ಬ್ಯಾಡಗಿ: ಮೋಜಣಿ ಆರಂಭ
ಬ್ಯಾಡಗಿ: ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರ ಒತ್ತಾಯಕ್ಕೆ ಮಣಿದ ಆಡಳಿತ ಕೊನೆಗೂ ಮುಖ್ಯರಸ್ತೆ ಅಗಲೀಕರಣಕ್ಕೆ ಮುಂದಾಗಿದ್ದು, ಮಂಗಳವಾರ ಸರ್ವೆ ಕಾರ್ಯಕ್ಕೆ ಚಾಲನೆ ನೀಡಿದೆ.
ಮುಖ್ಯರಸ್ತೆ ಅಗಲೀಕರಣದ ಕುರಿತು ಪರ-ವಿರೋಧಗಳ ಮಧ್ಯೆಯೇ ಪುರಸಭೆ, ಲೋಕೋಪಯೋಗಿ ಹಾಗೂ ಕಂದಾಯ ಇಲಾಖೆಯ (ಮೋಜಣಿ ವಿಭಾಗ) ಅಧಿಕಾರಿಗಳು ಜಂಟಿಯಾಗಿ ಮೋಜಣಿ ಕಾರ್ಯ ಆರಂಭಿಸಿದ್ದಾರೆ. ವಾಣಿಜ್ಯ ಕೇಂದ್ರ ಬ್ಯಾಡಗಿ ಪಟ್ಟಣದಲ್ಲಿ ಮೆಣಸಿನಕಾಯಿ ವಹಿವಾಟಿನ ಹಿನ್ನೆಲೆಯಲ್ಲಿ ಬೃಹತ್ ವಾಹನಗಳು ಸಾವಿರಾರು ಸಂಖ್ಯೆಯಲ್ಲಿ ಬರುತ್ತವೆ. ಕಿರಿದಾದ ಮುಖ್ಯ ರಸ್ತೆಯಲ್ಲಿ ಆಗಾಗ ಸುಗಮ ಸಂಚಾರಕ್ಕೆ ಅಡ್ಡಿಯಾಗಿ, ಜನರು ಬೇಸತ್ತಿದ್ದರು.
ಪಟ್ಟಣದಲ್ಲಿ ಹಾದು ಹೋಗಿರುವ ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿ-136ರಲ್ಲಿ ಅತಿಕ್ರಮಣ ತೆರವುಗೊಳಿಸಿ ದ್ವಿಮುಖ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಮುಖ್ಯರಸ್ತೆ ಅಗಲೀಕರಣ ಹೋರಾಟ ಸಮಿತಿಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಆಮರಣಾಂತ ಉಪವಾಸ ಹಮ್ಮಿಕೊಂಡಿದ್ದರು. ಮೈ ಮೇಲೆ ಸಗಣಿ ಸುರುವಿಕೊಂಡು ಪ್ರತಿಭಟನೆಯನ್ನೂ ಮಾಡಿದ್ದರು. ಆಟೋ ಚಾಲಕನೊಬ್ಬ ಆತ್ಮಾಹುತಿಗೆ ಯತ್ನಿಸಿದ್ದ. ಅಧಿಕಾರಿಗಳ ಭರವಸೆ ಹಿನ್ನೆಲೆಯಲ್ಲಿ ಸತ್ಯಾಗ್ರಹ ಸ್ಥಗಿತಗೊಳಿಸಲಾಗಿತ್ತು.
ಮುಖ್ಯರಸ್ತೆಯ ಕೆಲ ವ್ಯಾಪಾರಸ್ಥರು ಬೈಪಾಸ್ ನಿರ್ಮಿಸಿ, ವಾಹನ ದಟ್ಟಣೆಗೆ ಕಡಿವಾಣ ಹಾಕಿ. ಮುಖ್ಯರಸ್ತೆಯನ್ನೇ ಅಗಲೀಕರಣ ಮಾಡಿದರೆ ಸಣ್ಣ ವ್ಯಾಪಾರಿಗಳಿಗೆ ತೊಂದರೆಯಾಗುತ್ತದೆ ಎಂದು, ಅಗಲೀಕರಣ ವಿರೋಧಿಸಿ ಮನವಿ ಸಲ್ಲಿಸಿದ್ದರು.
ಮೋಜಣಿ ವೇಳೆ ಲೋಕೋಪಯೋಗಿ ಇಲಾಖೆ ಕಿರಿಯ ಅಭಿಯಂತ ಶ್ಯಾಡಂಬಿ, ಮೋಜಣಿ ಅಧಿಕಾರಿಗಳಾದ ಕನ್ನಮ್ಮನವರ, ಚಕ್ರಸಾಲಿ, ಪುರಸಭೆಯ ಎಂ.ಎಫ್. ಬೋವಿ, ವಾರದ ಇದ್ದರು.