ಬೇಡಿಕೆ: ಕೆಸಿಸಿ ಬ್ಯಾಂಕ್ ಶಾಖೆಗೆ ಬೀಗ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಡಿ. 9
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮೂಲಕವೇ ಬೆಳೆವಿಮೆ ಹಣ ಬಿಡುಗಡೆ ಮಾಡುವಂತೆ ಹಾಗೂ ರೈತರ ಹಿತಾಸಕ್ತಿ ಕಾಪಾಡದೇ ಸರ್ವಾಧಿಕಾರಿ ಧೋರಣೆ ತೋರುತ್ತಿರುವ ಕೆಸಿಸಿ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕರನ್ನು ಕೂಡಲೇ ವಜಾಗೊಳಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ತಾಲೂಕು ಘಟಕದ ಕಾರ್ಯಕರ್ತರು, ಸಹಕಾರಿ ಸಂಘಗಳ ಆಡಳಿತ ಮಂಡಳಿ ಸದಸ್ಯರು ಸೋಮವಾರ ಕೆಸಿಸಿ ಬ್ಯಾಂಕ್ನ ಸ್ಥಳೀಯ ಶಾಖೆಗೆ ಬೀಗಮುದ್ರೆ ಜಡಿದು ಸುಮಾರು 6 ತಾಸಿಗೂ ಅಧಿಕ ಕಾಲ ಧರಣಿ ನಡೆಸಿದರು.
ಬೆಳಗ್ಗೆ ಕೆಸಿಸಿ ಬ್ಯಾಂಕ್ ಬಳಿ ಜಮಾಯಿಸಿದ ನೂರಾರು ಕಾರ್ಯಕರ್ತರು ಮೊದಲು ಶಾಖೆಗೆ ಬೀಗಮುದ್ರೆ ಜಡಿದರಲ್ಲದೇ ಬಳಿಕ ಗೇಟಿನ ಮುಂಭಾಗದಲ್ಲಿ ಧರಣಿ ಕುಳಿತು ಪ್ರತಿಭಟನೆ ನಡೆಸಿದರು. ಈ ಸಂದರ್ಭ ಕೆಸಿಸಿ ವ್ಯವಸ್ಥಾಪಕ ನಿರ್ದೇಶಕ ಅಶೋಕ ಮೊರಬದ ಹಾಗೂ ಆಡಳಿತ ಮಂಡಳಿ ವಿರುದ್ಧ ಘೋಷಣೆಗಳನ್ನು ಹಾಕಿದರು.
ರೈತರ ತೀರ್ಮಾನವೇ ಅಂತಿಮ: ಪ್ರತಿಭಟನಾಕಾರರನ್ನುದ್ದೇಶಿಸಿ ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿ, ಸರ್ಕಾರದ ವಿರುದ್ಧ ಹೋರಾಟ ಮಾಡಿ ಬೆಳೆವಿಮೆ ಬಿಡುಗಡೆ ಮಾಡಿಸಿಕೊಳ್ಳಲಾಗಿದೆ. ಆದರೆ, ಇದೀಗ ಕೆಸಿಸಿ ವ್ಯವಸ್ಥಾಪಕ ನಿರ್ದೇಶಕ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವ ಮೂಲಕ ರೈತರಿಗೆ ಹಣ ವಿತರಣೆ ಮಾಡುವಲ್ಲಿ ವಿಳಂಬ ಧೋರಣೆ ತಳೆದಿದ್ದಾರೆ ಎಂದರು.
ದೇಶದಲ್ಲಿ ರೈತರ ತೀರ್ಮಾನವೇ ಅಂತಿಮವಾಗಬೇಕು. ಅನ್ನದಾತನ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುವುದನ್ನು ರೈತ ಸಂಘವು ಎಂದಿಗೂ ಸಹಿಸುವುದಿಲ್ಲ. ಅಲ್ಲದೇ ಅಂತಹ ಯಾವುದೇ ಶಕ್ತಿಯಿರಲಿ ಅದರ ವಿರುದ್ಧ ಹೋರಾಟ ನಿಶ್ಚಿತವೆಂದರು.
ಅಮಾನತ್ ಖಾತೆಯಲ್ಲಿ ಹಣವೇಕೆ?: ಕೆಸಿಸಿ ಬ್ಯಾಂಕ್ನ ನಿರ್ದೇಶಕರು ಆದೇಶವೊಂದನ್ನು ಹೊರಡಿಸುವ ಮೂಲಕ ರೈತರನ್ನು ಪೇಚಿಗೆ ಸಿಲುಕಿಸಿದ್ದಾರೆ. ಸಹಕಾರಿ ಸಂಘದ ಕಾರ್ಯದರ್ಶಿಗಳನ್ನು ಸಂಶಯಾಸ್ಪದವಾಗಿ ಉಲ್ಲೇಖಿಸಿರುವುದು ವಿಪರ್ಯಾಸ ಅಥವಾ ಉಲ್ಲೇಖದಲ್ಲಿ ಯಾವುದೇ ಪ್ರಕರಣವನ್ನು ದಾಖಲಿಸಿಲ್ಲ. ಬೆಳೆವಿಮೆ ತುಂಬುವ ಸಂದರ್ಭ ಸಹಕಾರಿ ಸಂಘಗಳನ್ನು ಬಳಸಿಕೊಂಡ ಕೆಸಿಸಿ ಬ್ಯಾಂಕ್ ಬಿಡುಗಡೆಯಾದ ಬೆಳೆವಿಮೆ ಹಣವನ್ನು ಸಹಕಾರಿ ಸಂಘದ ಮೂಲಕ ರೈತರಿಗೆ ವಿತರಿಸದೇ ಕೆಸಿಸಿ ಬ್ಯಾಂಕ್ನ ಅಮಾನತ್ ಖಾತೆಯಲ್ಲಿ ಇಟ್ಟುಕೊಂಡಿದೆ.
ರೈತರ ಬದುಕಿನ ಜತೆ ಚೆಲ್ಲಾಟವಾಡುತ್ತಿರುವುದನ್ನು ನಿರ್ದೇಶಕರ ಕಾರ್ಯವೈಖರಿ ಖಂಡಿಸಿದರು.
ಸಿಬ್ಬಂದಿ ಇದೆಯೇ?: ಸುಮಾರು 21 ಸಾವಿರಕ್ಕೂ ಹೆಚ್ಚು ಬೆಳೆವಿಮೆ ಫಲಾನುಭವಿಗಳಿದ್ದು, ಸ್ಥಳೀಯ ಶಾಖೆಯಲ್ಲಿ ಕೇವಲ 4 ಜನ ಸಿಬ್ಬಂದಿಗಳಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದು ವರ್ಷ ಗತಿಸಿದರೂ ಬ್ಯಾಂಕಿನಿಂದ ರೈತರಿಗೆ ಹಣ ಬಟವಡೆ ಸಾಧ್ಯವಿಲ್ಲ. ಅಲ್ಲದೇ ತಾಲೂಕ ಕೇಂದ್ರದಲ್ಲಿರುವ ಶಾಖೆಗೆ ಬಂದು ಹೋಗಲು ಸುಮಾರು ರು. 200ಗಳಿಗೂ ಹೆಚ್ಚು ಹಣ ವ್ಯಯವಾಗುತ್ತಿದೆ.
ಸಂಧಾನ ವಿಫಲ: ಬೀಗಮದ್ರೆ ಹಾಕಿ ಪ್ರತಿಭಟನೆ ನಡೆಸುತ್ತಿರುವ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಶಿವಶಂಕರ ನಾಯಕ್ ಬ್ಯಾಂಕಿನ ಅಧಿಕಾರಿಗಳು ಹಾಗೂ ರೈತರ ಜತೆ ಪ್ರತ್ಯೇಕ ಸಭೆಗಳನ್ನು ನಡೆಸಿದರು. ಮೂಲದ ಪ್ರಕಾರ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ನಡೆದುಕೊಳ್ಳುವುದಾಗಿ ಬ್ಯಾಂಕಿನ ಅಧಿಕಾರಿಗಳು ತಿಳಿಸಿದರಲ್ಲದೇ, ಇಂದಿನ ಸ್ಥಿತಿಯೇ ಮುಂದುವರಿದಲ್ಲಿ ಜನರಿಗೆ ತೊಂದರೆ ಅನುಭವಿಸಬೇಕಾಗುತ್ತದೆ ಎಂಬ ವಿಷಯವನ್ನು ತಹಸೀಲ್ದಾರ್ ಗಮನಕ್ಕೆ ತಂದರು ಎನ್ನಲಾಗಿದೆ.
ಮುಂದುವರಿದ ಧರಣಿ: ಬ್ಯಾಂಕಿನ ವ್ಯವಸ್ಥಾಪಕರ ಹಠಮಾರಿ ಧೋರಣೆಯಿಂದ ಆಕ್ರೋಶಗೊಂಡ ರೈತರು ನಾಳೆಯೂ ಬೀಗಮುದ್ರೆ ಜಡಿದು ಧರಣಿ ನಡೆಸಲು ನಿರ್ಧರಿಸಿದರು, ಬಹುಶಃ ಹೋರಾಟ ತೀವ್ರಗೊಳ್ಳುವ ನಿರೀಕ್ಷೆಯಿದ್ದು, ಇಂದು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸೇರುವ ನಿರೀಕ್ಷೆಯಿದೆ. ಸಿಪಿಐ ಹಾಲಮೂರ್ತಿ, ಪಿಎಸ್ಐಗಳಾದ ಗಿರೀಶ್ ಮತ್ತು ಮಹಾಂತೇಶ್ ಸೂಕ್ತ ಭಧ್ರತೆ ಒದಗಿಸಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಂಡರು.
ಚಿಕ್ಕಪ್ಪ ಛತ್ರದ, ಬಸವರಾಜ ಸಂಕಣ್ಣನವರ, ದಿಲೀಪ್ಕುಮಾರ ಮೇಗಳಮನಿ, ಚನ್ನವೀರಗೌಡ ಬುಡ್ಡನಗೌಡ್ರ, ಡಾ. ಕೆ.ವಿ. ದೊಡ್ಡಗೌಡ್ರ, ಕೆಸಿಸಿ ಬ್ಯಾಂಕ್ ನಿರ್ದೇಶಕ ಶಿವಪ್ಪ ಮರಡಿ, ಮಂಜು ತೋಟದ, ಶಂಭು ಬಿದರಿ, ಶಿವಪ್ಪ ಬಣಕಾರ, ಮೌನೇಶ್ ಕಮ್ಮಾರ, ಕನ್ನಪ್ಪ ಪಡಿಯಣ್ಣನವರ ಇನ್ನಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.