಾಯೋಜನೆ ಮಾಡಲಾಗಿದ್ದು, ಕೆಲವೇ ದಿನಗಳಲ್ಲಿ ಈ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.
ಗ್ರಾಪಂ ಅಧ್ಯಕ್ಷೆ ಸುಶೀಲಮ್ಮ ಹನುಮಾಪುರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ನೀಲಮ್ಮ ಸಣ್ಣಬಾರ್ಕಿ, ಸದಸ್ಯರಾದ ಗೌರಮ್ಮ ಮಟ್ಟಿಮನಿ, ಚನ್ನಪ್ಪ ಲಮಾಣಿ, ಕುರುವತ್ತೆಪ್ಪ, ಕರಬಸಪ್ಪ ಶಿರಗಂಬಿ, ಅಧಿಕಾರಿಗಳಾದ ನಟರಾಜ್, ಚಿದಾನಂದಪ್ಪ, ಆರ್.ವೈ. ಬೋಗಾರ, ಸಿ.ವಿ. ಧೂಳಪ್ಪನವರ, ಡಾ. ನಾಗರಾಜ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement