ಸಮರ್ಪಕ ಸೀಮೆಎಣ್ಣೆ, ವಿದ್ಯುತ್ ಕಲ್ಪಿಸಿ
ಶಿಗ್ಗಾಂವಿ: ಸಿಲಿಂಡರ್ ಬಳಕೆದಾರರಿಗೂ ಸೀಮೆ ಎಣ್ಣೆ ವಿತರಿಸಬೇಕು, ವಿತರಿಸಲು ಕ್ರಮ ಜರುಗಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ನಿತ್ಯ ವಿದ್ಯುತ್ ಸಮಸ್ಯೆ ಎದುರಾಗುತ್ತಿದ್ದು, ಅದರಿಂದ ಪಾರಾಗಲು ಸೀಮೆಎಣ್ಣೆ ಅತಿ ಅವಶ್ಯಕ ವಸ್ತು ಆಗಿದೆ ಎಂದು ಆಗ್ರಹಿಸಿದ ತಾಲೂಕಿನ ತಡಸ ಗ್ರಾಮದ ವಿವಿಧ ಮಹಿಳಾ ಸಂಘಟನೆಯ ನೂರಾರು ಮಹಿಳೆಯರು ಸೋಮವಾರ ಗ್ರಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪಟ್ಟು: ಗ್ರಾಮ ಪಂಚಾಯತಿ ಕಾರ್ಯಾಲಯ ಎದುರು ಜಮಾಯಿಸಿದ್ದ ನೂರಾರು ಮಹಿಳೆಯರು ಸಿಲಿಂಡರ್ ಹೊಂದಿರುವ ಪಡಿತರ ಕಾರ್ಡಿಗೂ ಸೀಮೆಎಣ್ಣೆ ವಿತರಿಸಲು ಕ್ರಮ ಜರುಗಿಸಬೇಕು. ಸೀಮೆ ಎಣ್ಣೆ ದೊರೆಯದೆ ಸಿಲಿಂಡರ್ ಬಳಕೆದಾರರು ನಿತ್ಯ ಹಲವಾರು ಸಮಸ್ಯೆಗಳನ್ನು ಎದುರಿಸುವಂತಾಗಿದೆ.
ರಾತ್ರಿ ಹೊತ್ತು ವಿದ್ಯುತ್ ಕೈ ಕೊಡುತ್ತಿರುವುದರಿಂದ ದೀಪ ಹಚ್ಚಲು ಬೇರೆಯವರ ಹತ್ತಿರ ಸೀಮೆಎಣ್ಣೆಯನ್ನು ಹೆಚ್ಚು ಹಣ ಕೊಟ್ಟು ಖರೀದಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದ ಮಹಿಳೆಯರು, ಪ್ರತಿಭಟನಾ ಸ್ಥಳಕ್ಕೆ ಆಹಾರ ಇಲಾಖೆ ಅಧಿಕಾರಿಗಳು ಆಗಮಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂದು ಪಟ್ಟು ಹಿಡಿದರು.
ಪ್ರತಿಭಟನೆ ಹಿಂತೆಗೆತ: ನಂತರ ಸ್ಥಳಕ್ಕೆ ಆಗಮಿಸಿದ ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಸೊರಟಿ, ಉಪ ತಹಸೀಲ್ದಾರ್ ಬಸವರಾಜ ಹೊಂಕಣ್ಣವರ, ಅಭಿವೃದ್ಧಿ ಅಧಿಕಾರಿ ಬಿ.ಕೆ. ಸಂಶಿ ತಲೆದೂರಿರುವ ಸಮಸ್ಯೆಗೆ ಶೀಘ್ರ ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಸಂಭಂಧಪಟ್ಟ ಇಲಾಖೆ ಅಧಿಕಾರಿಗಳು ಸೂಕ್ತ ಭರವಸೆ ನೀಡಿದ ನಂತರ ಪ್ರತಿಭಟನೆಯಿಂದ ಹಿಂದೆ ಸರಿಯುವುದಾಗಿ ಹೇಳಿದರು.
ಸೀಮೆಎಣ್ಣೆ ಹೆಚ್ಚಳ: ಸಿಲಿಂಡರ್ ಬಳಕೆದಾರರಿಗೆ ನಿಯಮಾನುಸಾರ ಸೀಮೆಎಣ್ಣೆ ವಿತರಿಸಲು ಬರುವುದಿಲ್ಲ ಡಿ. 11ರಂದು ಗ್ರಾಪಂ ಅಧ್ಯಕ್ಷರ ನೇತೃತ್ವದಲ್ಲಿ ಮಹಿಳಾ ಸಂಘದ ಮುಖಂಡರೊಂದಿಗೆ ಶಿಗ್ಗಾಂವಿಯ ತಹಸೀಲ್ದಾರ್ ಕಚೇರಿಗೆ ತೆರಳಿ ಉಪ ವಿಭಾಗಾಧಿಕಾರಿಗೆ ಮನವಿ ನೀಡಿ ಹೆಚ್ಚಿನ ಸೀಮೆಎಣ್ಣೆ ಮಂಜೂರು ಮಾಡಲು ವಿನಂತಿಸುವುದು ನಂತರ ಜಿಲ್ಲಾಧಿಕಾರಿಗಳಿಗೂ ಈ ಕುರಿತು ಮನವಿ ನೀಡಲು ಪ್ರತಿಭಟನಾಕಾರರು ಸಮ್ಮತಿ ಸೂಚಿಸಿದರು.
ಬಳಿಕ ಸ್ಥಳಕ್ಕಾಗಮಿಸಿದ ಆಹಾರ ನಿರೀಕ್ಷಕ ಎಸ್.ಎ. ಚಪ್ಪಳಗಾವಿ ಮಾತನಾಡಿ, ತಡಸ ಗ್ರಾಪಂ ವ್ಯಾಪ್ತಿಯಲ್ಲಿ 336 ಎಪಿಎಲ್ ಕಾರ್ಡುಗಳಿಗೆ 1008 ಲೀಟರ್, 1530 ಬಿಪಿಎಲ್, ಅಂತ್ಯೋದಯ ಕಾರ್ಡುದಾರರಿಗೆ 7650 ಲೀಟರ್ ಒಟ್ಟು 8658 ಲೀಟರ್ ಸೀಮೆಎಣ್ಣೆಯನ್ನು ಪ್ರತಿ ತಿಂಗಳು ವಿತರಿಸಲಾಗುತ್ತಿದೆ.
ಅಂದಾಜು 500ಕ್ಕಿಂತ ಹೆಚ್ಚು ಸಿಲಿಂಡರ್ ಬಳಕೆದಾರರಿದ್ದು, ಅವರಿಗೆ ಸೀಮೆಎಣ್ಣೆ ನೀಡಲಾಗುತಿಲ್ಲ. ಅವರು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳ ಗ್ರಾಮೀಣ ಪ್ರದೇಶದ ಸಿಲಿಂಡರ್ ಗ್ರಾಹಕರಿಗೂ 3 ಲೀಟರ್ ಸೀಮೆಎಣ್ಣೆ ವಿತರಿಸಲು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕವಿತಾ ಶೆಟ್ಟರ್, ಶೋಭಾ ಕುಸುಗಲ್, ನಿರ್ಮಲಾ ಪಾಟೀಲ್, ಮಂಜುಳಾ ಕಮ್ಮಾರ, ಶಕುಂತಲಾ ಕುಸುಗಲ್, ಅಕ್ಕಮ್ಮ ಕೋಟಿ, ತುಳಸಮ್ಮ ಟಂಗೋಜಿ, ಉಷಾ ನವಲೂರ, ವಿಜಯಲಕ್ಷ್ಮೀ ಮೊಗದ, ಸವಿತಾ ಹೆರಾಪುರ, ಪದ್ಮಾವತಿ ಪಾಟೀಲ್, ಸುಶೀಲಾ ಪುಜಾರ, ಸಾವಕ್ಕ ಹೊನ್ನಳ್ಳಿ, ಸೂನಮ್ಮ ಪವಾರ, ಗೌರವ್ವ ಗರಗದ, ಬಸಣ್ಣೇವ್ವ ಪಾಟೀಲ್, ಪಾರವ್ವ ರಾಮನಕೊಪ್ಪ, ತಾಪಂ ಮಾಜಿ ಸದಸ್ಯ ಕಿರಣ ಅವರಾದಿ, ಗ್ರಾಂಪಂ ಮಾಜಿ ಅಧ್ಯಕ್ಷ ಜಿ.ಸಿ. ವಾರದ, ಮಾಜಿ ಉಪಾಧ್ಯಕ್ಷ ಪಾರ್ರ್ಶ್ವನಾಥ ಕೋಟಿ, ಹೇಮಂತಕುಮಾರ ದೇಟಿನ, ಕೃಷ್ಣಾ ಚೌಡಾಳ, ಮಲ್ಲಪ್ಪ ಗುದೆನ್ನ್ನವರ, ಯಲ್ಲಪ್ಪ ಚಲವಾದಿ, ಯಲ್ಲಪ್ಪ ತಿಮ್ಮಾಪೂರ, ಜಿನ್ನಪ್ಪ ಕೋಟಿ, ಬುಡ್ಡೆಸಾಬ ಕಲಗಟಗಿ ಮತ್ತಿತರರು ಪ್ರತಿಭಟನೆಯಲ್ಲಿದ್ದರು.