ಟ್ರ್ಯಾಕ್ಟರ್ ಡಿಕ್ಕಿ: ಬೈಕ್ನಲ್ಲಿದ್ದ ಇಬ್ಬರಿಗೆ ಗಾಯ
ರಾಣಿಬೆನ್ನೂರು: ನಗರದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭಾಗವಹಿಸಿ, ಸಂಜೆ ಊರಿಗೆ ತೆರಳುತ್ತಿದ್ದ ಬೀಗರ ಟ್ರ್ಯಾಕ್ಟರ್ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ, ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ನಗರದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಎಂಜಿನಿಯರಿಂಗ್ ಕಾಲೇಜಿನ ಎದುರು ಭಾನುವಾರ ನಡೆದಿದೆ. ಮೂಲತಃ ಬ್ಯಾಡಗಿ ತಾಲೂಕು ಮೋಟೆಬೆನ್ನೂರು ಗ್ರಾಮದ, ಸದ್ಯ ನಗರದ ಸಂಗಮ್ ವೃತ್ತದ ಸಮೀಪ ವಾಸವಾಗಿರುವ ಹರನಗಿರಿ ಎಂಬುವರ ಕುಟುಂಬದ ರಾಕೇಶ ಪ್ರಕಾಶ (19) ಹಾಗೂ ಹಿಂಬದಿಯಲ್ಲಿ ಕುಳಿತಿದ್ದ ನಗರದ ದೊಡ್ಡಪೇಟೆಯ ಯುವತಿ ವೀಣಾ ಬಳಿಗಾರ (15) ತೀವ್ರವಾಗಿ ಗಾಯಗೊಂಡಿದ್ದಾರೆ. ರಾಕೇಶನನ್ನು ದಾವಣಗೆರೆಯ ಸಿಟಿ ಸೆಂಟ್ರಲ್ ಆಸ್ಪತ್ರೆಗೆ ಹಾಗೂ ಯುವತಿಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ಪ್ರಕರಣ ದಾಖಲಿಸಿಕೊಂಡಿರುವ ಸಂಚಾರಿ ಠಾಣೆ ಪೊಲೀಸರು ತಿಳಿಸಿದ್ದಾರೆ.