ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಬೆಂಕಿ: ರು. 10 ಲಕ್ಷದ ಕಾಳು-ಕಡಿ ಭಸ್ಮ

Mainashree
Updated On : 11 Dec 2013, 11:47 am

ಬ್ಯಾಡಗಿ: ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ರು. 10 ಲಕ್ಷ ಮೌಲ್ಯದ ಕಾಳಿನ ಹಾಗೂ ಮೇವಿನ ಬಣವೆಗಳು ಬೆಂಕಿಗೆ ಆಹುತಿಯಾದ ಘಟನೆ ಮೋಟೆಬೆನ್ನೂರು ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಬಣವೆಗಳು ಮಲ್ಲಿಕಾರ್ಜುನ ಶಿವಪ್ಪ ಬೆಳವಿಗಿ ಎಂಬುವರಿಗೆ ಸೇರಿದ್ದೆಂದು ತಿಳಿದು ಬಂದಿದೆ. ಗ್ರಾಮಸ್ಥರು ಬೆಂಕಿ ನಂದಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಬಳಿಕ ಹಾವೇರಿ ಮತ್ತು ಬ್ಯಾಡಗಿ ಅಗ್ನಿಶಾಮಕ ಠಾಣೆಯ 3 ವಾಹನಗಳು ಸುಮಾರು ಆರು ತಾಸು ಎಡೆಬಿಡದೆ ಶ್ರಮಿಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ಬೆಂಕಿ ನಿಯಂತ್ರಣಕ್ಕೆ ಬರುವಷ್ಟರಲ್ಲಿ ಬಣವೆಗಳು ಸಂಪೂರ್ಣ ಭಸ್ಮವಾಗಿದ್ದವು. ಗ್ರಾಮಕ್ಕೆ ಕೂಗಳತೆ ದೂರದಲ್ಲಿ ಬಣವೆಗಳಿದ್ದವು. ಬೆಂಕಿ ತನ್ನ ಕೆನ್ನಾಲಿಗೆಗಳನ್ನು ಇನ್ನಷ್ಟು ಚಾಚಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು.
ಮುಂಗಾರು ಬೆಳೆಯ ಕಾಳುಗಳನ್ನು ಒಕ್ಕುವ ಕೆಲಸ ಭರದಿಂದ ಸಾಗಿತ್ತು. ಮಲ್ಲಿಕಾರ್ಜುನ ಅವರೂ 25 ಎಕರೆಯಲ್ಲಿ ಬೆಳೆದಿದ್ದ 150 ಚೀಲದಷ್ಟು ಉದ್ದು, 100 ಚೀಲ ಸೋಯಾಬಿನ್ ಹಾಗೂ ಐದು ಮೇವಿನ ಬಣವೆಗಳು ಸಂಪೂರ್ಣ ಭಸ್ಮವಾಗಿವೆ.
ಅಧಿಕಾರಿಗಳ ಭೇಟಿ: ಮಂಗಳವಾರ ತಹಸೀಲ್ದಾರ್ ಶಿವಶಂಕರ ನಾಯಕ್, ಸಹಾಯಕ ಕೃಷಿ ನಿರ್ದೇಶಕ ಟಿ.ಎಚ್. ನಟರಾಜ, ಉಪತಹಸೀಲ್ದಾರ್ ಬಿ.ಎಸ್. ಕೊಪ್ಪದ, ಕಂದಾಯ ನಿರೀಕ್ಷಕ ಬಣಕಾರ, ಗ್ರಾಮ ಲೆಕ್ಕಾಧಿಕಾರಿ ತೊಪ್ಪಲದ ಹಾಗೂ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ದುರ್ದೈವಿ ರೈತನಿಗೆ ಸಾಂತ್ವನ ಹೇಳಿ, ಸರ್ಕಾರದಿಂದ ಬರಬೇಕಾದ ಪರಿಹಾರ ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದರು. ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement