ಹೋರಿ ತಿವಿತ: ಐವರಿಗೆ ಗಾಯ
ಹಿರೇಕೆರೂರು: ಪಟ್ಟಣದ ಎಪಿಎಂಸಿ ಆವರಣದಲ್ಲಿ ಜರುಗಿದ ಹೋರಿ ಬೆದರಿಸುವ ಕಾರ್ಯಕ್ರಮದಲ್ಲಿ 300ಕ್ಕೂ ಹೆಚ್ಚು ಹೋರಿಗಳು ಪಾಲ್ಗೊಂಡಿದ್ದವು. ಕಾರ್ಯಕ್ರಮ ವೀಕ್ಷಿಸಲು ಆಗಮಿಸಿದ್ದ ಕೆಲವರು ರಕ್ಷಣಾ ವ್ಯವಸ್ಥೆಯ ಕೊರತೆ ಕಾರಣದಿಂದ ಹೋರಿಗಳ ತಿವಿತ, ತುಳಿತದಿಂದ ಗಾಯಗೊಂಡಿದ್ದಾರೆ.
ಕಾರ್ಯಕ್ರಮಕ್ಕೂ ಮೊದಲೇ ತಾಲೂಕಿನ ಕಾರಗಿ ಗ್ರಾಮದ ರೈತ ಮತ್ತಪ್ಪ ಕಾರಗಿ ಗಾಯಗೊಂಡರು. ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ದಾವಣಗೆರೆಗೆ ಕಳುಹಿಸಲಾಯಿತು. ಮಧ್ಯಾಹ್ನ ಸ್ಪರ್ಧೆ ನೋಡುತ್ತ ನಿಂತಿದ್ದ ಶಿಕಾರಿಪುರದ ಸಂದೀಪ ಹಾಗೂ ರಮೇಶ, ಹಾನಗಲ್ಲಿನ ರಾಜಪ್ಪ ಹೋರಿಗಳ ಆಕ್ರಮಣದಿಂದ ಗಾಯಗೊಂಡರು. ಅವರಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೊನೆಗೆ ಚೆನ್ನಳ್ಳಿ ಗ್ರಾಮದ ರಮೇಶ ಎಂಬುವರೂ ಹೋರಿ ತಿವಿತದಿಂದ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ 40ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಸಾರ್ವಜನಿಕರ ಅಕ್ರೋಶ: ಪಟ್ಟಣದಲ್ಲಿ 2010ರಲ್ಲಿ ಹೋರಿ ಬೆದರಿಸುವ ಸ್ಪರ್ಧೆ ನಡೆದಾಗ ಇಬ್ಬರು ರೈತರು ಪ್ರಾಣ ಕಳೆದುಕೊಂಡಿದ್ದರು. ಹೀಗಾಗಿ, ಎರಡು ವರ್ಷ ಕಾರ್ಯಕ್ರಮ ಸ್ಥಗಿತಗೊಳಿಸಲಾಗಿತ್ತು. ಈ ಬಾರಿ ಮತ್ತೆ ರೈತರು, ಯುವಕರು ಗಾಯಗೊಂಡಿದ್ದರಿಂದ ಆಕ್ರೋಶಗೊಂಡ ಸಾರ್ವಜನಿಕರು ರವಿ ಉಣಕಲ್ ನೇತೃತ್ವದಲ್ಲಿ, ಹಬ್ಬವನ್ನು ತಕ್ಷಣವೇ ನಿಲ್ಲಿಸುವಂತೆ ಆಗ್ರಹಿಸಿ, ತಾಲೂಕು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದರು. ಗಾಯಗೊಂಡವರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.