ಬೆಳೆ ವಿಮೆ ಪರಿಹಾರ ಸೊಸೈಟಿ ಮುಖಾಂತರ ನೀಡಿ
ರಾಣಿಬೆನ್ನೂರು: ತಾಲೂಕಿನ ರೈತರಿಗೆ ಸರ್ಕಾರದಿಂದ ನೀಡುವ ಬೆಳೆ ವಿಮೆಯ ಪರಿಹಾರದ ಹಣವನ್ನು ಗ್ರಾಮಾಂತರ ಪ್ರದೇಶಗಳಲ್ಲಿರುವ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಮತ್ತು ಸೊಸೈಟಿ ಮೂಲಕ ನೀಡಬೇಕೆಂದು ಒತ್ತಾಯಿಸಿ ತಾಲೂಕು ರೈತ ಸಂಘದ ನೇತೃತ್ವದಲ್ಲಿ ನೂರಾರು ಜನ ರೈತರು, ನಗರದ ಎಪಿಎಂಸಿ ಆವರಣದಲ್ಲಿರುವ ಕೆಸಿಸಿ ಬ್ಯಾಂಕ್‌ಗೆ ಮುತ್ತಿಗೆ ಹಾಕಿ ಪ್ರತಿಭಟಿಸಿ, ಬ್ಯಾಂಕ್ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ಪ್ರತಿಭಟಿನೆ ನೇತೃತ್ವ ವಹಿಸಿದ್ದ ತಾಲೂಕು ರೈತ ಸಂಘದ ಅಧ್ಯಕ್ಷ ಬಸವರಾಜಪ್ಪ ಕಡೂರು ಮಾತನಾಡಿ, ಸರ್ಕಾರ ರೈತರಿಗೆ ನೀಡುತ್ತಿರುವ ಬೆಳೆವಿಮೆ ಯಾತಕ್ಕೂ ಸಾಲದಾಗಿದೆ. ರೈತರು ಬಿತ್ತನೆಗಾಗಿ ಖರ್ಚು ಮಾಡಿರುವ ಹಣಕಿಂತ ಕಮ್ಮಿಯಾಗಿ ಸರ್ಕಾರ ಪರಿಹಾರ ನೀಡಿದೆ.
ಹತ್ತಿ ಮತ್ತು ಗೋವಿನ ಜೋಳ ಸೇರಿದಂತೆ ವಿವಿಧ ರೀತಿಯ ಬೆಳೆ ಬೆಳೆದು, ಸರ್ಕಾರ ನೀಡುತ್ತಿರುವ ಅಲ್ಪ ಪ್ರಮಾಣದ ಪರಿಹಾರದ ಹಣವನ್ನು ಪಡೆಯಲು ನಗರದಲ್ಲಿರುವ ಕೆಸಿಸಿ ಬ್ಯಾಂಕ್‌ಗೆ ಬರುವುದಕ್ಕೆ ತೊಂದರೆಯಾಗುತ್ತಿದ್ದು ಕೂಡಲೇ ಸರ್ಕಾರದಿಂದ ನೀಡುವ ಬೆಳೆ ವಿಮಾ ಹಣವನ್ನು ಗ್ರಾಮಾಂತರ ಪ್ರದೇಶಗಳಲ್ಲಿರುವ, ಗ್ರಾಮ ಸೇವಾ ಬ್ಯಾಂಕ್ ಮತ್ತು ವ್ಯವಸಾಯ ಸೇವಾ ಸಹಕಾರಿ ಸಂಘದ ಮೂಲಕ ವಿತರಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ರೈತ ಸಂಘದ ಮುಖಂಡರಾದ ಸುರೇಶಪ್ಪ ದುಳೆಹೂಳಿ, ಪ್ರಕಾಶ ಹರಿಯಾಳದವರ, ಖಂಡಪ್ಪ ಅಂಗಡಿ, ಸಿ.ವ್ಹಿ. ಗೌಡಪ್ರಗೌಡ್ರ, ಹಾಲೇಶ ನಾಗರಜ್ಜಿ, ಪುಂಡಲಿಕಪ್ಪ ಅಣ್ಣಪ್ಪಳವರ, ಚನ್ನಬಸಪ್ಪ ತೆಗ್ಗಿನ, ಸಹದೇವಗೌಡ ಗೌಡಪ್ಪಗೌಡ್ರ, ಎಚ್.ಕೆ. ಗುತ್ತಲ ಇದ್ದರು.