ನಾಳೆ ಬೃಹತ್ ಪ್ರತಿಭಟನೆ
ಹಾನಗಲ್ಲ: ಹಾನಗಲ್ಲ ತಾಲೂಕು ಕಟ್ಟಡ ಕೂಲಿ ಕಾರ್ಮಿಕರ ಸಂಘ, ಗುತ್ತಿಗೆದಾರರ ಸಂಘ ಹಾಗೂ ಇಟ್ಟಂಗಿ ತಯಾರಕರ ಸಂಘ ಡಿ. 11ರಂದು ಹಾನಗಲ್ಲಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ತಮ್ಮ ಬೇಡಿಕೆ ಈಡೇರಿಕೆಗೆ ರಾಜ್ಯಪಾಲರಿಗೆ ಮನವಿ ಸಲ್ಲಿಸಲಿದ್ದಾರೆ. ಹಾನಗಲ್ಲ ತಾಲೂಕಿನಲ್ಲಿ ಕಟ್ಟಡ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮರಳು, ಜಲ್ಲಿಕಲ್ಲು, ರಬ್ಬಕಲ್ಲು, ಇಟ್ಟಂಗಿ, ಮಣ್ಣುಗಳ ಸರಬರಾಜನ್ನು ನಿರ್ಬಂಧಿಸಿರುವುದರಿಂದ ಕಟ್ಟಡ ಹಾಗೂ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ತೊಂದರೆಯಾಗಿದೆ. ಈ ಕಾರಣಕ್ಕೆ ಕಾರ್ಮಿಕರು ಕೆಲಸವಿಲ್ಲದೆ ಗುಳೇ ಹೋಗುತ್ತಿದ್ದಾರೆ. ಸರ್ಕಾರ ಸರಬರಾಜು ನಿರ್ಬಂಧವನ್ನ್ನು ತೆರವುಗೊಳಿಸಿ, ಕಟ್ಟಡ ನಿರ್ಮಾಣ ಸಾಮಗ್ರಿಗಳ ಸರಬರಾಜಿಗೆ ಅವಕಾಶ ನೀಡುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಲಿದ್ದಾರೆ. ಅಂದು 10 ಗಂಟೆಗೆ ನಗರದ ವಿರಕ್ತಮಠದಿಂದ ಹೊರಡುವ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕನಕ ವೃತ್ತದ ಮೂಲಕ ತಹಸೀಲ್ದಾರ್ ಕಚೇರಿ ತಲುಪಿ, ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸುವುದಾಗಿ ಸಂಘದ ಪ್ರಕಟಣೆ ತಿಳಿಸಿದೆ.
ಅರ್ಜಿ ಆಹ್ವಾನ
ಹಾವೇರಿ: ಜಿಲ್ಲೆಯ ಹಾವೇರಿ, ಹಿರೇಕೆರೂರು ಹಾಗೂ ಸವಣೂರು ತಾಲೂಕು ಕಚೇರಿಗಳಲ್ಲಿ ಸಕಾಲ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ಪದವೀಧರರಿಂದ ಡಿ. 16ರೊಳಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಯು ಕನಿಷ್ಠ ಪದವೀಧರರಾಗಿರಬೇಕು ಹಾಗೂ ಗಣಕಯಂತ್ರದಲ್ಲಿ ವ್ಯವಹರಿಸುವ ಪರಿಣಿತಿ ಹೊಂದಿರಬೇಕು. ಸ್ವಂತ ಲ್ಯಾಪ್‌ಟಾಪ್ ಡಾಟಾ ಕಾರ್ಡ್, ಪ್ರಿಂಡರ್, ಯುಪಿಎಸ್ ಹಾಗೂ ಸ್ಕ್ಯಾನರ್‌ಗಳನ್ನ್ನು ಹೊಂದಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ಮಾಸಿಕ ರು. 10,000 ಗೌರವಧನವನ್ನ್ನು ಆರು ತಿಂಗಳವರೆಗೆ ಮಾತ್ರ ನೀಡಲಾಗುವುದು. ನಂತರ ಆನ್‌ಲೈನ್ ಸೇವೆಯನ್ನು ನೀಡಿ ಸೇವಾ ಶುಲ್ಕ ಪಡೆದು ಸಹಾಯಕ ಕೇಂದ್ರಗಳನ್ನು ನಿರ್ವಹಿಸುವುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಾಹಿತಿ ತಂತ್ರಜ್ಞಾನ ಸಮಾಲೋಚಕ(ಸಕಾಲ) ವಿಜಯಕುಮಾರ ಡಿ.ಎಸ್. ಮೊ: 9742508496 ಸಂಪರ್ಕಿಸಬಹುದೆಂದು ಅಪರ ಜಿಲ್ಲಾಧಿಕಾರಿ ಶಶಿಧರ ಕುರೇರ ತಿಳಿಸಿದ್ದಾರೆ.
ಕೋಳಿ ಸಾಕಾಣಿಕೆ ತರಬೇತಿ
ಹಾವೇರಿ: ರಾಣಿಬೆನ್ನ್ನೂರು ತಾಲೂಕು ಹನುಮನಕಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಡಿ. 11ರಿಂದ 13ರ ವರೆಗೆ ಒಟ್ಟು ಮೂರು ದಿನಗಳ ಕೋಳಿ ಸಾಕಾಣಿಕೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ತರಬೇತಿಯಲ್ಲಿ ಭಾಗವಹಿಸುವ ರೈತ ಮತ್ತು ರೈತ ಮಹಿಳೆಯರಿಗೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ ಹಾಗೂ ಉಚಿತ ಊಟದ ವ್ಯವಸ್ಥೆ ಮಾಡಲಾಗುತ್ತದೆ. ತರಬೇತಿಗಳು ಆಯಾ ದಿನದಂದು ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗುತ್ತವೆ. ಆಸಕ್ತ ರೈತರು ಮತ್ತು ರೈತ ಮಹಿಳೆಯರು ಕಾರ್ಯಕ್ರಮ ಸಂಯೋಜಕರ ಮೊ: 9611994188ನ್ನು ಸಂಪರ್ಕಿಸಿ ಮುಂಚಿತವಾಗಿ ಹೆಸರು ನೋಂದಾಯಿಸಬೇಕು. ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು, 30 ತರಬೇತುದಾರರಿಗೆ ಮಾತ್ರ ಅವಕಾಶವಿರುತ್ತದೆ. ತರಬೇತಿ ಸದುಪಯೋಗ ಪಡೆದುಕೊಳ್ಳಬೇಕೆಂದು ಕಾರ್ಯಕ್ರಮ ಸಂಯೋಜಕರು ತಿಳಿಸಿದ್ದಾರೆ.