ಸಂಚಾರಿ ಪೊಲೀಸ್ ಠಾಣೆ ಆರಂಭಿಸಿ
ಹಾವೇರಿ ಜಿಲ್ಲೆಯಾಗಿ 15 ವರ್ಷ ಕಳೆದಿದ್ದು, ಜಿಲ್ಲಾ ಕೇಂದ್ರದ ಜನಸಂಖ್ಯೆ 65 ಸಾವಿರಕ್ಕೂ ಹೆಚ್ಚಿದೆ. ಜನಸಂಖ್ಯೆಯ ಜತೆಗೆ ವಾಹನಗಳ ಸಂಖ್ಯೆಯೂ ಅಧಿಕಗೊಂಡಿದೆ. ಆದರೆ ನಗರದಲ್ಲಿ ಸುಗಮ ಸಂಚಾರಕ್ಕೆ ಇದುವರೆಗೆ ಸಂಚಾರಿ ಪೊಲೀಸ್ ಠಾಣೆ ಆರಂಭಿಸದೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
ಪೊಲೀಸ್ ಇಲಾಖೆಯಲ್ಲೂ ಸಿಬ್ಬಂದಿ ಕೊರತೆ ಇರುವುದರಿಂದ ಸಂಚಾರ ವ್ಯವಸ್ಥೆ ನೋಡಿಕೊಳ್ಳಲು ಕಷ್ಟವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಯೂ ನಗರದ ಮಧ್ಯೆ ಹಾದು ಹೋಗಿರುವುದರಿಂದ ಭಾರೀ ವಾಹನ, ಕಾರು, ದ್ವಿಚಕ್ರ ವಾಹನಗಳು ದಿನದ 24 ಗಂಟೆಗಳ ಕಾಲವೂ ಸಂಚರಿಸುತ್ತಿರುತ್ತವೆ. ಸಂಚಾರ ದಟ್ಟಣೆ ಅಧಿಕಗೊಂಡಿದ್ದು, ಅಪಘಾತ ಪ್ರಕರಣಗಳೂ ಹೆಚ್ಚುತ್ತಿವೆ. ಆದ್ದರಿಂದ ಸುಗಮ ಸಂಚಾರ ವ್ಯವಸ್ಥೆ ಕೈಗೊಳ್ಳಲು ಹಾವೇರಿ ನಗರದಲ್ಲಿ ಸಂಚಾರಿ ಪೊಲೀಸ್ ಠಾಣೆ ಆರಂಭಿಸುವುದು ತುರ್ತು ಅಗತ್ಯವಾಗಿದೆ. ನಗರದ ಪ್ರಮುಖ ಸರ್ಕಲ್‌ಗಳಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿ ಕೆಲವು ವಾಹನಗಳು ಸಾಗುತ್ತಿರುತ್ತವೆ. ಅಂಥವುಗಳಿಗೆ ಕಡಿವಾಣ ಹಾಕಲು ಈಗಿರುವ ಪೊಲೀಸ್ ಸಿಬ್ಬಂದಿಯಿಂದ ಸಾಧ್ಯವಾಗುತ್ತಿಲ್ಲ. ಅಲ್ಲದೆ, ಸಂಚಾರಿ ನಿಯಮ ಪಾಲನೆಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲೂ ಆಗುತ್ತಿಲ್ಲ. ಇದರಿಂದ ಚಾಲನಾ ಪರವಾನಗಿ ಇಲ್ಲದೆ, ಅಗತ್ಯ ದಾಖಲೆ ಇಲ್ಲದೆ ವಾಹನ ಓಡಿಸುತ್ತಿದ್ದರೂ ಆ ಬಗ್ಗೆ ಗಮನ ನೀಡಲು ಆಗುತ್ತಿಲ್ಲ. ಸಂಚಾರಿ ಪೊಲೀಸ್ ಠಾಣೆ ಮಂಜೂರಾಗಿ, ಅಗತ್ಯ ಸಿಬ್ಬಂದಿ ನಿಯೋಜನೆಯಾದರೆ ಸಂಚಾರಿ ನಿಯಮಗಳ ಅನುಷ್ಠಾನಕ್ಕೆ ಸಹಕಾರಿಯಾಗುತ್ತದೆ. ಸರ್ಕಾರ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಹಾವೇರಿ ನಗರಕ್ಕೆ ಸಂಚಾರಿ ಪೊಲೀಸ್ ಠಾಣೆ ಮಂಜೂರು ಮಾಡಬೇಕು. ಸಂಚಾರ ವ್ಯವಸ್ಥೆ ಸಮರ್ಪಕವಾಗಿ ಆಗುವಂತೆ ನೋಡಿಕೊಂಡು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಮುಂದಾಗಬೇಕು.
- ಪ್ರದೀಪ ಮುಳ್ಳೂರ, ವಿದ್ಯಾನಗರ, ಹಾವೇರಿ