ಗ್ರಾಮೀಣ ಕ್ರೀಡೆ ಉಳಿಸಿ: ಸಲೀಂ
ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಡಿ. 8
ಹೋರಿ ಬೆದರಿಸುವ ಸ್ಪರ್ಧೆ ರೈತರ ಹಬ್ಬ. ತಾಂತ್ರಿಕ ಯುಗದಲ್ಲಿ ಗ್ರಾಮೀಣ ಕ್ರೀಡೆಗಳತ್ತ ಜನತೆ ಗಮನ ಕಡಿಮೆಯಾಗಿದ್ದು, ಯುವಕರು ಇವುಗಳನ್ನು ಉಳಿಸಿಕೊಳ್ಳಲು ಮುಂದಾಗಬೇಕೆಂದು ನೆಹರು ಯುವ ಕೇಂದ್ರದ ಮಹಾ ನಿರ್ದೇಶಕ ಸಲೀಂ ಅಹ್ಮದ್ ಕರೆ ನೀಡಿದರು.
ಪಟ್ಟಣದ ಎಪಿಎಂಸಿ ಮೈದಾನದಲ್ಲಿ ಜರುಗಿದ ಹೋರಿ ಬೆದರಿಸುವ ರಾಜ್ಯ ಮಟ್ಟದ ಸ್ಪರ್ಧೆ ಉದ್ಘಾಟಿಸಿದ ಅವರು, ಯುವ ಜನತೆ ಭ್ರಷ್ಟಾಚಾರದ ವಿರುದ್ಧ ಸಿಡಿದೇಳಬೇಕು, ದೇಶದ ಭವಿಷ್ಯ ಕಾಪಾಡಬೇಕು. ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಚಲನಚಿತ್ರ ನಟ, ಮಾಜಿ ಶಾಸಕ ಬಿ.ಸಿ. ಪಾಟೀಲ ಅಧ್ಯಕ್ಷತೆ ವಹಿಸಿ, ಕೃಷಿಕರಿಗೆ ಮನರಂಜನೆ ನೀಡುವ ಹೋರಿ ಬೆದರಿಸುವ ಹಬ್ಬದಲ್ಲಿ ಹೋರಿಗಳನ್ನು ಚೆನ್ನಾಗಿ ಅಲಂಕರಿಸಿ, ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಯುವಕರು ಆಸಕ್ತಿ ವಹಿಸಿ ಸ್ಥಗಿತಗೊಂಡಿದ್ದ ಸ್ಪರ್ಧೆಯನ್ನು ಈ ಬಾರಿ ಮತ್ತೆ ಸಂಘಟಿಸಿದ್ದಾರೆ ಎಂದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ಬಾಳಿಕಾಯಿ, ತಾಪಂ ಸದಸ್ಯ ಆರ್.ಎನ್. ಗಂಗೋಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಗೌಡ ಪಾಟೀಲ, ರಟ್ಟಿಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ, ಪಪಂ ಸದಸ್ಯರಾದ ಮಹ್ಮದ್ ಹುಸೇನ ವಡ್ಡಿನಕಟ್ಟಿ, ಕರವೇ ತಾಲೂಕಾಧ್ಯಕ್ಷ ಗಿರೀಶ ಬಾರ್ಕಿ, ಮುಖಂಡರಾದ ಬಿ.ಎಸ್. ಪಾಟೀಲ, ಸತೀಶ ನಾಡಿಗೇರ, ಶಂಭು ಹಂಸಬಾವಿ, ಗುರುಶಾಂತ ಯತ್ತಿನಹಳ್ಳಿ, ದುರುಗಪ್ಪ ನೀರಲಗಿ, ಮಂಜು ತಂಬಾಕದ, ಚಂದ್ರಶೇಖರ ಒಡೆಯರ, ಶಿವಲಿಂಗಪ್ಪ ಸೈನಿಕ, ಉಮೇಶ ಬಣಕಾರ, ಕುಮಾರ ಜವಳಿ ಪಾಲ್ಗೊಂಡಿದ್ದರು.